ಅತಿ ಔಷಧ: ಕೋಮಾದಲ್ಲಿ ಬಾಲೆ

ಬಾಲಕಿಗೆ 2 ಇಂಜೆಕ್ಷನ್ ನೀಡಿ ಔಷಧ ಬರೆದು ಕೊಟ್ಟರು. ಔಷಧ ತೆಗೆದುಕೊಂಡು ಬರುವಷ್ಟರಲ್ಲಿ ಆಕೆ ಅಸ್ವಸ್ಥ...
ಅತಿ ಔಷಧ: ಕೋಮಾದಲ್ಲಿ ಬಾಲೆ

ಬೆಂಗಳೂರು: ಎಲ್ಲ ಮಕ್ಕಳಂತೆ ಆಟ, ಪಾಠದಲ್ಲಿ ಸ್ವಚ್ಛಂದವಾಗಿ ಕಾಲಕಳೆಯಬೇಕಿದ್ದ ಬಾಲಕಿಯೊಬ್ಬಳು ವೈದ್ಯರ ನಿರ್ಲಕ್ಷ್ಯದಿಂದ ಇಂದು ಕೋಮಾ ಸ್ಥಿತಿಯಲ್ಲಿದ್ದಾಳೆ.

ದೊಡ್ಡ ಬಳ್ಳಾಪುರದ ರಾಮದೇವನಹಳ್ಳಿ ನಿವಾಸಿ ಅನುಕಶ್ರೀ ಗೌಡ ಹೀಗೆ ಹಾಸಿಗೆ ಹಿಡಿದು ಬರೋಬ್ಬರಿ 4 ವರ್ಷಗಳು ಕಳೆದಿವೆ.

ಚಿಕಿತ್ಸೆ ವೇಳೆ ವೈದ್ಯರು ಅತಿಹೆಚ್ಚು ಔಷಧ ನೀಡಿದ್ದೇ ಆಕೆಯ ಈ ಸ್ಥಿತಿಗೆ ಕಾರಣ. ಆದರೆ, ಆರೋಪಿಗಳಿಗೆ ಮಾತ್ರ ಯಾವುದೇ ಶಿಕ್ಷೆಯಾಗಿಲ್ಲ. ಮೂವರು ಆರೋಪಿಗಳು ಒಂದೇ ದಿನ ಹಾಜರಾಗುವಂತೆ ಸೂಚಿಸಿದ್ದರೂ ಅವರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.

ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲೂ ದಾವೆ ಹೂಡಿರುವ ಪೋಷಕರು, ಇಂದಲ್ಲ ನಾಳೆ ಮಗಳು ಎಲ್ಲರಂತಾಗಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾದ ಪೊಲೀಸರು ಕೈಚೆಲ್ಲಿ ಕುಳಿತಿದ್ದಾರೆ.

ನಡೆದದ್ದೇನು
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಾಲಕಿಯ ತಂದೆ ಕೋರಮಂಗಲದ ಕೆಎಸ್‌ಆರ್‌ಪಿ ನೌಕರ ನಾಗರಾಜು, ಅನುಕಶ್ರೀ ಸ್ಥಳೀಯ ಶಾಲೆಯೊಂದರಲ್ಲಿ 2ನೇ ತರಗತಿ(4 ವರ್ಷದ ಹಿಂದೆ) ಓದುತ್ತಿದ್ದಳು. 2010ರ ಆಗಸ್ಟ್ 26ರಂದು ತಲೆನೋವು ಹಾಗೂ ಪದೇ ಪದೆ ವಾಂತಿಯಾದ ಕಾರಣ ಶಿಕ್ಷಕರು ಮನೆಗೆ ಕಳುಹಿಸಿದ್ದರು. ಅಲ್ಲಿಂದ ನೆಲಮಂಗಲದ ಮಾತೃಶ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಎಂದು ವಿವರಿಸಿದರು.

ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯ ಮಹೇಶ್ ಗಾಂಧಿ, ಮಕ್ಕಳ ತಜ್ಞನಲ್ಲದ ಡಾ.ವಿಜಯ್‌ಗೆ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು. ಅವರು ಬಾಲಕಿಗೆ 2 ಇಂಜೆಕ್ಷನ್ ನೀಡಿ ಔಷಧ ಬರೆದು ಕೊಟ್ಟರು. ಔಷಧ ತೆಗೆದುಕೊಂಡು ಬರುವಷ್ಟರಲ್ಲಿ ಆಕೆ ಅಸ್ವಸ್ಥಳಾಗಿದ್ದಳು. ತಕ್ಷಣ ಅದೇ ಆಸ್ಪತ್ರೆಗೆ ದಾಖಲು ಮಾಡಿಕೊಂಡ ವೈದ್ಯರು ಸುಮಾರು 2 ಗಂಟೆ ಯಾವುದೇ ಸುಳಿವು ನೀಡಲಿಲ್ಲ. ಆದರೆ ರಾತ್ರೋರಾತ್ರಿ ನಮ್ಮನ್ನು ಆಸ್ಪತ್ರೆಯಿಂದ ಹೊರಹಾಕಿದರು. ಅಂದೇ ರಾತ್ರಿ ಬಾಲಕಿಯನ್ನು ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಿದೆವು. ರೂ.2.5 ಲಕ್ಷ ವೆಚ್ಚವಾದರೂ ಪ್ರಯೋಜನವಾಗಲಿಲ್ಲ ಎಂದು ದುಃಖಿಸಿದರು.

ನಂತರ ಆಕೆಯನ್ನು ಬಿಜಿಎಸ್‌ಗೆ ದಾಖಲಿಸಲಾಯಿತು. ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದ ಮಕ್ಕಳ ತಜ್ಞ ರಘುನಾಥ್ ಹಾಗೂ ನರರೋಗ ತಜ್ಞ ವೈಕುಂಠರಾಜ್ ತಂಡ, ಅತಿ ಔಷಧ ನೀಡಿರುವುದರಿಂದ ಮೆದುಳು ನಿಷ್ಕ್ರಿಯವಾಗಿದೆ ಎಂದರು. ಅಲ್ಲಿ ಐದಾರು ತಿಂಗಳು ಚಿಕಿತ್ಸೆ ನೀಡಿದರೂ ಪ್ರಯೋಜನವಾಗದ ಕಾರಣ ಮನೆಗೆ ಕಳುಹಿಸಿದರು ಎಂದಾಗ ನಾಗರಾಜು ಕಣ್ಣೀರಾಗುತ್ತಾರೆ.

ದೇಹ ಬೆಳವಣಿಗೆ ನಿಂತಿಲ್ಲ : ಬಾಲಕಿಯ ಮೆದುಳು ಮಾತ್ರ ನಿಷ್ಕ್ರಿಯವಾಗಿದ್ದು, ದೇಹ ಸಾಮಾನ್ಯ ಮಕ್ಕಳಂತೆ ಬೆಳೆದಿದೆ. ಮಾತನ್ನು ಆಲಿಸುತ್ತಾಳೆ, ಪ್ರತಿಕ್ರಿಯಿಸುವುದಿಲ್ಲ. ಆಹಾರವನ್ನು ಪೋಷಕರೇ ತಿನ್ನಿಸಬೇಕು. ಈಗ ಆಕೆಗೆ 12 ವರ್ಷ ತುಂಬಿದೆ. ಈ ಸಂಬಂಧ ಡಾ.ಮಹೇಶ್ ಗಾಂಧಿ, ಡಾ.ವಿಜಯ್ ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ಉಸ್ತುವಾರಿ ವಸಂತ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ದುರಂತ ನಡೆದು ನಾಲ್ಕು ವರ್ಷ ಕಳೆದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. 3 ಬಾರಿ ಸಮನ್ಸ್ ನೀಡಿದ್ದರೂ ಆರೋಪಿಗಳು ಪೊಲೀಸರಿಗೆ ಸಿಗುತ್ತಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು, ವೈದ್ಯರ ನಿರ್ಲಕ್ಷ್ಯ ತನಿಖೆ ವೇಳೆ ಸಾಬೀತಾಗಿದ್ದು, ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.

-ಶಾಂತ ತಮ್ಮಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com