ಕನ್ನಡ ಸಭೆ ನಡೆಸಿದ ಪ್ರಾಧಿಕಾರ

ಆಯಾ ರಾಜ್ಯಗಳಲ್ಲಿ ಪರೀಕ್ಷೆ ನಡೆಸಿದಾಗ ಸ್ಥಳೀಯರಿಗೆ ಆದ್ಯತೆ...
ಡಾ.ಎಲ್.ಹನುಮಂತಯ್ಯ ನೇತೃತ್ವದಲ್ಲಿ ಹಿರಿಯ ಸಾಹಿತಿಗಳೊಂದಿಗೆ ಸಮಾಲೋಚನಾ ಸಭೆ
ಡಾ.ಎಲ್.ಹನುಮಂತಯ್ಯ ನೇತೃತ್ವದಲ್ಲಿ ಹಿರಿಯ ಸಾಹಿತಿಗಳೊಂದಿಗೆ ಸಮಾಲೋಚನಾ ಸಭೆ

ಬೆಂಗಳೂರು: ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನ, ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಭೆ ನಡೆಸಲಾಯಿತು.

ವಿಕಾಸಸೌಧದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ನೇತೃತ್ವದಲ್ಲಿ ಹಿರಿಯ ಸಾಹಿತಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.

ಪ್ರಾಧಿಕಾರವು ಕೈಗೊಂಡಿರುವ ಯೋಜನೆ, ಕನ್ನಡ ಮಾಧ್ಯಮ ಪ್ರಶಸ್ತಿ, ನ್ಯಾಯಾಂಗದಲ್ಲಿ ಕನ್ನಡ, ಕನ್ನಡ ಕಲಿಕಾ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುವುದು, ಕಂಪ್ಯೂಟರ್ ತಜ್ಞರ ಸಭೆಯನ್ನು ಕರೆಯುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಸಾಹಿತಿಗಳಾದ ಡಾ.ಎಂ.ಚಿದಾನಂತಮೂರ್ತಿ, ಪ್ರೊ.ಕೆ.ಎಸ್.ನಿಸಾರ್ ಅಹಮದ್, ಡಾ.ಚಂದ್ರಶೇಖರ ಕಂಬಾರ, ಪ್ರೊ.ಎಂ.ಎಚ್.ಕೃಷ್ಣಯ್ಯ, ನಾಗತಿಹಳ್ಳಿ ಚಂದ್ರಶೇಖರ್ ಹಾಜರಿದ್ದರು.

ಬ್ಯಾಂಕ್‌ಗೆ ಪತ್ರ: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿಯೂ ಕನ್ನಡ ಭಾಷೆಯ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡುವಂತೆ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಎಸ್‌ಬಿಐಗೆ ಪತ್ರ ಬರೆದಿದ್ದಾರೆ.

ಬ್ಯಾಂಕ್‌ನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ, ಕನ್ನಡಿಗರಿಗೆ ಆದ್ಯತೆ ನೀಡುವುದು, ಉದ್ಯೋಗಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡುವುದು, ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಕನ್ನಡಿಗರ ಹಾಗೂ ಕನ್ನಡೇತರರ ಸಂಖ್ಯೆ, ಕನ್ನಡ ಭಾಷಾ ಪರೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ, ಅಭ್ಯರ್ಥಿಗಳಿಗೆ ನಡೆಸಿರುವ ಪರೀಕ್ಷಾ ವಿವರ ಸೇರಿದಂತೆ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ನೀಡಿರುವ ಮಾನ್ಯತೆ ಬಗ್ಗೆ ಪತ್ರದಲ್ಲಿ ಮಾಹಿತಿ ಕೇಳಲಾಗಿದೆ.

ಸ್ಟೇಟ್ ಬ್ಯಾಂಕ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಆಯಾ ರಾಜ್ಯಗಳಲ್ಲಿ ಪರೀಕ್ಷೆ ನಡೆಸಿದಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕಾಗುತ್ತದೆ.

ಆದರೆ ಇತ್ತೀಚೆಗೆ ಪರೀಕ್ಷೆ ನಡೆದಾಗ ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂದು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸೂಕ್ತ ಮಾಹಿತಿ ನೀಡಬೇಕು ಎಂದು ಪ್ರಾಧಿಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com