ಕೆಪಿಎಸ್‌ಸಿ ಅವಾಂತರ

ಕೆಪಿಎಸ್‌ಸಿ
ಕೆಪಿಎಸ್‌ಸಿ

ಕೊಪ್ಪಳ/ಕಲಬುರಗಿ: ಕೆಪಿಎಸ್‌ಸಿಗೂ ಅಧ್ವಾನಕ್ಕೂ ಬಿಡದ ನಂಟು. ಇಲ್ಲಿ ಅಕ್ರಮ, ಅವಾಂತರ ಇಲ್ಲದೆ ನೇಮಕಾತಿಯೇ ನಡೆಯುವುದಿಲ್ಲ ಎನ್ನುವುದು ಅನೇಕ ಸಂದರ್ಭಗಳಲ್ಲಿ ಜಗಜ್ಜಾಹೀರು. ಅದಕ್ಕೆ ಇಲ್ಲಿ ತಾಜಾ ಉದಾಹರಣೆಗಳಿವೆ.

ವಾರ್ಡನ್, ಪ್ರಾಂಶುಪಾಲರು, ವಾರ್ತಾ ಸಹಾಯಕರು, ಹಿರಿಯ ವಾರ್ತಾಧಿಕಾರಿ ಮೊದಲಾದ ಹುದ್ದೆಗಳ ನೇಮಕಕ್ಕೆ ಲಿಖಿತ ಪರೀಕ್ಷೆ ಡಿಸೆಂಬರ್ 6 ರಿಂದ ಪ್ರಾರಂಭವಾಗಲಿವೆ. ಪರೀಕ್ಷೆಗಿನ್ನು ಎರಡೇ ದಿನ. ಆದರೆ ಆಗಿರುವ ಗಲಿಬಿಲಿಗಳು ಪರೀಕ್ಷೆಗೆ ಓದಿಕೊಂಡಿರುವುದನ್ನೇ ಮರೆಸುವಂತಾಗಿದೆ. ಸಮಸ್ಯೆಯಾಗಿದೆ ಎಂದು ಸಹಾಯ ವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರೇ ಗತಿ ಇಲ್ಲ.

ಕೆಪಿಎಸ್ಸಿಗೆ ಅಭ್ಯರ್ಥಿಗಳ ಪ್ರಶ್ನೆ (ಉತ್ತರ ನೀವೇ ಕೊಡ್ಬೇಕು)

* ಯಾರದೋ ಪ್ರವೇಶ ಪತ್ರಕ್ಕೆ ಯಾರದೋ ಭಾವಚಿತ್ರ ಹಾರಿದ್ದೀರಿ

* ಪರೀಕ್ಷೆ ಬರೆಯಲು ಯಾರು ಹೋಗಬೇಕು?

* ಫೋಟೋ ಇದ್ದವರು ಹೋಗಿ ಬರೆಯಬೇಕೆ ಅಥವಾ ಪ್ರವೇಶಪತ್ರದಲ್ಲಿ ಹೆಸರು ಇದ್ದವರು ಪರೀಕ್ಷೆ ಬರೆಯಬೇಕೆ?

* ಪರೀಕ್ಷಾ ಕೇಂದ್ರಗಳೂ ಅದಲು ಬದಲು, ಎಲ್ಲಿಗೆ ಹೋಗಿ ಪರೀಕ್ಷೆ ಬರೆಯಬೇಕು?

* ಗೊಂದಲ ಹೀಗಿದೆ, ಪರಿಹಾರ ಮಾಡಿ ಎಂದು ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ, ಏಕೆ?

ಅದಲು ಬದಲು
ವಿದ್ಯಾರ್ಥಿಗಳ ಆಯ್ಕೆ ಮಾಡಿಕೊಂಡಿದ್ದು ಒಂದು ಪರೀಕ್ಷಾ ಕೇಂದ್ರವಾಗಿದ್ದರೆ, ಪ್ರವೇಶ ಪತ್ರದಲ್ಲಿ ನಿಗದಿ ಮಾಡಿರುವ ಕೇಂದ್ರವೇ ಬೇರೆ. ಇನ್ನು ಕೆಲ ವಿದ್ಯಾರ್ಥಿಗಳ ಒಂದು ಲಿಖಿತ ಪರೀಕ್ಷೆ ಒಂದು ಕೇಂದ್ರದಲ್ಲಿದ್ದರೆ ಮತ್ತೊಂದು ಪರೀಕ್ಷೆ ಮತ್ತೊಂದು ಕೇಂದ್ರದಲ್ಲಿದೆ.
ಉದಾಹರಣೆ ಹೀಗಿದೆ ನೋಡಿ,
ಕವಿತಾ ಎನ್ನುವ ಅಭ್ಯರ್ಥಿ ಕೆಲ ಪರೀಕ್ಷೆಯನ್ನು ಧಾರವಾಡದಲ್ಲಿ, ಮತ್ತೊಂದು ಪರೀಕ್ಷೆಯನ್ನು ಹುಬ್ಬಳ್ಳಿಯಲ್ಲಿ, ಮಗದೊಂದು ಪರೀಕ್ಷೆಯನ್ನು ಬೆಳಗಾವಿಯಲ್ಲಿ ಬರೆಯಬೇಕಾಗಿದೆ. ಪರೀಕ್ಷಾ ಕೇಂದ್ರ ಹಂಚಿಕೆಯೂ ಹೀಗೆ ಯದ್ವಾತದ್ವ ಆಗಿರುವುದರಿಂದ ಪರೀಕ್ಷೆ ಬರೆಯಲು ಹೆಲಿಕಾಪ್ಟರ್ ತರಿಸಿಕೊಳ್ಳಬೇಕೇ ಎಂಬ ಪ್ರಶ್ನೆ ಅಭ್ಯರ್ಥಿಗಳದ್ದು.

ಇವರ ಕಥೆ ಕೇಳಿ
ನನ್ನ ಪ್ರವೇಶ ಪತ್ರಕ್ಕೆ ಯಾರದೋ ಫೋಟೋ ಬಂದಿದೆ. ಪರೀಕ್ಷಾ ಕೇಂದ್ರದಲ್ಲಿ ಹೋಗಿ ಏನು ಹೇಳಬೇಕು? ನಾನು ಯಾವ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು. ಕೆಪಿಎಸ್‌ಸಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ತೀವ್ರ ಗೊಂದಲ ಉಂಟಾಗಿದೆ. ಇದು ವಾರ್ಡನ್ ಹುದ್ದಗೆ ಅರ್ಜಿ ಹಾಕಿರುವ ಕೊಪ್ಪಳದ ಜಗದೀಶ ಎಂಬುವರ ಸಮಸ್ಯೆ.

ಸೇಡಂ ತಾಲೂಕಿನ ರಿಬ್ಬನಪಲ್ಲಿ ಹೋಬಳಿಯ ಇಂದಿರಾನಗರದ ಜ್ಯೋತಿ ನಾಯಕ ಡಿಪ್ಲೋಮಾ ನರ್ಸಿಗ್ ಹಾಗೂ ಬಿಎ, ಬಿ.ಇಡಿ ಪದವೀಧರೆ. ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಇವರು ಮೊರಾರ್ಜಿ ವಸತಿ ಶಾಲೆಯಲಲ್‌ನ ಫಿಮೇಲ್ ನರ್ಸ್, ಹಿಂದಿ ಶಿಕ್ಷಕಿ ಹಾಗೂ ವಾರ್ಡನ್ ಹುದ್ದೆಗಳಿಗೆ ಅರ್ಜಿ ಗುಜರಾಯಿಸಿದ್ದರು. ಇವರಿಗೀಗ ಕೆಪಿಎಸ್ಸಿ ಪರೀಕ್ಷಾ ಹಾಲ್ ಟಿಕೆಟ್ ಕಳುಹಿಸಿದೆ. ಅದರಲ್ಲಿ ನರ್ಸ್ ಹಾಗೂ ವಾರ್ಡನ್ ಹುದ್ದೆಗೆ ಒಂದೇ ದಿನ, ಏಕಕಾಲಕ್ಕೆ, ಅದೂ ಕಲಬುರಗಿ ಹಾಗೂ ರಾಯಚೂರಿನಲ್ಲಿ ಪರೀಕ್ಷೆ ಬರೆಯಬೇಕೆಂದು ಸೂಚಿಸಲಾಗಿದೆ! ಅರ್ಹತೆಯಂತೆ ಅಧಿಕ ಹುದ್ದೆಗಳಿಗೆ ಅರ್ಜಿ ಹಾಕಿರುವ ತಮಗೆ ಆಯೋಗ ಬೇರೇ ಬೇರೆ ದಿನಗಳಲ್ಲಿ ಪರೀಕ್ಷೆ ನಿಗದಿಪಡಿಸದೆ ಏಕಕಾಲಕ್ಕೆ ಪರೀಕ್ಷೆ ನಿಗದಿಪಡಿಸಿ ಗೊಂದಲ ಮೂಡಿಸಿದೆ ಎಂಬುದು ಜ್ಯೋತಿ ಗೋಳು.

9900998454/58 ಕರೆ ಮಾಡದಿರುವುದೇ ವಾಸಿ!
ಸ್ಪರ್ಧಾತ್ಮಕ ಪರೀಕ್ಷೆ, ವೇಳಾಪಟ್ಟಿಯಲ್ಲಿ ಗೊಂದಲಗಳಿಗೆ ವಿಚಾರಿಸಬಹುದು ಎಂದ ಕೆಪಿಎಸ್ಸಿ ನೀಡಿರುವ ಸಹಾಯವಾಣಿ 9900998454/58 ಕೆಲಸ ಮಾಡುತ್ತಿಲ್ಲ. ಕರೆ ಮಾಡಿದವರಿಗೆ ಅಲ್ಲಿ ಕರೆ ಸ್ವೀಕರಿಸಿ ಮಾಹಿತಿ ನೀಡುವವರೇ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com