

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ಏಷ್ಯಾ ಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ವೇಳೆ ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ ಅವರಿಗೆ ಪಾಕ್ ನಾಯಕಿ ಫಾತಿಮಾ ಸನಾ ಮಾಡಿದ ಕೈಸನ್ನೆ ಇದೀಗ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಶಫಾಲಿ ವರ್ಮಾ ಅವರನ್ನು ಔಟ್ ಮಾಡಿದ ನಂತರ ಫಾತಿಮಾ ಸನಾ ಮಾಡಿದ ಸಂಭ್ರಮಾಚರಣೆಗೆ ಟೀಕೆ ವ್ಯಕ್ತವಾಗಿದೆ. ಫಾತಿಮಾ ಸನಾ 6 ಎಸೆತಗಳಲ್ಲಿ 12 ರನ್ ಗಳಿಸಿದ್ದ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಔಟ್ ಮಾಡಿ, ನಂತರ ಪೆವಿಲಿಯನ್‌ಗೆ ಹೋಗು ಎನ್ನುವಂತೆ ಕೈ ಸನ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ ಭಾರತದ ವಿರುದ್ಧ ಸೋತ ನಂತರ ಈ ವಿಡಿಯೋ ಇಟ್ಟುಕೊಂಡು ನೆಟ್ಟಿಗರು ಫಾತಿಮಾ ಸನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ತನ್ನ ಅತ್ಯಂತ ಕಡಿಮೆ ಮೊತ್ತವಾದ 55 ರನ್‌ಗಳಿಗೆ ಕುಸಿದಿದ್ದರೂ, ಫಾತಿಮಾ ಅವರ ವರ್ತನೆಯನ್ನು ಕಾಮೆಂಟೇಟರ್ ವಿವೇಕ್ ರಜ್ದಾನ್ ಟೀಕಿಸಿದ್ದಾರೆ.
"ಸರಿ, ನೀವು ಅವರಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತಿದ್ದೀರಿ. ಆದರೆ ನಿಮ್ಮ ಇಡೀ ತಂಡ ಗಳಿಸಿದ್ದು ಕೇವಲ 55 ರನ್, ಅಂತಹದರಲ್ಲಿ ನೀವು ಶಫಾಲಿ ವರ್ಮಾ ಅವರನ್ನು ಹೊರಗೆ ಹೋಗು ಎನ್ನುತ್ತೀರಾ ಎಂದು ರಜ್ದಾನ್ ಹೇಳಿದ್ದಾರೆ.
2026ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಇನ್ನೂ 68 ಎಸೆತಗಳು ಬಾಕಿ ಇರುವಾಗ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಪಾಕಿಸ್ತಾನ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಭಾರತ ತಂಡವು 8.4 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದು, ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಭಾರತ ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಗುಂಪು ಹಂತವನ್ನು ಸೋಲಿಲ್ಲದೆ ಪೂರ್ಣಗೊಳಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ಇನ್ನೂ ಅರ್ಹತೆ ಪಡೆಯಬೇಕಿದ್ದು, ಅದು ಹಾಂಗ್ ಕಾಂಗ್ ವಿರುದ್ಧ ತನ್ನ ಅಂತಿಮ ಗುಂಪು ಪಂದ್ಯವನ್ನು ಆಡಬೇಕಿದೆ.