ವೈದ್ಯ ಸೀಟು ಅಕ್ರಮ: ಅಭ್ಯರ್ಥಿಗಳೇ ನಾಪತ್ತೆ!

ಅಭ್ಯರ್ಥಿಗಳು ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ...
ವೈದ್ಯ ಸೀಟು ಅಕ್ರಮ
ವೈದ್ಯ ಸೀಟು ಅಕ್ರಮ

ಬೆಂಗಳೂರು: ಲಕ್ಷಾಂತರ ರೂಪಾಯಿ ಹಣ ಕಟ್ಟಿದ 'ಕಾಮೆಡ್-ಕೆ'ಯ 546 ಅಭ್ಯರ್ಥಿಗಳಿಗೆ 10ನೇ ತರಗತಿ ಹಾಗೂ ಪಿಯು ಅಂಕಪಟ್ಟಿಯಂಥ ಅತ್ಯಮೂಲ್ಯ ಶೈಕ್ಷಣಿಕ ದಾಖಲೆಗಳೇ ಬೇಡವಾಗಿದೆ!

ಹಣಕ್ಕಾಗಿ ಪರೀಕ್ಷೆ ಬರೆದು ವೈದ್ಯ ಸೀಟು ಸರೆಂಡರ್ ಮಾಡುವ ಬಹುಕೋಟಿ ರೂಪಾಯಿಯ ದಂಧೆಯನ್ನು ಸಿಸಿಬಿ ಪೊಲೀಸರು ಬಯಲಿಗೆಳೆಯುತ್ತಿದ್ದಂತೆ, ಪರೀಕ್ಷೆ ಬರೆದಿದ್ದ ನೂರುರು ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದಾರೆ.

ಶೈಕ್ಷಣಿಕ ದಾಖಲೆ, ಹಣ ವಾಪಸ್ ಪಡೆಯಲೂ ಅವರು ಇತ್ತ ತಲೆ ಹಾಕಿಲ್ಲ. ಕೊನೆಪಕ್ಷ ಈ ಕಾರಣಕ್ಕಾದರೂ ಅಭ್ಯರ್ಥಿಗಳು ರಾಜ್ಯಕ್ಕೆ ಬರುತ್ತಾರೆ, ಆಗ ಬಂಧಿಸಬಹುದು ಎನ್ನುವ ಸಿಸಿಬಿ ಅಧಿಕಾರಿಗಳ ನಿರೀಕ್ಷೆ ತಲೆಕೆಳಗಾಗಿದೆ. ಹೀಗಾಗಿ ತನಿಖೆ ಹಿನ್ನಡೆಯಾಗಿದೆ.

ನಕಲಿ ದಾಖಲೆಗಳು: ಅಭ್ಯರ್ಥಿಗಳು ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಕಲಿ ದಾಖಲೆ  ಸಲ್ಲಿಕೆ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇನ್ನು, ಕಾಮೆಡ್ ಕೆ ಸೀಟು ಘೋಷಿಸಿದ ಅಭ್ಯರ್ಥಿಗಳಿಂದ ನಿಗದಿತ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅಭ್ಯರ್ಥಿ ಕೌನ್ಸಲಿಂಗ್‌ನ ಬಳಿಕ ಸೀಟು ಸರೆಂಡರ್ ಮಾಡಿದರೆ ಶುಲ್ಕ ಮರಳಿಸಲಾಗುತ್ತದೆ. ಅಭ್ಯರ್ಥಿಗಳು ಹಣ ಪಡೆಯಲಾದರೂ ಕಾಲೇಜಿಗೆ ಬಂದೇ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಏಜೆಂಟರೇ ಕಾಲೇಜಿಗೆ ಅಭ್ಯರ್ಥಿಗಳ ಶುಲ್ಕ ಭರಿಸಿರಬಹುದೇ? ಹಗರಣ ಬಯಲಾದ ನಂತರ ಬಂಧನ ಭೀತಿಯಿಂದ ವಿದ್ಯಾರ್ಥಿಗಳೇ ಬಾರದಿದ್ದರಬಹುದೇ? ಇಂಥ ಅನುಮಾನಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅಸಹಕಾರ: ಅಭ್ಯರ್ಥಿಗಳನ್ನು ಪತ್ತೆ ಹಚ್ಚಲು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಒಂದು 'ಸ್ಮಾರ್ಟ್ ಪ್ಲ್ಯಾನ್‌' ಮಾಡಿದ್ದರು. ಫೋಟೋ, ಹೆಸರು, ದೂರವಾಣಿ ಸಂಖ್ಯೆ, ವಿಳಾಸ ಸಹಿತ 18 ರಾಜ್ಯಗಳ 550ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದರು. ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಕಳಿಸಿ ತನಿಖೆಗೆ ಸಹಕಾರ ಕೋರಿದ್ದರು. ಉತ್ತರಪ್ರದೇಶ ಮತ್ತೊಂದು ರಾಜ್ಯದಿಂದ ಮಾತ್ರ ಉತ್ತರ ಬಂದಿದೆ. ಬೇರೆ ಯಾವ ರಾಜ್ಯವೂ ಸ್ಪಂದಿಸಿಲ್ಲ ಎಂದು ಡಿಸಿಪಿ ಅಭಿಷೇಕ್ ಗೋಯಲ್ ತಿಳಿಸಿದ್ದಾರೆ.

2014ರ ಮೇ ತಿಂಗಳಿನಲ್ಲಿ ಕಾಮೆಡ್ ಕೆ ಪರೀಕ್ಷೆ ಬರೆದ ಉತ್ತರ ಭಾರತ ಮೂಲದ 20ಕ್ಕೂ ಅಧಿಕ ಅಭ್ಯರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು.

ಕಾಮೆಡ್-ಕೆ ಸೀಟು: ಹಣ, ದಾಖಲೆ ಪಡೆಯಲೂ ಬಾರದ ವಿದ್ಯಾರ್ಥಿಗಳು
ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳು ಹಾಗೂ ಕಟ್ಟಿದ್ದ ಶುಲ್ಕ ವಾಪಸ್ ಪಡೆದುಕೊಳ್ಳಲು ಕಾಲೇಜುಗಳಿಗೆ ಬರುತ್ತಿಲ್ಲ. ಹೀಗಾಗಿ ಅವರು ಸಲ್ಲಿಸಿರುವ ದಾಖಲೆಗಳು ಅಸಲಿಯೇ, ನಕಲಿಯೇ ಎನ್ನುವ ಅನುಮಾನ ಕಾಡುತ್ತಿದೆ. -ಅಭಿಷೇಕ್ ಗೋಯಲ್, ಡಿಸಿಪಿ ಸಿಸಿಬಿ

-ಮಂಜುನಾಥ್ ನಾಗಲೀಕರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com