ಕರ್ನಾಟಕದ ಸುಂದರ ಕೊಡಗು ಜಿಲ್ಲೆ ಹದಿನಾರನೆಯ ಶತಮಾನದಲ್ಲಿ ಲಿಂಗಾಯುತ ರಾಜರ ಆಳ್ವಿಕೆಯಲ್ಲಿತ್ತು. 1681 ರಲ್ಲಿ ಮುದ್ದುರಾಜನಿಂದ ಮಡಿಕೇರಿ ಮುಖ್ಯ ಪಟ್ಟಣವಾಗಿ ನಿರ್ಮಾಣವಾಯಿತು. ಊರಿನ ಮಧ್ಯಭಾಗದಲ್ಲಿ ಸುಂದರ ಅರಮನೆ, ಅರಮನೆಯ ಮುಂದೆ ಕೋಟೆ ಬಾಗಿಲಿನಲ್ಲಿ ಕೋಟೆ ಗಣಪತಿ ದೇವಸ್ಥಾನ, ಕೋಟೆಯ ಹೊರಭಾಗದ ಸುತ್ತಲು ಓಂಕಾರೇಶ್ವರ ದೇವಾಲಯ, ಕುಂದುರು ಮೊಟ್ಟೆ ಚಾಮುಂಡೇಶ್ವರಿ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಪೇಟೆ ಶ್ರೀ ರಾಮ ಮಂದಿರ ಇತ್ಯಾದಿ ದೇವಾಲಯಗಳು ರಾಜರ ಆಡಳಿತದಲ್ಲಿ ನಿರ್ಮಾಣವಾಗಿದೆ.ಪೂಜಾ ವಿಧಿ ವಿಧಾನಗಳು ಅಂದಿನಿಂದಲೇ ಕ್ರಮ ಬದ್ದವಾಗಿ ನಡೆದುಕೊಂಡು ಬರುತಿದೆ. ಕೊಡಗನ್ನು ಆಳಿದ ರಾಜರುಗಳಲ್ಲಿ ವೀರ ರಾಜೇಂದ್ರ, ಲಿಂಗ ರಾಜೇಂದ್ರ, ಚಿಕ್ಕ ವೀರ ರಾಜೇಂದ್ರರವರೆಗೆ, ಬ್ರಿಟಿಷರು ಅಧಿಕಾರವನ್ನು ಈ ರಾಜರಿಂದ ತೆಗೆದು ಕೊಳ್ಳುವವರೆಗೆ ಆಳ್ವಿವಿಕೆ ನಡೆಸಿದ್ದಾರೆ.