ಕಾವೇರಿ ವನ್ಯಧಾಮದಲ್ಲಿ ನಿತ್ಯ ಬೇಟೆ

ಕಾವೇರಿ ನದಿ ಪಾತ್ರದ ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ.
ಕಾವೇರಿ ವನ್ಯಧಾಮ (ಸಂಗ್ರಹ ಚಿತ್ರ)
ಕಾವೇರಿ ವನ್ಯಧಾಮ (ಸಂಗ್ರಹ ಚಿತ್ರ)

ತಮಿಳುನಾಡಿನಿಂದ ಬರುತ್ತಾರೆ ಭೇಟೆಗಾರರು, ಜಿಲೆಟಿನ್ ಕಡ್ಡಿ ಬಳಸಿ ಬೇಟೆ
ಎಗ್ಗಿಲ್ಲದೆ ಸಾಗಿದೆ ಪ್ರಾಣಿಗಳ ಮಾರಣ ಹೋಮ
-ಎಂ.ಡಿ.ಉಮೇಶ್
ಮಳವಳ್ಳಿ:
ಕಾವೇರಿ ನದಿ ಪಾತ್ರದ ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಭಾಗವನ್ನು ಕಾವೇರಿ ಸಂರಕ್ಷಿತ ವನ್ಯಧಾಮ ಎಂದು ಘೋಷಿಸಲಾಗಿದೆ. ಆದರೂ ಕಾಡು ಪ್ರಾಣಿಗಳ ಬೇಟೆ ಎಗ್ಗಿಲ್ಲದೆ ಸಾಗಿದೆ.

ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದ ಕನಕಪುರ ಅರಣ್ಯವಲಯಗಳಲ್ಲಿ ಬರುವ ಕಾವೇರಿ ತಪ್ಪಲಿನ ಅರಣ್ಯ ಪ್ರದೇಶಗಳಾದ ಕಾವೇರಿ ತಪ್ಪಲಿನ ಅರಣ್ಯ ಪ್ರದೇಶಗಳಾದ ಕಾವೇರಿ ಸಂರಕ್ಷಿತ ವನ್ಯಧಾಮ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ, ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮಗಳಲ್ಲಿ, ಅರಣ್ಯ ಇಲಾಖೆ ಚೆಕ್‌ಪೋಸ್ಟ್, ಗಾರ್ಡ್‌ಗಳಿದ್ದರೂ ಪ್ರಾಣಿಗಳ ಮಾರಣ ಹೋಮ ನಿರಂತರವಾಗಿದೆ.

ಕಾವೇರಿ ವನ್ಯಧಾಮದ ಧನಗೂರು ಅರಣ್ಯ ವ್ಯಾಪ್ತಿಯಲ್ಲಿ ಬರುವ ಭೀಮೇಶ್ವರಿ, ಮುತ್ತತ್ತಿ, ಬೀರೋಟ್, ಗಾಣಾಳು ಹಾಗೂ ಶಿಂಷಾ ಅರಣ್ಯ ವ್ಯಾಪ್ತಿಯಲ್ಲಿ ಬರುವತಂಹ ತಿಟ್ಟು, ಹಂದಿ ಹಳ್ಳ, ಟೈಗರ್ ಮಡು ಹಾಗೂ ಹಲವು ಭಾಗಗಳಲ್ಲಿ ಜಿಂಕೆ, ಸಾರಂಗ ಹಾಗೂ ಕಡವೆಯಂತಹ ಪ್ರಾಣಿಗಳನ್ನು ಚಾಮರಾಜನಗರ ಜಿಲ್ಲೆಯ ಜಾಗೇರಿ ಭಾಗದ ವನ್ಯ ಭಕ್ಷಕರು ಹಾಗೂ ಕಾಡಂಚಿನ ದುಷ್ಟರು ಬೇಟೆಯಾಡುತ್ತಿರುವುದು ವನ್ಯ ಪ್ರಾಣಿಗಳ ಅಳಿವಿಗೆ ಕಾರಣವಾಗಿದೆ.

ಈ ಭಾಗಗಳಲ್ಲಿ ಕಾಡುಗಳ್ಳರನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ತಮಿಳುನಾಡು ಗಡಿಗೆ ಹೊಂದಿಕೊಂಡಿರುವುದರಿಂದ ಈ ಭಾಗಗಳ ಬೇಟೆಗಾರರ ಹಾವಳಿಯೂ ವಿಪರೀತವಾಗಿದೆ. ಮತ್ತೊಂದೆಡೆ ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ ಇದೆ. ಕಳೆದ ಮೂರು ತಿಂಗಳಲ್ಲಿ ಅರಣ್ಯ ಭಾಗದಲ್ಲಿ ಸಾಕಷ್ಟು ಮಳೆಯಾಗಿದ್ದು, ಆಳೆತ್ತರಕ್ಕೂ ಮೀರಿದ ಆನೆ ಹುಲ್ಲು ಬೆಳೆದಿರುವ ಪರಿಣಾಮ ಅರಣ್ಯದೊಳಗೆ ಎಗ್ಗಿಲ್ಲದೆ ಪ್ರಾಣಿ ಬೇಟೆ ನಿರಂತರವಾಗಿ ಸಾಗಲು ನೆರವಾಗಿದೆ.

ಜಿಲೆಟಿನ್ ಸ್ಫೋಟಕ ಬಳಕೆ
ವಿಶ್ವವಿಖ್ಯಾತ ಗಗನ ಚುಕ್ಕಿ ಜಲಪಾತದಿಂದ ಹಾದು ಹೋಗುವ ಕಾವೇರಿ ನದಿ ಮಳವಳ್ಳಿ ತಾಲ್ಲೂಕು ಹಾಗೂ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ರಕ್ಷಿತ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ಬರುವ ಪ್ರಾಣಿಗಳನ್ನು ಬೇಟೆಗಾರರು ಸಿಡಿಮದ್ದು (ಜಿಲೆಟಿನ್)ಗಳನ್ನು ಬಳಸಿ ಕೊಲ್ಲುತ್ತಿದ್ದಾರೆ.

ಈ ಬಗ್ಗೆ ಅನೇಕ ದೂರುಗಳು ಅರಣ್ಯ ಇಲಾಖೆಗೆ ಬಂದಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ಮಂಡ್ಯದ ಕಿಕ್ಕೇರಿ ಬಳಿ ರಂಗನಾಥ ಎಂಬುವವನನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಆತನಿಂದ ರು.10 ಲಕ್ಷ ಮೌಲ್ಯದ ಹುಲಿ ಚರ್ಮ ವಶಪಡಿಸಿಕೊಂಡಿದ್ದರು. ಯಾವ ಮಟ್ಟದಲ್ಲಿ ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿದೆ ಎಂಬುದನ್ನು ಇದರಿಂದ ಊಹಿಸಿಕೊಳ್ಳಬಹುದು. ಮುತ್ತತ್ತಿ ಅರಣ್ಯ ಪ್ರದೇಶದ ಮುತ್ತೆತ್ತರಾಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಪ್ರಾಣಿಗಳನ್ನು ಕೊಲ್ಲಲ್ಲು ಬಳಸಾಗಿದ್ದ ಜಿಲೆಟಿನ್ ಕೇಪ್ ಹಾಗೂ ಹಲವು ಸಿಡಿಮದ್ದುಗಳ ಕುರುಹುಗಳು ಲಭ್ಯವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com