
ಸೂಲಿಬೆಲಿ: ಬ್ಯಾಂಕಿನಿಂದ ಹಣ ಡ್ರಾ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಬೈಕಿನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡು ಹಾರಿಸಿ 7.30 ಲಕ್ಷ ಹಣ ದೋಚಿಕೊಂಡು ಹೋದ ಘಟನೆ ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಹಾಡಹಗಲೇ ನಡೆದಿದೆ.
ವಾರ್ಮ್ ಗೇರ್ಸ್ ಪ್ರೈವೇಟ್ ಲಿ. ಕಾರ್ಖಾನೆಯ ಅಕೌಂಟ್ ಸೂಪರ್‌ವೈಸರ್ ವೀರೇಂದ್ರ ಗುಪ್ತಾ (28) ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿರೇಂದ್ರ ಗುಪ್ತಾ ಗುರುವಾರ ಮಧ್ಯಾಹ್ನ ಹೊಸಕೋಟೆ ಎಸ್‌ಬಿಎಂ ಬ್ಯಾಂಕಿನಿಂದ 7.30 ಲಕ್ಷ ಹಣ ಡ್ರಾ ಮಾಡಿಕೊಂಡು ಕಾರ್ಖಾನೆಯ ಕಾರಿನಲ್ಲಿ ಬಂದಿದ್ದಾರೆ. ಸುಮಾರು 3.40 ವೇಳೆಗೆ ಗುಪ್ತಾ ಕಾರ್ಖಾನೆಯ ಗೇಟಿನ ಮುಂಭಾಗದಲ್ಲಿ ಹಣದ ಚೀಲದೊಂದಿಗೆ ಕಾರಿಳಿದಿದ್ದಾರೆ.
ಚಾಲಕ ಕಾರನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಬೈಕಿನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಗುಪ್ತಾ ಅವರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಅವರಲ್ಲಿದ್ದ ಹಣದ ಚೀಲವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಗುಂಡಿನ ಶಬ್ದ ಕೇಳಿದ ಕಾರಿನ ಚಾಲಕ ಮತ್ತು ಕಾರ್ಖಾನೆ ಸಿಬ್ಬಂದಿ ಬರುವಷ್ಟರಲ್ಲಿ ವೀರೇಂದ್ರ ಗುಪ್ತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ನಂತರ ಹೆಚ್ಚನಿ ಚಿಕಿತ್ಸೆಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಆಕ್ಸಿನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಬ್ಬೊಟ್ಟೆ, ತೊಡೆ ಇತರೆ ಭಾಗದಲ್ಲಿ ಗುಂಡುಗಳು ಹೊಕ್ಕಿದ್ದು ವಿರೇಂದ್ರ ಗುಪ್ತಾ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಡಹಗಲೇ ನಡೆದ ಈ ಕೃತ್ಯದಿಂದ ಇಡೀ ಕೈಗಾರಿಕೆ ಪ್ರದೇಶ ಬೆಚ್ಚಿ ಬಿದ್ದಿದೆ. ವಿರೇಂದ್ರಿ ಗುಪ್ತಾ ಹಣ ಡ್ರಾ ಮಾಡಿಕೊಂಡು ಬರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ಪಿಸ್ತೂಲ್ ಬಳಸಿ ಹಣ ದೋಚಿರುವ ಪ್ರಕರಣ ಪಿಲ್ಲಗುಂಪೆ ಬಳಸಿ ಹಣ ದೋಚಿರುವ ಪ್ರಕರಣ ಪಿಲ್ಲಗುಂಪೆ ಕೈಗಾರಿಕೆ ಪ್ರದೇಶದಲ್ಲಿ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ದಾಳಿ ಮಾಡಿ ಹಣದ ಚೀಲದಿಂದ ಪರಾರಿಯಾಗಿರುವ ದುಷ್ಕರ್ಮಿಗಳು ಕಾರ್ಖಾನೆಯ ಎಡ ಭಾಗದ ನೀಲಗಿರಿ ತೋಪಿನ ಕಾಲು ದಾರಿಯಲ್ಲಿ ಪರಾರಿಯಾದರು ಎನ್ನಲಾಗಿದೆ. ಘಟನೆಯ ವಿಷಯ ತಿಳಿದ ಕೇಂದ್ರ ವಲಯ ಐಜಿಪಿ ಸೈಯಾದ್ ಉಲ್ಫತ್ ಹುಸೇನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಬಾನೋತ್, ಹೆಚ್ಚುವರಿ ಎಸ್ಪಿ ಅಮದ್ ಅಹಮದ್, ಡಿವೈಎಸ್ಪಿ ಬಲರಾಮೇಗೌಡ, ಸಿಪಿಐ ಪುಟ್ಟ ಹೋಬಳ ರೆಡ್ಡಿ, ಸತೀಶ್, ಐಎಸ್‌ಐ ನವೀನ್ ಇತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
Advertisement