ಭೀತಿ ಹುಟ್ಟಿಸಿದ ಶಂಕಾಸ್ಪದ ವಸ್ತು: ಇಡೀ ಗೂಡ್ಸ್ ರೈಲು ತಪಾಸಣೆ

ಅನುಮಾನಸ್ಪದ ವಸ್ತು ಗಮನಿಸಿದ ಗಾರ್ಡ್ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ಕಾರುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಬಾಂಬ್ ನಂತಹ ಅನುಮಾನಸ್ಪದ ವಸ್ತು ಕಂಡುಬಂದ ಕಾರಣ ಇಡೀ ರೈಲು ಹಾಗೂ ಹಳಿಗಳ ತಪಾಸಣೆ ನಡೆಸಿರುವ ಘಟನೆ ಗುರುವಾರ ರಾತ್ರಿ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ.
ದೆಹಲಿ ಸಮೀಪದ ಗುರ್‌ಗಾಂವ್‌ನಿಂದ ಹೊಸ ಕಾರುಗಳನ್ನು ಸರಕು ಸಾಗಣೆ ರೈಲಿನಲ್ಲಿ ತುಮಕೂರು ಜಿಲ್ಲೆ ದಾಬಸ್‌ಪೇಟೆ ಸಮೀಪದ ನಿಡವಂದ ರೈಲು ನಿಲ್ದಾಣದತ್ತ ಕೊಂಡೊಯ್ಯಲಾಗುತ್ತಿತ್ತು.

ಗುರುವಾರ ರಾತ್ರಿ 9.30ರ ಸುಮಾರಿಗೆ ರೈಲು ಚಿಕ್ಕಬಾಣಾವರ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ, ಕ್ಯಾಬಿನ್‌ನಲ್ಲಿ ಅನುಮಾನಸ್ಪದ ವಸ್ತುಗಳನ್ನು ಗಮನಿಸಿದ ಗಾರ್ಡ್ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಹಿಂಬದಿಯಲ್ಲಿರುವ ಗಾರ್ಡ್ ಕ್ಯಾಬಿನ್‌ನ ಟೇಬಲ್ ಬಳಿ 2 ಬ್ಯಾಟರಿ ಶೆಲ್‌ಗಳು, ಹಲವು ವೈರ್‌ಗಳನ್ನು ಒಟ್ಟಾಗಿ ಸೇರಿಸಿ ಅಂಟಿಸಲಾಗಿತ್ತು.

ತಕ್ಷಣ ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಮಾಹಿತಿ ಪಡೆದ ರೈಲ್ವೆ ಪೊಲೀಸ್ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ರೈಲು ನಿಲ್ದಾಣಕ್ಕೆ ಧಾವಿಸಿದವು. ಇದೇ ವೇಳೆ ಆರ್‌ಪಿಎಫ್ ಹಾಗೂ ರಾಜ್ಯ ರೈಲ್ವೆ ಪೊಲೀಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.

ಕ್ಯಾಬಿನ್ ಟೇಬಲ್‌ಗೆ ಅಂಟಿಸಲಾಗಿದ್ದ ವೈರ್ ಹಾಗೂ ಶೆಲ್‌ಗಳನ್ನು ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತೆರವುಗೊಳಿಸಿದರು. ಅದರಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಇಡೀ ಗೂಡ್ಸ್ ರೈಲನ್ನು ಪರಿಶೀಲಿಸಲಾಯಿತು. ಈ ವೇಳೆ ರೈಲಿನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಬಳಿಕ ಕೆಲವು ಕಿ.ಮೀ ವರೆಗೆ ಹಳಿಯನ್ನು ಪರಿಶೀಲಿಸಲಾಯಿತು. ಆಗಲೂ ಯಾವುದೇ ಅನುಮಾನಾಸ್ಪದ ವಸ್ತು ಕಾಣಿಸಲಿಲ್ಲ. ಹಾಗಾಗಿ ರೈಲು ಪ್ರಯಾಣ ಮುಂದುವರಿಸಿತು.

ಅನುಮಾನಾಸ್ಪದ ವಸ್ತು ಇರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಯಾವುದೇ ಸ್ಫೋಟಕ ಕಂಡು ಬಂದಿಲ್ಲ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ನಿಲುಗಡೆಯಾದ ಸಂದರ್ಭದಲ್ಲಿ ಗಾರ್ಡ್ ಊಟಕ್ಕೆ ಅಥವಾ ಬೇರೆ ಕಾರಣಕ್ಕೆ ಕ್ಯಾಬಿನ್‌ನಿಂದ ಇಳಿದು ಹೋದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com