ಪ್ರತಿ ಪಕ್ಷಗಳ ಸೆಣಸು, ಸ್ವಪಕ್ಷೀಯರ ಮುನಿಸು

ಬೆಳಗಾವಿಯಲ್ಲಿ ಮಂಗಳವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಸಿಎಂ ಸಿದ್ದರಾಮಯ್ಯ...
ಬೆಳಗಾವಿ ಸುವರ್ಣ ವಿಧಾನಸೌಧ (ಸಂಗ್ರಹ ಚಿತ್ರ)
ಬೆಳಗಾವಿ ಸುವರ್ಣ ವಿಧಾನಸೌಧ (ಸಂಗ್ರಹ ಚಿತ್ರ)
Updated on

-ರಾಘವೇಂದ್ರ ಭಟ್
ಬೆಂಗಳೂರು:
ಬೆಳಗಾವಿಯಲ್ಲಿ ಮಂಗಳವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಸಿಎಂ ಸಿದ್ದರಾಮಯ್ಯ ಪಾಲಿಗೆ ವಿಷಮ ಸಮರಾಂಗಣವಾಗಿ ಪರಿಣಮಿಸಿದ್ದು 'ಪ್ರತಿಪಕ್ಷಗಳ ಜತೆ ಸೆಣಸು, ಸ್ವಪಕ್ಷೀಯರ ಮುನಿಸ'ನ್ನು ಎದುರಿಸಲೇಬೇಕಾದ ಸನ್ನಿವೇಶ ನಿರ್ಮಿಸಿದೆ.

ಪಂಚ ಸಚಿವರ ಪದತ್ಯಾಗಕ್ಕೆ ಆಗ್ರಹಸಿ ಪ್ರತಿಪಕ್ಷ ಬಿಜೆಪಿ ಹೆಣೆದಿರುವ ಉತ್ತರ ಸ್ವೀಕಾರ ನಿರಾಕರಣ ಸೂತ್ರ ಸರ್ಕಾರವನ್ನು ಸದನದೊಳಗೆ ತೀವ್ರ ಮುಜುಗರಕ್ಕೆ ಸಿಲುಕಿಸಲಿದ್ದು, ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಸಿದ್ದರಾಮಯ್ಯನವರಿಗೆ ಕಹಿ ಮಾತ್ರೆ ನೀಡುವ ಸಾಧ್ಯತೆ ಇದೆ. ಇನ್ನು ನಿಗಮ-ಮಂಡಳಿಯಲ್ಲಿ ಸ್ಥಾನ ವಂಚಿತರಾದ ಕಾರಣಕ್ಕೆ ವ್ಯಗ್ರಗೊಂಡಿರುವ ಕಾಂಗ್ರೆಸ್‌ನ ಕೆಲ ಸದಸ್ಯರೂ ಬುಧವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರುಗಿ ಬೀಳಲು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸ್ಫೋಟಗೊಳ್ಳಬಹುದಾದ ಅಸಮಾಧನದ ತೀವ್ರತೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರಿಗೆ ಈಗಾಗಲೇ ತಲುಪಿದೆ. ಹೀಗಾಗಿ ಸಭೆಯ ಅಜೆಂಡಾ ಏನು? ಪ್ರತಿಪಕ್ಷಗಳಿಗೆ ಯಾವ ರೀತಿ ಉತ್ತರ ನೀಡಬೇಕು ಎಂಬ ಮುನ್ಸೂಚನೆಯನ್ನು ತಮ್ಮದೇ ಶಾಸಕರಿಗೆ ನೀಡುವ ಗೊಡವೆಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಹೋಗಿಲ್ಲ. ಬುಧವಾರ ಬೆಳಗ್ಗೆ 11 ಗಂಟೆಗೆ ಸುವರ್ಣಸೌಧದಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಬೇಕೆಂಬ ಸೂಚನೆ ಮಾತ್ರ ಮುಖ್ಯ ಸಚೇತಕರಿಂದ ರವಾನೆಯಾಗಿದೆ.

ಅಧಿವೇಶನ ಆರಂಭವವಾಗುವುದಕ್ಕೆ ಒಂದು ದಿನ ಮುಂಚಿತವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ, ಆಗ ಮಾತ್ರ ಸರ್ಕಾರದ ಧೋರಣೆ ಏನು? ಶಾಸಕರು ಹೇಗೆ ಪ್ರತಿಸ್ಪಂದಿಸಬೇಕು? ವಿಧೇಯಕ ಮಂಡನೆ ಸಂದರ್ಭದಲ್ಲಿ ಹೇಗೆ ಸಿದ್ದರಾಗಬೇಕು ಎಂಬುದು ನಿರ್ಧಾರವಾಗುತ್ತದೆ. ಶಾಸಕಾಂಗ ಪಕ್ಷದ ಸಭೆ ನಮ್ಮ ಕುಂದುಕೊರತೆ  ಹೇಳಿಕೊಳ್ಳುವುದಕ್ಕೆ ಮಾತ್ರ ಇರುವಂಥದಲ್ಲ ಎಂದು ಕಳೆದ ಬಾರಿಯೇ ಶಾಸಕರು ಸಿದ್ದರಾಮಯ್ಯನವರ ಎದುರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿಯೂ ಅದೇ ತಪ್ಪು ಮುಂದುವರಿದಿದ್ದು, ಅಧಿವೇಶನದ ಎರಡೇ ದಿನ ಸಭೆ ಕರೆಯಲಾಗಿದೆ.

ಇದಕ್ಕೆ ಕಾರಣ ನಿಗಮ-ಮಂಡಳಿಯಲ್ಲಿ ಸ್ಥಾನಸಿಕ್ಕಿಲ್ಲ ಎಂಬ ಶಾಸಕರ ಸಹಜ ಆಕ್ರೋಶ. ಕಲಾಪಕ್ಕೆ ಆರಂಭಕ್ಕೂ ಮುನ್ನವೇ ವಿರೋಧವನ್ನು ಉಡಿಯಲ್ಲಿ ಕಟ್ಟಿಕೊಳ್ಳುವುದು ಬೇಡ ಎಂಬ ತಂತ್ರಕ್ಕೆ ಶರಣಾಗಿರುವ ಸಿದ್ದರಾಮಯ್ಯ ಒಂದು ದಿನ ತಡವಾಗಿ ಸಭೆ ಕರೆದಿದ್ದಾರೆ. ಹಾಗೆಂದ ಮಾತ್ರಕ್ಕೆ ವಿರೋಧದ ಪ್ರಮಾಣವೇನೂ ಕಡಿಮೆಯಾಗಲಿಕ್ಕಿಲ್ಲ. ಕಿವಿ ಕೇಳದ, ಎದ್ದು ಓಡಾಡಲಾರದ, ಸದನದಲ್ಲಿ ಮಾತನಾಡದ ಸಚಿವರನ್ನು ತಮ್ಮದೇ ಶಾಸಕರ ಎದುರು ಸಮರ್ಥಿಸಿಕೊಳ್ಳುವುದು ನಿಜಕ್ಕೂ ಸಿದ್ದರಾಮಯ್ಯನವರಿಗೆ ಸವಾಲೇ ಸರಿ.

7 ಹೊರಗೆ, 10 ಒಳಗೆ

ಇನ್ನು ಬೆಳಗಾವಿ ಅಧಿವೇಶನವನ್ನೂ ತಮ್ಮ ರಾಜಕೀಯ ಜಾಣ್ಮೆ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಆರೋಪ ಎದುರಿಸುತ್ತಿರುವ ಪಂಚ ಸಚಿವರ ಪದತ್ಯಾಗಕ್ಕೆ ಆಗ್ರಹಿಸಿ ಬಿಜೆಪಿ ಮುಂಬರುವ ದಿನಗಳಲ್ಲಿ ಭಾರಿ ಹೋರಾಟ ನಡೆಸಲಿದೆ. ಆದರೆ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.

ಪ್ರತಿಪಕ್ಷಗಳ ಒತ್ತಡವನ್ನೇ ನೆವವಾಗಿಸಿಕೊಂಡು ಆರೋಪಿತ ಸಚಿವರ ಪೈಕಿ ಮೂವರನ್ನು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕೈ ಬಿಡುವುದಕ್ಕೆ ಅಧಿವೇಶನ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ನೆರವು ನೀಡುವ ಸಾಧ್ಯತೆ ಇದೆ. ನಾನಾ ಕಾರಣಗಳಿಂದ ಸಂಪುಟದಿಂದ ಹೊರಗೆ ಉಳಿದಿರುವ ರಮೇಶ್ ಕುಮಾರ್, ಎ.ಮಂಜು, ಕೋಳಿವಾಡ ಅವರಂಥ ಹಿರಿಯ ಶಾಸಕರಿಗೆ ಇದರಿಂದ ಸಚಿವ ಸ್ಥಾನ ಒಲಿದು ಬರುವ ಸಾಧ್ಯತೆ ಇದ್ದು, ಆರೋಪ ಮತ್ತು ಸಾಮರ್ಥ್ಯ ಆಧರಿಸಿ 7 ಸಚಿವರನ್ನು ಸಂಪುಟದಿಂದ ಹೊರಗಿಟ್ಟು, ಬಿಟ್ಟ ಸ್ಥಾನದ ಭರ್ತಿಯೂ ಸೇರಿ 10 ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com