ಸಕ್ಕರೆ ಕಾರ್ಖಾನೆಗಳೂ ಎಸ್ಮಾಗೆ ಬರಲಿ

ಕಳೆದ ವರ್ಷ ಸರ್ಕಾರ ಪ್ರತಿ ಟನ್ ಕಬ್ಬಿಗೆ ರೂ.2500 ದರ ನಿಗದಿ ಮಾಡಿತ್ತು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಸುವರ್ಣಸೌಧ(ವಿಧಾನಸಭೆ): ಸುಮಾರು ಮೂರುವರೆ ಗಂಟೆಗೂ ಹೆಚ್ಚು ಕಾಲ ಸದನದಲ್ಲಿ ಸರ್ಕಾರಕ್ಕೆ 'ಕಬ್ಬಿಗರಕಾವು' ಮುಟ್ಟಿಸಿದ ಪ್ರತಿಪಕ್ಷಗಳ ಮುಖಂಡರು ಕಬ್ಬು ಬೆಳೆಗಾರರು ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಸರ್ಕಾರ ಹಾಗೂ ಮುಖ್ಯಮಂತ್ರಿನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
 
ನಿಯಮ 69ರ ಪ್ರಕಾರ ಮಂಗಳವಾರ ಆರಂಭವಾದ ಚರ್ಚೆಯಲ್ಲಿ, 'ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿದಿದೆ. ಸಕ್ಕರೆ ಕಾರ್ಖಾನೆಯನ್ನು ಎಸ್ಮಾ ಕಾಯಿದೆ ಒಳಗೆ ಸೇರ್ಪಡೆ ಮಾಡಿ. ಸಕ್ಕರೆ ಕಾರ್ಖಾನೆ ಮಾಲೀಕರು ಯಾವುದೇ ಪಕ್ಷದಲ್ಲಿದ್ದರೂ ಅವರನ್ನು ಜೈಲಿಗೆ ಅಟ್ಟಿ, ರೈತರಿಗೆ ಪ್ರತಿಟನ್ ಕಬ್ಬಿಗೆ ರೂ.2.500 ನೀಡದ ಸಕ್ಕರೆ ಕಾರ್ಖಾನೆ ಮಾಲೀಕರ ಪ್ರಾಥಮಿಕ ಸದಸ್ಯತ್ವವವನ್ನು ರಾಜಕೀಯ ಪಕ್ಷಗಳು ರದ್ದು ಮಾಡಬೇಕು' ಎಂಬ ಒತ್ತಾಯ ಕೇಳಿಬಂತು.

ತತ್ತರಗೊಂಡಿರುವ ಕಬ್ಬು ಬೆಳೆಗಾರರ ಬಗ್ಗೆ ಸುದೀರ್ಘ ಚರ್ಚೆ ನಡೆದು ಸದನವನ್ನು ಬುಧವಾರ ಮುಂದೂಡಲಾಯಿತು.

ಚರ್ಚೆ ಆರಂಭಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕಳೆದ ವರ್ಷ ಸರ್ಕಾರ ಪ್ರತಿ ಟನ್ ಕಬ್ಬಿಗೆ ರೂ.2500 ದರ ನಿಗದಿ ಮಾಡಿತ್ತು. ಸಕ್ಕರೆ ಕಾರ್ಖಾನೆ ಮಾಲೀಕರಿಂದ ರೂ.2500ನಂತೆ ವಸೂಲಿ ಮಾಡಿ ರೈತರಿಗೆ ಕೊಡುವ ಭರವಸೆ ನೀಡಿತ್ತು.

ಆದರೆ ಇದುವರೆಗೂ ಈ ಕೆಲಸ ಆಗಿಲ್ಲ. ಕಾರ್ಖಾನೆ ಮಾಲೀಕರು ಸರ್ಕಾರದ ಈ ನಿರ್ಧಾರದ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಸರ್ಕಾರದ ನಿರ್ಧಾರವನ್ನೇ ಎತ್ತಿ ಹಿಡಿಯಿತು. ನ್ಯಾಯಾಲಯ ಕೂಡ ಸರ್ಕಾರಕ್ಕೆ ಅಧಿಕಾರ, ಶಕ್ತಿ ನೀಡಿದರೂ ಸರ್ಕಾರ ಮಾತ್ರ ಅಸಹಾಯಕವಾಗಿ ಕುಳಿತಿದೆ ಎಂದು ಲೇವಡಿ ಮಾಡಿದರು.

ಸರ್ಕಾರ ಸಕ್ಕರೆ ಲಾಬಿಗೆ ಮಣಿದಿದೆ. ಕಳೆದ ವರ್ಷ ವಿಠ್ಠಲ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ. ಸರ್ಕಾರ ಕಣ್ಣು ತೆರೆಯಬೇಕಾದರೆ ಇನ್ನಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು. ರಾಜ್ಯದ 62 ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 1832 ಕೋಟಿ ರೂ ಬರಬೇಕಾಗಿದೆ.

ಸರ್ಕಾರ ವಸೂಲಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸರ್ಕಾರದ ನಿಲುವು ಏನು ಎನ್ನುವುದು ಸ್ಪಷ್ಪವಾಗಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯ ದೊರಕಿಸಬೇಕು. ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ರಮೇಶ ಕುಮಾರ್, ಬೆಂಬಲ ಬೆಲೆ ಬೇಡ. ಬೆಂಬಲ ಬೆಲೆ ಕೊಡುವ ಮೂಲಕ ರೈತರನ್ನು ಭಿಕ್ಷುಕರನ್ನಾಗಿ ಮಾಡುವ ಪ್ರವೃತ್ತಿ ಸಲ್ಲದು. ಬೆಳೆ ಬೆಳೆಯಲು ಎಷ್ಟು ವೆಚ್ಚವಾಗುತ್ತದೆ ಎಂದು ಲೆಕ್ಕ ಹಾಕಿ ವೈಜ್ಞಾನಿಕ ಬೆಲೆ ಕೊಡುವಂತಾಗಬೇಕು ಎಂದು ಪ್ರತಿಪಾದಿಸಿದರು.

ಈ ವಿವಾದವನ್ನು ಒಪ್ಪಿಕೊಂಡ ಶೆಟ್ಟರ್, ಸರ್ಕಾರ ಬೆಂಬಲ ಬೆಲೆ ಕೊಡಲೂ ಸಿದ್ಧವಿಲ್ಲ. ಇನ್ನು ವೈಜ್ಞಾನಿಕ ಬೆಲೆ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ರೈತರಿಗೆ ಹಣ ನೀಡದ ಕಾರ್ಖಾನೆಯನ್ನು ಜಪ್ತಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದೀರಿ. ಆದರೆ ಮಾಲೀಕರು ಸಕ್ಕರೆ ಮಾರಿದ್ದಾರೆ. ಆಸ್ತಿ ಮೇಲೆ ಸಾಲ ಮಾಡಿಕೊಂಡಿದ್ದಾರೆ.

ಈಗ ಜಪ್ತಿ ಮಾಡಲು ಹೋದರೆ ಆ ಸಾಲವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದರು. ಬಿಜೆಪಿಯ ಲಕ್ಷ್ಮಣ ಸವದಿ, ಜೆಡಿಎಸ್‌ನ ಶಿವಲಿಂಗೇಗೌಡ ಮತ್ತು ಕೋನರೆಡ್ಡಿ, ಕಾಂಗ್ರೆಸ್‌ನ ಶಇವಲಿಂಗೇ ಗೌಡ ಮತ್ತು ಕೋನರೆಡ್ಡಿ, ಕಾಂಗ್ರೆಸ್‌ನ ರಮೇಶ್‌ಕುಮಾರ ಚರ್ಚೆಯಲ್ಲಿ ಭಾಗವಹಿಸಿದ್ದರು.

-ವಸಂತಕುಮಾರ ಕತಗಾಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com