

ಟೀಂ ಇಂಡಿಯಾದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಬುಧವಾರ ನ್ಯೂಜಿಲೆಂಡ್‌ನಲ್ಲಿ ನಟಿ-ಮಾಡೆಲ್ ಸಮ್ರೀನ್ ಕೌರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅರ್ಶ್‌ದೀಪ್ ಸಿಂಗ್ ಅವರು ಐಪಿಎಲ್ 2027ಕ್ಕೂ ಮುಂಚಿತವಾಗಿ ಪಂಜಾಬ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಅಧಿಕೃತವಾಗಿ ಸೇರಿಕೊಂಡ ಕೆಲವೇ ಗಂಟೆಗಳ ನಂತರ ಅವರ ಗೆಳತಿ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನವೆಂಬರ್ 11ರಂದು ನ್ಯೂಜಿಲೆಂಡ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಂಡಿದೆ. ಸಮ್ರೀನ್ ಕೌರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸಮ್ರೀನ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ನಿಶ್ಚಿತಾರ್ಥವನ್ನು ಘೋಷಿಸಿದ್ದು, ಅರ್ಷ್‌ದೀಪ್ ಅವರು ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಸುಂದರ ಕ್ಷಣದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ʻಜೀವನ ನಮಗೆ ನೀಡಬಹುದಾದ ಎಲ್ಲ ವಿಷಯಗಳ ಪೈಕಿ, ನಾವಿಬ್ಬರೂ ಪರಸ್ಪರ ಸಿಕ್ಕಿರುವುದೇ ನನಗೆ ಅತ್ಯಂತ ಸಂತೋಷದ ಸಂಗತಿ. ನಮ್ಮಿಬ್ಬರ ಒಟ್ಟಿಗಿನ ಸುದೀರ್ಘ ಜೀವನಕ್ಕಾಗಿ. 11.11.2026 (ಹಾಯ್ ಭಾವಿ ಪತಿ)ʼʼ ಎಂದು ಸಮ್ರೀನ್ ಬರೆದುಕೊಂಡಿದ್ದಾರೆ.
ಅರ್ಷ್‌ದೀಪ್ ಸಿಂಗ್ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವರ ಈ ಪ್ರವಾಸದಲ್ಲಿ ಸಮ್ರೀನ್ ಕೂಡ ಜೊತೆಯಾಗಿದ್ದಾರೆ. ಸರಣಿಯ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅರ್ಷ್‌ದೀಪ್, ನವೆಂಬರ್ 13 ರಂದು ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ.