ಮಲೆ ಮಹದೇಶ್ವರರ ಬೆಟ್ಟ ಪ್ರಾಧಿಕಾರಕ್ಕೆ ಇದುವರೆಗೂ ನೇಮಕವಾಗದ ಸದಸ್ಯರು

ಪ್ರಾಧಿಕಾರಕ್ಕೆ ಸದಸ್ಯರನ್ನೇ ನೇಮಕ ಮಾಡದೆ ಮೊದಲ ಸಭೆ ನಡೆಸಲಾಗಿದೆ.
ಮಲೆ ಮಹದೇಶ್ವರ ದೇವಸ್ಥಾನ
ಮಲೆ ಮಹದೇಶ್ವರ ದೇವಸ್ಥಾನ
Updated on

ಮೈಸೂರು: ಮಹದೇಶ್ವರರು ಸಂಚರಿಸಿದ ಸ್ಥಳಗಳ ಅಭಿವೃದ್ಧಿಗಾಗಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬ ಭಕ್ತರ ಬಹುದಿನಗಳ ಬೇಡಿಕೆ ಈಡೇರಿದೆ. ಆದರೆ ಪ್ರಾಧಿಕಾರಕ್ಕೆ ಸದಸ್ಯರನ್ನೇ ನೇಮಕ ಮಾಡದೆ ಮೊದಲ ಸಭೆ ನಡೆಸಲಾಗಿದೆ.

ಮಲೆ ಮಹದೇಶ್ವರ ದೇವಸ್ಥಾನ ಈವರೆಗೆ ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟು, ರಾಜ್ಯದಲ್ಲಿಯೇ ಹೆಚ್ಚು ಆದಾಯವಿರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಮುಂದೆ ಈ ದೇವಸ್ಥಾನ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ.

ಮಹದೇಶ್ವರರು ಮಲೆ ಮಹದೇಶ್ವರಬೆಟ್ಟ ಮಾತ್ರವಲ್ಲದೇ ಕುಂತೂರು, ಸುತ್ತೂರು, ಭೀಮನ ಕೊಲ್ಲಿ, ಅಂಬಿಗರಹಳ್ಳಿ ಮೊದಲಾದ ಕಡೆ ಸಂಚರಿಸಿದ್ದಾರೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಪ್ರದೇಶಗಳನ್ನೆಲ್ಲಾ ಅಭಿವೃದ್ಧಿಪಡಿಸಲು ಪ್ರಾಧಿಕಾರ ರಚಿಸಬೇಕು ಎಂದು ಮಹದೇಶ್ವರ ಜಯಂತ್ಯುತ್ಸವ ಸಮಿತಿಯು ಆಗ್ರಹಿಸಿತ್ತು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಯಂತಿ ಆಚರಿಸಿತ್ತು. ನಂತರ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಮಾಗಮದಿಂದ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರ ಎನಿಸಿರುವ ಅಂಬಿಗರಹಳ್ಳಿಯ ಬಳಿ ಪ್ರಥಮ ಕುಂಭಮೇಳವನ್ನು ಕೂಡ ನಡೆಸಿತ್ತು.

ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಸ್ವಾಮೀಜಿ ನೇತೃತ್ವವಹಿಸಿದ್ದರು. ಕನಕ ಗುರುಪೀಠ ಸೇರಿದಂತೆ ಹತ್ತು ಹಲವು ಮಠಾಧೀಶರು ಈ ಕಾರ್ಯಕ್ಕೆ ಕೈಜೋಡಿಸಿದ್ದರು.

ಇವರೆಲ್ಲರ ಬೇಡಿಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದೇಶ್ವರ ಬೆಟ್ಟ ಪ್ರಾಧಿಕಾರ ರಚಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್ .ಎಸ್.ಮಹದೇವಪ್ರಸಾದ್ ಅವರ ಒತ್ತಾಸೆ ಕೂಡ ಇಲ್ಲಿ ಕೆಲಸ ಮಾಡಿದೆ.

ಕಳೆದ ವಾರ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಪ್ರಥಮ ಸಭೆ ನಡೆಸಿದ್ದಾರೆ. ಅವರೇ ಈ ಪ್ರಾಧಿಕಾರದ ಅಧ್ಯಕ್ಷರು. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿಯಾದ ಡಿ.ಭಾರತಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಪ್ರಾಧಿಕಾರದ ಕಾಯ್ದೆಯ ಪ್ರಕಾರ ಐವರು ಸದಸ್ಯರ ನೇಮಕವಾಗಬೇಕಿದೆ. ಈ ಪೈಕಿ ತಲಾ ಒಬ್ಬರು ಪರಿಶಿಷ್ಟ ಜಾತಿ, ವರ್ಗ ಮತ್ತು ಮಹಿಳಾ ಪ್ರತಿನಿಧಿ. ಇನ್ನಿಬ್ಬರು ಸಾಮಾನ್ಯ ವರ್ಗದವರು.

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com