4th T20I: Glenn Phillips ಸ್ಫೋಟಕ ಶತಕ, ಡಫಿ ಮಾರಕ ಬೌಲಿಂಗ್: ಭಾರತಕ್ಕೆ 87 ರನ್ ಹೀನಾಯ ಸೋಲು!

ಆಕ್ಲೆಂಡ್ ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಕೇವಲ 46..
New Zealand beat India by 87 Runs
ಭಾರತಕ್ಕೆ ಸೋಲು
Updated on: 

ಆಕ್ಲೆಂಡ್: ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಅವರ ಆಕರ್ಷಕ ಶತಕ ಹಾಗೂ ಜೇಕಬ್ ಡಫಿ ಅವರ ಮಾರಕ ಬೌಲಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತವನ್ನು 87 ರನ್‌ಗಳಿಂದ ಮಣಿಸಿದೆ.

ಶುಕ್ರವಾರ ನಡೆದ ಐದು ಪಂದ್ಯಗಳ ಸರಣಿಯ ನಾಲ್ಕನೇ ಹಣಾಹಣಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ನ್ಯೂಜಿಲೆಂಡ್, ಸರಣಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

ಆಕ್ಲೆಂಡ್ ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 259 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಕೇವಲ 46 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು.

ಹಿಂದಿನ ಎರಡು ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿದ್ದ ಫಿಲಿಪ್ಸ್, ಈ ಪಂದ್ಯದಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ 49 ಎಸೆತಗಳಲ್ಲಿ 107 ರನ್ ಗಳಿಸಿದರು.

ಇನ್ನೊಂದೆಡೆ ಮೈಕೆಲ್ ಬ್ರೇಸ್‌ವೆಲ್ ಕೂಡ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದರು. ಕೇವಲ 25 ಎಸೆತಗಳನ್ನು ಎದುರಿಸಿದ ಅವರು 65 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಫಿನ್ ಅಲೆನ್ 17 ಎಸೆತಗಳಲ್ಲಿ 31 ರನ್ ಹಾಗೂ ಡ್ಯಾರಿಲ್ ಮಿಚೆಲ್ ಕೇವಲ 9 ಎಸೆತಗಳಲ್ಲಿ 24 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾಣಿಕೆ ನೀಡಿದರು.

ಭಾರತದ ಪರ ಮಾಯಾಂಕ್ ಯಾದವ್ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದ ಬೌಲರ್‌ಗಳು ನ್ಯೂಜಿಲೆಂಡ್ ಬ್ಯಾಟರ್‌ಗಳ ರನ್ ವೇಗಕ್ಕೆ ಕಡಿವಾಣ ಹಾಕಲು ವಿಫಲರಾದರು.

New Zealand beat India by 87 Runs
India vs New Zealand 4th T20I: ತಂಡದಿಂದ ವೈಭವ್ ಸೂರ್ಯವಂಶಿ, ಭುವಿ ಔಟ್; ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ!

ಚೇಸಿಂಗ್ ನಲ್ಲಿ ಭಾರತ ವಿಫಲ

ಇತ್ತ 260 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ಆರಂಭದಿಂದಲೇ ಆಘಾತ ನೀಡಿದರು. ಜೇಕಬ್ ಡಫಿ ತಮ್ಮ ಮಾರಕ ಬೌಲಿಂಗ್ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿ ನಾಲ್ಕು ವಿಕೆಟ್ ಕಬಳಿಸಿದರು. ಪರಿಣಾಮವಾಗಿ ಭಾರತ ತಂಡ ಗುರಿ ತಲುಪಲು ವಿಫಲವಾಗಿ 87 ರನ್‌ಗಳ ಸೋಲಿಗೆ ಶರಣಾಯಿತು.

ಇಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅನುಪಸ್ಥಿತಿ ಭಾರತ ತಂಡದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಬೃಹತ್ ಗುರಿ ಬೆನ್ನಟ್ಟುವ ಸವಾಲಿನೊಂದಿಗೆ ಕಣಕ್ಕಿಳಿದ ಭಾರತಕ್ಕೆ ನ್ಯೂಜಿಲೆಂಡ್‌ನ ಸಂಘಟಿತ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.

ಭಾರತದ ಪರ ಅಭಿಶೇಕ್ ಶರ್ಮಾ (27), ನಾಯಕ ಶ್ರೇಯಸ್ ಅಯ್ಯರ್ (22), ನಿತೀಶ್ ಕುಮಾರ್ ರೆಡ್ಡಿ (21), ತಿಲಕ್ ವರ್ಮಾ (35) ಮತ್ತು ನಮನ್ ಧೀರ್ (28) ನ್ಯೂಜಿಲೆಂಡ್ ವಿರುದ್ಧ ಪ್ರತಿರೋಧ ತೋರುವ ಪ್ರಯತ್ನ ಪಟ್ಟರಾದರೂ, ಕಿವೀಸ್ ಬೌಲರ್ ಗಳ ಸಾಂಘಿಕ ಹೋರಾಟದ ಎದುರು ಮಂಕಾದರು.

ಆ ಮೂಲಕ ಅಂತಿಮವಾಗಿ ಭಾರತ ನಿಗಧಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಮಾತ್ರ ಗಳಿಸಿ ಬರೊಬ್ಬರಿ 87 ರನ್ ಅಂತರದ ಹೀನಾಯ ಸೋಲು ಕಂಡಿತು.

ಈ ಪಂದ್ಯದ ಜಯದೊಂದಿಗೆ ಕಿವೀಸ್ 5 ಪಂದ್ಯಗಳ ಟಿ20 ಸರಣಿಯ ಅಂತರ 3-1ಕ್ಕೆ ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X