ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ (ಸಾಂದರ್ಭಿಕ ಚಿತ್ರ)
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ (ಸಾಂದರ್ಭಿಕ ಚಿತ್ರ)

ಬಂಡೀಪುರಕ್ಕೆ ಸದ್ಯದಲ್ಲೇ ಆನೆ ಬಲ

ಹುಲಿ, ಕಾಡಾನೆಗಳ ಕಾಟ: ಸರ್ಕಾರಕ್ಕೆ ಜಮೀನು ನೀಡಲು ಮುಂದಾದ ರೈತರು

-ವಿನೋದ್ ಕುಮಾರ್ ಬಿ. ನಾಯಕ್
ಬೆಂಗಳೂರು:
ಇಡೀ ದೇಶದಲ್ಲಿ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿರುವ ರಾಜ್ಯದ ಹೆಮ್ಮೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸದ್ಯದಲ್ಲೇ ಆನೆ ಬಲ ಸಿಗಲಿದೆ. ಬಂಡೀಪುರ ಪ್ರದೇಶಕ್ಕೆ ಶೀಘ್ರದಲ್ಲೇ ಇನ್ನಷ್ಟು ಭೂಮಿ ಸೇರ್ಪಡೆಯಾಗಲಿದ್ದು, ಇಡೀ ರಾಷ್ಟ್ರೀಯ ಉಧ್ಯಾನವನ ಬಾರಿ ದೊಡ್ಡ ಪ್ರಮಾಣದಲ್ಲಿ ವಿಸ್ತಾರಗೊಳ್ಳಲಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಇದೀಗ ಹೊಸದಾಗಿ 878 ಎಕರೆ ಕೃಷಿ ಭೂಮಿ ಸೇರ್ಪಡೆಯಾಗಲಿದ್ದು, ಹುಲಿ ಹಾಗೂ ಆನೆಗಳ ಸಂತಾನಾಭಿವೃದ್ಧಿ ಮತ್ತು ಓಡಾಟಕ್ಕೆ ಇನ್ನಷ್ಟು ಜಾಗ ಒದಗಿಸಿಕೊಡಲಿದೆ.

ಬಂಡೀಪುರ ಸುತ್ತಮುತ್ತಲಿನ ಚಿಕ್ಕ ಎಲಚೆಟ್ಟಿ, ಕೆಬ್ಬೆಪುರ, ಯರಿಯೂರು, ಲೊಕ್ಕೆರೆ, ಬಾಚಹಳ್ಳಿ ಮತ್ತು ಕಣಿಯನಪುರ ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ಗ್ರಾಮಗಳ ರೈತರು ತಮ್ಮ ಜಮೀನನ್ನು ಸ್ವಯಂ ಪ್ರೇರಿತರಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಈ ಎಲ್ಲ ರೈತರಿಂದ ಸರ್ಕಾರ ಹಣಕೊಟ್ಟು ಭೂಮಿ ಖರೀದಿ ಮಾಡಲಿದೆ.

ಹಣ ಕೊಟ್ಟರೆ ಜಮೀನು ಕೊಡಲು ಸಿದ್ಧ
ಈ ರೈತರ ಜಮೀನುಗಳು ಅರಣ್ಯಕ್ಕೆ ಅತೀ ಸಮೀಪದಲ್ಲೇ ಇವೆ. ಅಷ್ಟೇ ಅಲ್ಲ, ಆನೆಗಳ ಕಾರಿಡಾರ್ ಇರುವ ಜಾಗದಲೆಲ್ಲಾ ಕೃಷಿ ಭೂಮಿಗಳಿವೆ. ಆದ್ದರಿಂದ ಆನೆಗಳು ಈ ಕೃಷಿ ಜಮೀನುಗಳ ಮೇಲೆ ಸದಾ ದಾಳಿ ಮಾಡುತ್ತಾ ಬೆಳೆ ಹಾಳಾಗುತ್ತಿದೆ. ಅಲ್ಲದೇ ಸದಾ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದರಿಂದ ಈ ಭಾಗದ ರೈತರು ಬೇಸತ್ತಿದ್ದು, ಅನೇಕ ವರ್ಷಗಳಿಂದ ಕೃಷಿ ಮಾಡದೇ ರೈತರು ಜಮೀನುಗಳನ್ನು ಪಾಳು ಬಿಟ್ಟಿದ್ದರು. ಸರ್ಕಾರ ಹಣ ಕೊಡುವುದಾದರೆ ತಮ್ಮ ಕೃಷಿ ಭೂಮಿಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸಿದ್ದ ಅಂತಾ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ರೈತರ ಪಟ್ಟಿ ರೆಡಿ ಮಾಡಿರುವ ಅರಣ್ಯಾಧಿಕಾರಿಗಳು ಅದನ್ನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಚಿಕ್ಕ ಎಲಚೆಟ್ಟಿ, ಕೆಬ್ಬೆಪುರ, ಯರಿಯೂರು, ಲೊಕ್ಕೆರೆ, ಬಾಚಳ್ಳಿ ಮತ್ತು ಕಣಿಯನಪುರ ಗ್ರಾಮಗಳ ಜಮೀನು ಖರೀದಿ ಪ್ರಕ್ರಿಯೆ ಶುರುವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಎರಡು ಸುತ್ತಿನ ಸಭೆ ನಡೆಸಲಾಗಿದೆ, ರೈತರ ದಾಖಲೆಗಳ ಪರಿಶೀಲನೆ ಆಗುತ್ತಿದ್ದಂತೆಯೇ ಭೂಮಿ ಖರೀದಿ ಶುರುವಾಗಲಿದೆ. ರೈತರಿಂದ ಖರೀದಿಸಲಾಗುವ ಈ 878 ಎಕರೆ ಜಮೀನು ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಲ್ಲಿ ನೋಂದಣಿಯಾಗಲಿದೆ.

ಶೀಘ್ರದಲ್ಲೇ ಜಮೀನು ಸರ್ಕಾರಕ್ಕೆ ಹಸ್ತಾಂತರ; ಸಮಿತಿ ರಚನೆ

ಅರಣ್ಯ ಇಲಾಖೆಯ ಈ ಯೋಜನೆಗೆ ಕ್ಷಿಪ್ರವಾಗಿ ಸ್ಪಂದಿಸಿರುವ ಚಾಮರಾಜನಗರ ಡಿಸಿ ಕುಂಜಪ್ಪ, ಕೊಳ್ಳೆಗಾಲ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈ ಕಂದಾಯ ಸಮಿತಿ ಅಗತ್ಯ ದಾಖಲೆಗಳನ್ನು ಸಿದ್ದಪಡಿಸುತ್ತಿದೆ. ಈಗ ಸರ್ಕಾರಕ್ಕೆ ಜಮೀನು ನೀಡಲು ಮುಂದಾಗಿರುವ ರೈತರಿಗೆ ಬೇರೆ ಕಡೆಯೂ ಜಮೀನಿದೆ.

ಬಂಡೀಪುರದಿಂದ ದೂರದಲ್ಲಿರುವ ಊರುಗಳಲ್ಲಿರುವ ರೈತರು ಕಾಡಿನ ಪಕ್ಕದಲ್ಲಿಯೂ ಜಮೀನು ಖರೀದಿಸಿದ್ದರು. ಈಗ ಯಾವ ರೈತರು ಈ ಜಮೀನನ್ನು ಮಾತ್ರ ನಂಬಿಕೊಂಡಿಲ್ಲವೋ ಅಂತಹ ರೈತರು ಜಮೀನು ಸರ್ಕಾರಕ್ಕೆ ನೀಡಿ ತಂತಮ್ಮ ಊರಿನಲ್ಲಿ ಕೃಷಿ ಮುಂದುವರೆಸಲು ನಿರ್ಧರಿಸಿದ್ದಾರೆ. ಅಲ್ಲದೇ ತಮ್ಮ ಜಮೀನು ಖರೀದಿಸಿ ಕಾಡು ಪ್ರಾಣಿಗಳ ಉಪಟಳ ತಪ್ಪಿಸಿ ಅಂತಾ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಖರೀದಿ ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ.

ರೈತರು ಸ್ವಯಂಪ್ರೇರಿತರಾಗಿ ತಮ್ಮ ಜಮೀನನ್ನು ಸರ್ಕಾರಕ್ಕೆ ಕೊಡಲು ಮುಂದೆ ಬಂದಿದ್ದಾರೆ. ಸರ್ಕಾರದ ವಶಕ್ಕೆ ಬಂದ ನಂತರ ಕೃಷಿ ಭೂಮಿಗೆ ಆನೆಗಳು ದಾಳಿ ಇಡುವುದೂ ಕಡಿಮೆಯಾಗುತ್ತದೆ. ಆನೆ ಮತ್ತು ಮಾನವ ಸಂಘರ್ಷ ಗಣನೀಯವಾಗಿ ತಗ್ಗಲಿದೆ. ಬಂಡೀಪುರ ವಿಸ್ತೀರ್ಣ ಹೆಚ್ಚಳವಾಗುತ್ತದೆ. ಇಡೀ ಕಾಡು ಮತ್ತು ಪ್ರಾಣಿಗಳ ಸಮೃದ್ಧಿಗೆ ಇದು ಸಹಕಾರಿಯಾಗಲಿದೆ.

-ಎಚ್‌ಸಿ ಕಾಂತರಾಜು, ನಿರ್ದೇಶಕರು
ಬಂಡೀಪುರ ಹುಲಿಧಾಮ

Related Stories

No stories found.

Advertisement

X
Kannada Prabha
www.kannadaprabha.com