
ಮೆಹ್ದಿ ಬಂಧನಕ್ಕೆ ಪ್ರತೀಕಾರವಾಗಿ ವಿಧ್ವಂಸಕ ಕೃತ್ಯ, ಇಸ್ಲಾಮಿಕ್ ಸ್ಟೇಟ್ ಮೀಡಿಯಾ ಖಾತೆಯಿಂದ ಸಂದೇಶ
ಬೆಂಗಳೂರು: ಸಿಡ್ನಿ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿಯೂ ಜನರನ್ನು ಒತ್ತೆಯಾಳುಗಳಾಗಿರಿಸಿಕೊಂಡು, ವಿಧ್ವಂಸಕ ಕೃತ್ಯ ನಡೆಸುವ ಮೂಲಕ ಟ್ವೀಟ್ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ ಬಂಧನಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸಿಸ್ ಉಗ್ರರು ಟ್ವೀಟ್ ಮಾಡಿ ಬೆದರಿಸಿದ್ದಾರೆ.
ಈ ಸಂಬಂಧ 'ಇಸ್ಲಾಮಿಕ್ ಸ್ಟೇಟ್ ಮೀಡಿಯಾ' ಎಂಬ ಖಾತೆಯಿಂದ ಸೋಮವಾರ ಬೆಳಗ್ಗೆ 11.20ರ ಸುಮಾರಿಗೆ ಟ್ವೀಟ್ ಮಾಡಲಾಗಿದ್ದು, 'ಸಿಡ್ನಿ ಘಟನೆ ಆರಂಭಿಕ ಹಂತ. ಬೆಂಗಳೂರಿನಲ್ಲೂ ಮಂಗಳವಾರ ಇದು ಮುಂದುವರೆಯಲಿದೆ. ದೊಡ್ಡ ಪ್ರಮಾಣದಲ್ಲಿ ಒತ್ತೆಯಾಳು ಕಾರ್ಯಾಚರಣೆ ನಡೆಸಲಾಗುವುದು. ಅದಕ್ಕಾಗಿ ಶಮಿ ಸಂಘಟನೆ ಸದಸ್ಯರ ನೆರವು ಪಡೆಯಲಾಗುವುದು' ಎಂದು ಟ್ವೀಟ್‌ನಲ್ಲಿ ಘೋಷಿಸಲಾಗಿದೆ.
ಮೆಹ್ದಿ ಬಂಧನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸಿಸಿಬಿ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್‌ಗೆ ಟ್ವಿಟರ್ ಮೂಲಕ ನಮ್ಮ ಸೋದರ ನಿಮ್ಮ ವಶದಲ್ಲಿರಲು ನಾವು ಬಿಡುವುದಿಲ್ಲ. ಅದಕ್ಕೆ ತಕ್ಕ ಪ್ರತೀಕಾರ ತೀರಿಸಿಯೇ ತೀರಿಸಿಕೊಳ್ಳುತ್ತೇವೆ. ಆ ಸಮಯವನ್ನು ನಿರೀಕ್ಷಿಸಿ ಎಂದು ಬೆದರಿಸಿರುವ ಬೆನ್ನಲ್ಲೇ ಇಸಿಸ್ ಇದೀಗ ವಿಧ್ವಂಸಕ ಕೃತ್ಯದ ಬೆದರಿಕೆಯೊಡ್ಡಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಭಯ ಬೇಕಿಲ್ಲ
'ಇಸಿಸ್ ಉಗ್ರರಿಂದ ಇಂಥ ಬೆದರಿಕೆ ಸಂದೇಶ ಬಂದ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಸಹಜ ಭೀತಿ ಮೂಡಿದ್ದು, ಜನರ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಯಾರೋ ಎಲ್ಲೋ ಕುಳಿತು ಟ್ವೀಟ್ ಮಾಡುವ ಮೂಲಕ ಬೆದರಿಕೆ ಸಂದೇಶ ರವಾನಿಸುತ್ತಾರೆ. ಎಂದ ಮಾತ್ರಕ್ಕೆ ಹೆದರುವ ಪ್ರಮೇಯವೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಪ್ರಪಂಚದ ಯಾವುದೇ ಮೂಲೆಯಿಂದಾದರೂ ಟ್ವಿಟರ್ ನಿರ್ವಹಿಸಲು ಸಾಧ್ಯವಿದೆ. ಯಾರು ಎಲ್ಲಿಂದ ಟ್ವೀಟ್ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಕಷ್ಟ.
ಇದೊಂದು ನಕಲಿ ಖಾತೆಯೂ ಆಗಿರಬಹುದು. ಹಾಗೆಂದು ನಿರ್ಲಕ್ಷ್ಯ ತೋರುವುದಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ದಾಳಿ ಮಾಡುವುದರ ಬಗ್ಗೆಯಾಗಲಿ ಅಥವಾ ಜನರನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಳ್ಳುವ ಬಗ್ಗೆಯಾಗಲಿ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಹೈಅಲರ್ಟ್
ಸಿಡ್ನಿ ಅಪಹರಣ ಪ್ರಕರಣ, ಟ್ವೀಟ್ ಬೆದರಿಕೆ ಹಿನ್ನಲೆಯಲ್ಲಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಪ್ರಮುಖವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈಕೋರ್ಟ್, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣ, ಚಿತ್ರಮಂದಿರಗಳು, ಶಾಪಿಂಗ್ ಮಾಲ್, ಕೆಫೆಗಳು ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಈಗಗಾಲೇ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅದನ್ನು ಮುಂದುವರೆಸುವಂತೆ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ತಂಡ
ಮೆಹ್ದಿ ಬಂಧನದ ಬಗ್ಗೆ ಡಿಸಿಪಿ ಅಭಿಷೇಕ್ ಘೋಯಲ್ ಅವರು ಟ್ವಿಟರ್‌ನಲ್ಲಿ ಸಂದೇಶ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಉಗ್ರರು, ಸಿಡ್ನಿ ಮಾದರಿಯಲ್ಲೇ ಬೆಂಗಳೂರಿನಲ್ಲೂ ಒತ್ತೆಯಾಳು ಕಾರ್ಯಾಚರಣೆ ನಡೆಸುವ ಬೆದರಿಕೆ ಹಾಕಿದ್ದಾರೆ. ಮೆಹ್ದಿ ಬಂಧನದ ಪ್ರತೀಕಾರವಾಗಿ ಅಭಿಷೇಕ್ ಗೋಯಲ್‌ಗೂ ಬೆದರಿಕೆ ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ತಿಳಿಸಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ..?
'ದಿಸ್ ಈಸ್ ದಿ ಬಿಗಿನಿಂಗ್.. ವಿ ವಿಲ್ ಲಾಂಚ್ ಎ ಹ್ಯೂಜ್ ಹಾಸ್ಟೇಜ್ ಆಪರೇಷನ್ ಇನ್ ಬೆಂಗಳೂರು ಟುಮಾರೋ.. ಇನ್ ಸಪೋರ್ಟ್ ಆಫ್ ಶಮಿ'..
ಭದ್ರತೆ ಪರಿಶೀಲನೆ
ಟ್ವೀಟ್ ಸಂದೇಶದ ಹಿನ್ನಲೆಯಲ್ಲಿ ಸೋಮವಾರ ಸಂಜೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ಹೈಕೋರ್ಟ್, ವಿಧಾನಸೌಧ, ಸಿಟಿ ರೇಲ್ವೇ ನಿಲ್ದಾಣ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿ ಬಿಗಿ ಭದ್ರತೆ ಪರಿಶೀಲನೆ ನಡೆಸಿತು. ಹೊರಗಿನಿಂದ ನಗರದ ಒಳಬರುವ ಹಾಗೂ ಹೊರಹೋಗುವ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತಿದ್ದು, ತಪಾಸಣೆ ಮುಂದುವರೆಸುವಂತೆ ಸೂಚಿಸಲಾಗಿದೆ.
ಮೆಹ್ದಿಗೆ ಮುಸ್ಲಿಮೇತರ ಹಿಂಬಾಲಕರೇ ಹೆಚ್ಚು!
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಉಗ್ರ ಸಂಘಟನೆ ಇಸಿಸ್ ಪರ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂಬ ಆರೋಪ ಹೊತ್ತಿರುವ ಮೆಹ್ದಿ ಬಿಸ್ವಾಸ್‌ನ ಕುರಿತು ಮತ್ತಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ವಿಚಿತ್ರ ಎಂದರೆ, ಈತನ ಟ್ವಿಟರ್ ಖಾತೆಯ ಶೇ.60ರಷ್ಟು ಫಾಲೋವರ್‌ಗಳು (ಹಿಂಬಾಲಕರು) ಮುಸ್ಲಿಮೇತರರಾಗಿದ್ದಾರೆ..! ಈ ಮಾಹಿತಿಯನ್ನು ಸೋಮವಾರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದು, ಉಗ್ರ ಸಂಘಟನೆಗೆ ಸೇರುವಂತೆ ತಾನು ಯಾರನ್ನೂ ಪ್ರೋತ್ಸಾಹಿಸಿಲ್ಲ ಎಂಬ ಮಾಹಿತಿಯನ್ನು ಮೆಹ್ದಿ ನೀಡಿದ್ದಾನೆ. ಜತೆಗೆ ಈತನ ಬಹುತೇರ ಮುಸ್ಲಿಂ ಫಾಲೋವರ್‌ಗಳು ಬ್ರಿಟನ್ ಪ್ರಜೆಗಳಾಗಿದ್ದಾರೆ ಎಂದಿದ್ದಾರೆ. ಟ್ವಿಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮೆಹ್ದಿ ಅಲ್ಪ ಪ್ರಮಾಣದಲ್ಲಿ ಸಕ್ರಿಯನಾಗಿದ್ದು, ಹೆಚ್ಚು ಪೋಸ್ಟ್‌ಗಳನ್ನು ಹಾಕುತ್ತಿರಲಿಲ್ಲ.
ಆದರೆ ಇಸಿಸ್ ಪರ ಮಾಹಿತಿಗಳನ್ನು ರೀ ಪೋಸ್ಟ್ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದೆ. ಇಂಗ್ಲೆಂಡ್‌ನ ದೃಶ್ಯ ಮಾಧ್ಯಮದಲ್ಲಿ ಈತನ ಬಗ್ಗೆ ವಿಸ್ಮೃತ ವರದಿ ಪ್ರಕಟವಾದ ಬಳಿಕ, ಕೇಂದ್ರ ಗುಪ್ತಚರ ಇಲಾಖೆಯು ಕರ್ನಾಟಕ ಪೊಲೀಸರಿಗೆ ಸಹಕರಿಸಿ ಮೆಹ್ದಿಯನ್ನು ಬಂಧಿಸಲಾಗಿದೆ. ಅರೇಬಿಕ್ ಭಾಷೆಯಲ್ಲಿದ್ದ ಸಾರಾಂಶವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಈತ ರೀ ಪೋಸ್ಟ್ ಮಾಡುತ್ತಿದ್ದ ಬಗ್ಗೆ ಶಂಕೆ ಇದೆ ಎಂದು ಅವರು ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಮುಂದುವರೆದ ವಿಚಾರಣೆ
ಸಿಸಿಬಿ ಅಧಿಕಾರಿಗಳು ಗೌಪ್ಯ ಸ್ಥಳದಲ್ಲಿ ಮೆಹ್ದಿ ಮಸ್ರೂರ್ ವಿಚಾರಣೆ ಮುಂದುವರೆಸಿದ್ದಾರೆ. ಸೋಮವಾರದ ವಿಚಾರಣೆ ವೇಳೆ ಆತ ಕೆಲ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾನೆ ಎಂದು ಹೇಳಲಾಗಿದೆ. ಗುರುವಾರದವರೆಗೆ ವಶದಲ್ಲಿರಿಸಿಕೊಳ್ಳಲು ಕೋರ್ಟ್ ಅನುಮತಿ ನೀಡಿದ್ದು, ಆ ಅವಧಿ ಮುಕ್ತಾಯದ ಬಳಿಕ ಅಗತ್ಯ ಬಿದ್ದಲ್ಲಿ ಮತ್ತೆ ವಶಕ್ಕೆ ಪಡೆಯಲಾಗುವುದು. ಇನ್ನು ಮೆಹ್ದಿ ಪೋಷಕರು ಎಂದು ಹೇಳಿಕೊಂಡು ತಮ್ಮ ಬಳಿ ಇದುವರೆಗೂ ಯಾರೂ ಬಂದಿಲ್ಲ ಎಂದು ಹಿರಿಯ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ತಿಳಿಸಿದ್ದಾರೆ.
Advertisement