ದಸರಾ ಗಜಪಡೆಯ ವಿವರ

ದಸರಾ ಹಬ್ಬಕ್ಕೆ ಹೆಚ್ಚಾಗಿ ದುಬಾರೆ, ನಾಗರಹೊಳೆ, ಬಂಡಿಪುರ, ಭೀಮೇಶ್ವರಿ, ವೀರನಹೊಸಹಳ್ಳಿ, ಮೂಲೆಹೊಳೆ, ಕೆ.ಗುಡಿ ಮುಂತಾದ ಕಡೆ ಇರುವ ಶಿಬಿರಗಳಲ್ಲಿರುವ ಆನೆಗಳನ್ನು ಬಳಸಲಾಗುತ್ತದೆಯಾದರೂ..
ತಾಲೀಮಿನಲ್ಲಿ ತೊಡಗಿರುವ ಜಂಬೂ ಸವಾರಿ ಆನೆಗಳು (ಸಂಗರ್ಹ ಚಿತ್ರ)
ತಾಲೀಮಿನಲ್ಲಿ ತೊಡಗಿರುವ ಜಂಬೂ ಸವಾರಿ ಆನೆಗಳು (ಸಂಗರ್ಹ ಚಿತ್ರ)
Updated on

ದಸರಾ ಹಬ್ಬಕ್ಕೆ ಹೆಚ್ಚಾಗಿ ದುಬಾರೆ, ನಾಗರಹೊಳೆ, ಬಂಡಿಪುರ, ಭೀಮೇಶ್ವರಿ, ವೀರನಹೊಸಹಳ್ಳಿ, ಮೂಲೆಹೊಳೆ, ಕೆ.ಗುಡಿ ಮುಂತಾದ ಕಡೆ ಇರುವ ಶಿಬಿರಗಳಲ್ಲಿರುವ ಆನೆಗಳನ್ನು ಬಳಸಲಾಗುತ್ತದೆಯಾದರೂ, ಇತರೆ ದಷ್ಟ ಪುಷ್ಟವಾದ ಆನೆಗಳನ್ನೂ ಸಹ ಹಿಡಿಯಲಾಗುತ್ತದೆ.

ನಂತರ ಇವುಗಳಿಗೆ ಸೂಕ್ತ ತರಬೇತಿ ನೀಡಿ ದಸರೆಯ ನಂತರ ಮತ್ತೆ ಕಾಡಿಗೆ ಬಿಡಲಾಗುತ್ತದೆ. ಹುಣಸೂರಿನ ನಾಗರಹೊಳೆ ಅಭಯಾರಣ್ಯ ಬಳಿಯ ನಾಗಪುರದಿಂದ ಗಜಪಯಣಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಮೈಸೂರು ದಸರಾ ಚಟುವಟಿಕೆಗಳು ಗರಿಗೆದರುತ್ತವೆ. ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಅರಮನೆಗೆ ಆಗಮಿಸಿರುವ ಗಜಪಡೆಗಳು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿ ದಸರಾ ತಾಲೀಮು ಆರಂಭಿಸಿವೆ.

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಹರ್ಷ, ಪ್ರಶಾಂತ, ಗೋಪಿ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಕೆಂಚಾಂಬ ಸೇರಿ ಹನ್ನೆರಡು ಆನೆಗಳು ಪಾಲ್ಗೊಂಡಿವೆ. ಈ ಜಂಬೂ ಸವಾರಿ ರೂವಾರಿಗಳ ವಿವರ ಇಲ್ಲಿದೆ.

ಗಜಪಡೆಯ ಸಂಪೂರ್ಣ ವಿವರ:
ಅರ್ಜುನ:
ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ ಬಳ್ಳೆ ಆನೆ ಶಿಬಿರದಿಂದ ಬಂದಿದ್ದು, ಈಗ 55 ವರ್ಷ. ಈತನ ಎತ್ತರ 2.95ಮೀ, ಉದ್ದ 3.75ಮೀ, 5,445 ಕೆ.ಜಿ. ತೂಕವನ್ನು ಹೊಂದಿದ್ದಾನೆ. 1968ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಾಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್ ನಿಂದ ಸೆರೆಹಿಡಿದಿದ್ದು, ಹಿಂದಿನ ಅಂಬಾರಿ ಆನೆ ದ್ರೋಣನ ನಂತರ ಒಂದು ಬಾರಿ ಚಿನ್ನದ ಅಂಬಾರಿ ಹೊತ್ತಿತ್ತಾದರೂ ಬಲರಾಮನ ಬಳಿಕ ಇದೀಗ ಇವನೇ ಅಂಬಾರಿ ಹೊರುತ್ತಿದ್ದಾನೆ.

ಬಲರಾಮ: ತಿತಿಮತಿ ಬಳಿಯ ಆನೆ ಶಿಬಿರದ ಬಲರಾಮ 19 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾ 13 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಈಗ ಈಗ 57 ವರ್ಷ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದ, ಸುಮಾರು 4,835 ಕೆ.ಜಿ. ತೂಕವಿದ್ದಾನೆ. ಈ ಬಾರಿ ಪಟ್ಟದ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಅಭಿಮನ್ಯು: ತಿತಿಮತಿ ಬಳಿಯ ಶಿಬಿರದ ಅಭಿಮನ್ಯು ವಯಸ್ಸು 49. ಎತ್ತರ 2.68ಮೀ. ಹಾಗೂ 3.51ಮೀ. ಉದ್ದವಿದ್ದು 4,880 ಕೆ.ಜಿ. ತೂಕವಿದೆ. ಕಾಡಾನೆಯನ್ನು ಹಿಡಿದು ಪಳಗಿಸುವ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನೈಪುಣ್ಯತೆ ಪಡೆದಿರುವ ಅಭಿಮನ್ಯು ಎಂತಹ ಬಲಿಷ್ಠ ಆನೆಯನ್ನು ಕೂಡ ಹಿಡಿತದಲ್ಲಿಡುವ ಸಾಮರ್ಥ್ಯ ಹೊಂದಿದೆ. ಇದನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಪಿಟ್ ಮೆಥಡ್ ನಿಂದ ಸೆರೆಹಿಡಿಯಲಾಗಿದೆ. 16 ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅಭಿಮನ್ಯು ಅರಮನೆ ವಾದ್ಯ ಸಂಗೀತದ ಗಾಡಿ ಎಳೆಯುವ ಜವಬ್ದಾರಿಯನ್ನು ನಿರ್ವಹಿಸುತ್ತಾ ಬಂದಿರುವುದು ಹೆಗ್ಗಳಿಕೆ.

ವಿಕ್ರಮ: ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ವಿಕ್ರಮನಿಗೆ 42ವರ್ಷ. 2.60ಮೀ ಎತ್ತರ, 3.43ಮೀ ಉದ್ದ ಹಾಗೂ 3675 ಕೆ.ಜಿ. ತೂಕವಿದೆ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿದೆ. ಇದು 11 ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

ಹರ್ಷ: ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಬಂದಿರುವ ಹರ್ಷನ ವಯಸ್ಸು 48. ಎತ್ತರ 2.57ಮೀ. ಉದ್ದ 3.40ಮೀ. ತೂಕ 3300ಕೆ.ಜಿ. ಇದನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. 13ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಚೈತ್ರ: ಬಂಡಿಪುರ ಆನೆ ಶಿಬಿರದಿಂದ ಬಂದ ಈ ಹೆಣ್ಣು ಆನೆಗೆ 44 ವರ್ಷ. 2.52 ಮೀ ಎತ್ತರ, 3.62 ಮೀ ಉದ್ದ, ಹಾಗೂ 3462 ಕೆಜಿ ತೂಕ ಹೊಂದಿದೆ. ಸದಾ ಶಾಂತ ಸ್ವಭಾವದಲ್ಲಿರುವ ಈ ಆನೆಯು ಗಂಗೆಯ ಮರಿಯಾಗಿದೆ. ಇದು 3ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ

ಕಾವೇರಿ: ಹೆಣ್ಣು ಆನೆ ಕಾವೇರಿಗೆ 38 ವರ್ಷವಾಗಿದ್ದು, 2.50 ಮೀ. ಎತ್ತರ, 3.32 ಮೀ ಉದ್ದ, 2900 ಕೆಜಿ ತೂಕವನ್ನು ಹೊಂದಿದೆ. ದುಬಾರೆ ಆನೆ ಶಿಬಿರದಿಂದ ಬಂದಿರುವ ಈ ಆನೆಯನ್ನು ಫೆಬ್ರವರಿ 2009ರಂದು ಸೋಮವಾರಪೇಟೆಯ ಅಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದು 4ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಪ್ರಶಾಂತ: ಕೊಡಗಿನ ದುಬಾರೆ ಆನೆ ಶಿಬಿರದ ಪ್ರಶಾಂತ ೯ನೇ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 59 ವರ್ಷ 4400 ಕೆ.ಜಿ. ತೂಕ ಹೊಂದಿರುವ ಈತ 2.61 ಮೀ. ಎತ್ತರ, 3.46ಮೀ. ಉದ್ದವಿದ್ದಾನೆ. 1993ರಲ್ಲಿ ಕಾರ್ಯಕೊಪ್ಪ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿದೆ. ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿ ಅಭ್ಯಾಸವಿರುವ ಈತ ಸಾಧು ಸ್ವಭಾವದವನು.

ಗೋಪಿ: ಇದು ಕೂಡ ಕೊಡಗಿನ ದುಬಾರೆ ಆನೆ ಶಿಬಿರದು. 5ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಗೋಪಿಗೆ 33 ವರ್ಷ. 3700ಕೆ.ಜಿ. ತೂಕ, 2.92 ಮೀ ಎತ್ತರ, 3.42 ಮೀ. ಉದ್ದವಿರುವ ಈತನನ್ನು 1993ರಲ್ಲಿ ಕಾರ್ಯಕೊಪ್ಪ ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಹೀಡಿಯಲಾಗಿತ್ತು. ದುಬಾರೆ ಶಿಬಿರದ ಸಫಾರಿ ಕಾರ್ಯದಲ್ಲಿ ಈತನನ್ನು ಬಳಸಿಕೊಳ್ಳಲಾಗುತ್ತಿದೆ.

ಗೋಪಾಲಸ್ವಾಮಿ: 4ನೇಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಗೋಪಾಲಸ್ವಾಮಿ ತಿತಿಮತಿ ಶಿಬಿರದ ಗಂಡು ಆನೆ. 33 ವರ್ಷದ ಗೋಪಾಲಸ್ವಾಮಿ ಸುಮಾರು 2300ಕೆ.ಜಿ. ತೂಕ ಹೊಂದಿದ್ದಾನೆ. 2.62ಮೀ. ಎತ್ತರ, 2.42ಮೀ. ಉದ್ದವಾಗಿರುವ ಈತನನ್ನು 2009ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ಸೆರೆಹಿಡಿಯಲಾಗಿತ್ತು. ಸ್ವಭಾವದಲ್ಲಿ ಶಾಂತ ಹಾಗೆಯೇ ತುಂಬಾ ಬಲಶಾಲಿ.

ದುರ್ಗಾಪರಮೇಶ್ವರಿ: ಕೆ.ಗುಡಿ ಶಿಬಿರದ ಹೆಣ್ಣಾನೆ ದುರ್ಗಾಪರಮೇಶ್ವರಿ 3ನೇ ಬಾರಿ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. 48 ವರ್ಷ, ಸುಮಾರು 3500ಕೆ.ಜಿ ತೂಕ, 2.40 ಮೀ. ಎತ್ತರ, 2.20ಮೀ. ಉದ್ದ ಇದ್ದಾಳೆ. ಈಕೆಯನ್ನು 1972ರಲ್ಲಿ ಮಡಿಕೇರಿ ವಿಭಾಗದ ದುಬಾರೆ ಅರಣ್ಯ ವ್ಯಾಪ್ತಿಯಲ್ಲಿ ಗುಂಡಿಗೆ ಬೀಳಿಸುವ ಮೂಲಕ ಸೆರೆ ಹಿಡಿಯಲಾಗಿತ್ತು.

ಕೆಂಚಾಂಬ: ನೂತನ ಅತಿಥಿಯಾಗಿರುವ ಕೆಂಚಾಂಬ ಕೊಡಗಿನ ಕಾವೇರಿ ನಿಸರ್ಗಧಾಮದ ಹೆಣ್ಣಾನೆ. ನಾಡಹಬ್ಬ ದಸರಾದಲ್ಲಿ ಪ್ರಥಮ ಬಾರಿಗೆ ಭಾಗವಹಿಸುತ್ತಿರುವ ಈಕೆಗೆ ಎಲ್ಲವೂ ಹೊಸತು. ಫಿರಂಗಿಯ ಸದ್ದಿಗೆ ಮೊದಲಿಗೆ ಬೆದರಿದ ಈಕೆಗೆ ಇದೀಗ ಎಲ್ಲವೂ ಅಭ್ಯಾಸವಾಗುತ್ತಿದೆ. 21 ವರ್ಷ, ಸುಮಾರು 2800ಕೆ.ಜಿ. ತೂಕ, 2.2 ಮೀ. ಎತ್ತರ, 3.15 ಮೀ. ಉದ್ದವಿದೆ. ಹಾಸನ ಜಿಲ್ಲೆ ಆಲೂರು ವ್ಯಾಪ್ತಿಯಲ್ಲಿ ಸೆರೆ ಸಿಕ್ಕ 22 ಆನೆಗಳ ಪೈಕಿ ಈಕೆಯೂ ಒಬ್ಬಳಾಗಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com