‘ನಿವೃತ್ತಿಗೂ ಮುನ್ನ ಈ ದಾಖಲೆ ಬೇಕು’: 92 ರನ್ ಗೆ ಔಟಾದ ರೋಹಿತ್ ಶರ್ಮಾಗೆ ಗವಾಸ್ಕರ್ ಟಾರ್ಗೆಟ್!

ಸದ್ಯ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 35 ಶತಕಗಳನ್ನು ಹೊಂದಿದ್ದಾರೆ. 2027ರ ಏಕದಿನ ವಿಶ್ವಕಪ್ ಮುಗಿಯುವ ವೇಳೆಗೆ ಅವರಿಗೆ 40 ವರ್ಷವಾಗಲಿದೆ. ಹೀಗಾಗಿ ನಿವೃತ್ತಿಗೂ ಮುನ್ನ ಕನಿಷ್ಠ 41 ODI ಶತಕಗಳನ್ನು ಗಳಿಸಿದರೆ ಅದು..
Sunil Gavaskar-Rohit Sharma
ಸುನಿಲ್ ಗವಾಸ್ಕರ್ ಮತ್ತು ರೋಹಿತ್ ಶರ್ಮಾ
Updated on: 

ಚಂಡೀಗಢ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 92 ರನ್‌ಗೆ ಔಟಾದ ರೋಹಿತ್ ಶರ್ಮಾ ಶತಕ ವಂಚಿತರಾದ ಬಗ್ಗೆ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ಕೇವಲ 8 ರನ್‌ಗಳಿಂದ ಶತಕ ತಪ್ಪಿಸಿಕೊಂಡ ರೋಹಿತ್, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ.

ಹೀಗಾಗಿ ನಿವೃತ್ತಿಯಾಗುವ ವೇಳೆಗೆ ರೋಹಿತ್ ಅವರ ODI ಶತಕಗಳ ಸಂಖ್ಯೆ ಅವರ ವಯಸ್ಸಿಗಿಂತ ಹೆಚ್ಚಿರಬೇಕು ಎಂಬುದು ಗವಾಸ್ಕರ್ ಅವರ ಬಯಕೆ.

ಸದ್ಯ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 35 ಶತಕಗಳನ್ನು ಹೊಂದಿದ್ದಾರೆ. 2027ರ ಏಕದಿನ ವಿಶ್ವಕಪ್ ಮುಗಿಯುವ ವೇಳೆಗೆ ಅವರಿಗೆ 40 ವರ್ಷವಾಗಲಿದೆ. ಹೀಗಾಗಿ ನಿವೃತ್ತಿಗೂ ಮುನ್ನ ಕನಿಷ್ಠ 41 ODI ಶತಕಗಳನ್ನು ಗಳಿಸಿದರೆ ಅದು ವಿಶೇಷ ಸಾಧನೆಯಾಗಲಿದೆ ಎಂಬುದು ಗವಾಸ್ಕರ್ ಅಭಿಪ್ರಾಯ.

Sunil Gavaskar-Rohit Sharma
ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ 'One8' ಬ್ರ್ಯಾಂಡ್‌ ಶೂ ತೋರಿಸಿದ ಅಭಿಮಾನಿ! ಕೊಹ್ಲಿ ರಿಯಾಕ್ಷನ್ ಹೇಗಿತ್ತು ಗೊತ್ತಾ? Video

‘ರೋಹಿತ್ ಶತಕ ಗಳಿಸದಿದ್ದಕ್ಕೆ ನಿರಾಸೆಯಾಯಿತು’

ಜಿಯೋಸ್ಟಾರ್‌ನ ‘ಹೈಯರ್ ಕ್ರಿಕೆಟ್ ಲೈವ್’ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್, ರೋಹಿತ್ 92 ರನ್‌ಗೆ ಔಟಾದಾಗ ತಮಗೆ ನಿರಾಸೆಯಾದ ಕಾರಣವನ್ನು ವಿವರಿಸಿದ್ದಾರೆ.

“ರೋಹಿತ್ 92ಕ್ಕೆ ಔಟಾದದ್ದು ನನಗೆ ನಿರಾಸೆ ತಂದಿತು. ಕಾರಣ, ಅವರು ಶತಕ ಗಳಿಸಲಿಲ್ಲ. ಬಹುಶಃ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಆ ಸಂದರ್ಭದಲ್ಲಿ ರೋಹಿತ್ ಅವರ ODI ಶತಕಗಳ ಸಂಖ್ಯೆ ಅವರ ವಯಸ್ಸಿಗಿಂತ ಹೆಚ್ಚಿರಬೇಕು ಎಂಬುದು ನನ್ನ ವೈಯಕ್ತಿಕ ಬಯಕೆ,” ಎಂದು ಗವಾಸ್ಕರ್ ಹೇಳಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದರೆ ರೋಹಿತ್ ತಮ್ಮ 36ನೇ ODI ಶತಕ ದಾಖಲಿಸಿ ಈ ವಿಶೇಷ ಸಾಧನೆಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದರು ಎಂದು ಅವರು ಹೇಳಿದ್ದಾರೆ.

“ನಿವೃತ್ತಿಯಾಗುವ ಸಮಯದಲ್ಲಿ ಆಟಗಾರನ ಶತಕಗಳ ಸಂಖ್ಯೆ ಅವರ ವಯಸ್ಸಿಗಿಂತ ಹೆಚ್ಚಿರುವುದು ನನಗೆ ವಿಶೇಷ ಸಾಧನೆಯಂತೆ ಕಾಣುತ್ತದೆ. ಅದು ಅವರು ಎಂತಹ ವೃತ್ತಿಜೀವನ ನಡೆಸಿದ್ದಾರೆ ಮತ್ತು ಹಲವು ವರ್ಷಗಳ ಕಾಲ ಯಾವ ಮಟ್ಟವನ್ನು ಕಾಯ್ದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಗವಾಸ್ಕರ್ ಹೇಳಿದ್ದಾರೆ.

ತಮ್ಮ ವೃತ್ತಿಜೀವನದ ಕೊನೆಯ ವರ್ಷದಲ್ಲೂ ಇದೇ ರೀತಿಯ ಗುರಿ ಹೊಂದಿದ್ದೆ ಎಂದು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ. 38ನೇ ವಯಸ್ಸಿನಲ್ಲಿ ನಿವೃತ್ತಿಯಾಗುವಾಗ ತಮ್ಮ ಟೆಸ್ಟ್ ಶತಕಗಳ ಸಂಖ್ಯೆ 38 ಆಗಿರಬೇಕು ಎಂದು ಬಯಸಿದ್ದರೂ, ಮೂರು ಬಾರಿ 90ರ ದಶಕದಲ್ಲಿ ಔಟಾದ ಕಾರಣ ಆ ಗುರಿ ಕೈತಪ್ಪಿತು ಎಂದು ತಿಳಿಸಿದ್ದಾರೆ.

‘2023ರ ರೋಹಿತ್ ಹೆಚ್ಚು ಅಪಾಯಕಾರಿ ಬ್ಯಾಟರ್’

ಇದೇ ವೇಳೆ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿಯಲ್ಲಿ ಇತ್ತೀಚೆಗೆ ಸ್ವಲ್ಪ ಬದಲಾವಣೆ ಕಂಡುಬಂದಿದೆ ಎಂದು ಗವಾಸ್ಕರ್ ವಿಶ್ಲೇಷಿಸಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ನಾಯಕನಾಗಿದ್ದ ರೋಹಿತ್ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ್ದರು. ಔಟಾಗುವ ಸಾಧ್ಯತೆಯಿದ್ದರೂ ಮೊದಲಿನಿಂದಲೇ ಬೌಲರ್‌ಗಳ ಮೇಲೆ ದಾಳಿ ನಡೆಸುತ್ತಿದ್ದರು. ಆದರೆ ಈಗ ತಮ್ಮ ವಿಕೆಟ್‌ನ ಮಹತ್ವವನ್ನು ರೋಹಿತ್ ಅರಿತುಕೊಂಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

“2023ರ ವಿಶ್ವಕಪ್‌ನಲ್ಲಿ ನಾಯಕನಾಗಿ ರೋಹಿತ್ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದರು. ಬೇಗ ಔಟಾಗುವ ಸಾಧ್ಯತೆ ಇದ್ದರೂ ಆಕ್ರಮಣಕಾರಿ ಆಟವನ್ನೇ ಆಡುತ್ತಿದ್ದರು. ಈಗ ತಮ್ಮ ವಿಕೆಟ್ ಅತ್ಯಂತ ಅಮೂಲ್ಯ ಎಂಬುದನ್ನು ಅವರು ಅರಿತುಕೊಂಡಿದ್ದಾರೆ” ಎಂದು ಗವಾಸ್ಕರ್ ಹೇಳಿದ್ದಾರೆ.

2023ರ ವಿಶ್ವಕಪ್‌ನಲ್ಲಿ ರೋಹಿತ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆದರೆ ಅವರು ಕೇವಲ 30-40 ರನ್ ಗಳಿಸುವ ಬ್ಯಾಟರ್ ಅಲ್ಲ; ಅವರು ಶತಕ ಗಳಿಸುವ ಆಟಗಾರ ಎಂದು ಗವಾಸ್ಕರ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ತಪ್ಪಿಸಿಕೊಂಡರೂ, ಹಿಂದಿನ ಪಂದ್ಯದಲ್ಲಿ ರೋಹಿತ್ ಶತಕ ಗಳಿಸಿದ್ದರು ಎಂಬುದನ್ನು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ.

“ಅವರು ದೊಡ್ಡ ಮೊತ್ತ ಗಳಿಸಿದರೆ 70-80 ಎಸೆತಗಳಲ್ಲೇ ಶತಕ ತಲುಪಬಹುದು. 50 ಓವರ್‌ಗಳ ಪಂದ್ಯದಲ್ಲಿ ಇದು ತಂಡಕ್ಕೆ ಅತ್ಯಂತ ಸಹಾಯಕವಾಗುತ್ತದೆ. ಜೊತೆಗೆ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂಬ ಸಾಮಾಜಿಕ ಜಾಲತಾಣದ ಟೀಕೆಗಳಿಂದಲೂ ಅವರು ದೂರ ಉಳಿಯಬಹುದು” ಎಂದು ಗವಾಸ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com