

ಶನಿವಾರ ಕೋಲ್ಕತ್ತಾದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಐಪಿಎಲ್ 2026ನೇ ಪಂದ್ಯದ ಟಾಸ್ ಸಮಯದಲ್ಲಿ ಕ್ರಿಕೆಟಿಗ-ಕಮೆಂಟೇಟರ್ ರವಿಶಾಸ್ತ್ರಿ ಲೈವ್ ವೇಳೆಯೇ ಎಡವಟ್ಟು ಮಾಡಿದ್ದಾರೆ. ಜಿಟಿ ನಾಯಕ ಶುಭಮನ್ ಗಿಲ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ನಂತರದ ಸಂವಾದದ ಸಮಯದಲ್ಲಿ, ಭಾರತದ ಮಾಜಿ ನಾಯಕ ರವಿಶಾಸ್ತ್ರಿ ಗುಜರಾತ್ ಈಗಾಗಲೇ ಐಪಿಎಲ್ 2026ರ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ ಎಂದು ತಪ್ಪಾಗಿ ಹೇಳಿದರು. 'ನಿಮ್ಮ ತಂಡದ ಮುಂದೆ ಈಗಾಗಲೇ Q ಅಕ್ಷರ ಬಂದಿದೆ, ನೀವು ಇದನ್ನು ಹೇಗೆ ಸಮೀಪಿಸುತ್ತಿದ್ದೀರಿ?' ಎಂದು ಕೇಳಿದರು.
ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ (GT) 13 ಪಂದ್ಯಗಳನ್ನು ಆಡಿದ್ದು, 8 ಗೆಲುವುಗಳೊಂದಿಗೆ 16 ಅಂಕಗಳನ್ನು ಪಡೆದಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಇನ್ನೂ ಪ್ಲೇಆಫ್‌ಗೆ ಅರ್ಹತೆ ಪಡೆದಿಲ್ಲ.
ಶನಿವಾರ ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡವು ಈ ಆವೃತ್ತಿಯ ಅತ್ಯಧಿಕ 247 ರನ್ ಗಳಿಸಿತು. ಫಿನ್ ಅಲೆನ್ 35 ಎಸೆತಗಳಲ್ಲಿ 93 ರನ್ ಗಳಿಸಿದರು. ಈ ಪಂದ್ಯದಲ್ಲಿ ಅವರು 14 ಮತ್ತು 33 ರನ್ ಗಳಿಸಿದ್ದಾಗ ಜಿಟಿ ತಂಡ ಅವರ ಕ್ಯಾಚ್ ಕೈಬಿಟ್ಟಿತು. ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಫಿನ್ ಅಲೆನ್ 10 ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಬೌಂಡರಿಗಳ ಮೂಲಕವೇ 86 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ತಂಡದ ಫೀಲ್ಡಿಂಗ್ ಕಳಪೆಯಾಗಿತ್ತು.
ನಂತರ ಅಂಗ್‌ಕ್ರಿಶ್ ರಘುವಂಶಿ (ಅಜೇಯ 82) ಮತ್ತು ಕ್ಯಾಮರೂನ್ ಗ್ರೀನ್ (ಅಜೇಯ 52) ಮೂರನೇ ವಿಕೆಟ್‌ಗೆ ಕೇವಲ 53 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟ ನಡೆಸಿದರು. ಜಿಟಿ ಇನಿಂಗ್ಸ್‌ನಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರಿಂದಾಗಿ ಕೆಕೆಆರ್‌ನ ಮೂವರಾದ ಅಲೆನ್, ರಘುವಂಶಿ ಮತ್ತು ಗ್ರೀನ್ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ಕೆಕೆಆರ್ ನೀಡಿದ 248 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಜಿಟಿ ತಂಡಕ್ಕೆ ಸಾಯಿ ಸುದರ್ಶನ್ ಅಜೇಯ 53, ಶುಭಮನ್ ಗಿಲ್ 85 ಮತ್ತು ಜೋಸ್ ಬಟ್ಲರ್ ಅವರ 57 ರನ್ ನೆರವಿನಿಂದ ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಕೆಕೆಆರ್ 29 ರನ್‌ಗಳಿಂದ ಗೆದ್ದು ಬೀಗಿತು.
Advertisement