ಮೊಬೈಲ್‌ನಲ್ಲಿ ಪಕ್ಷಿಗಳ ಕಲರವ

ಇನ್ನು ಮೊಬೈಲ್‌ನಲ್ಲೇ ಪಕ್ಷಿಗಳ ಕಲವರ ಕೇಳಿಸಲಿದೆ. ನಿಮಗಿಲ್ಲಿ ಕೆಲವು ಪಕ್ಷಿಗಳ...
ಮೊಬೈಲ್‌ನಲ್ಲಿ ಪಕ್ಷಿ
ಮೊಬೈಲ್‌ನಲ್ಲಿ ಪಕ್ಷಿ

ತುಮಕೂರು: ಇನ್ನು ಮೊಬೈಲ್‌ನಲ್ಲೇ ಪಕ್ಷಿಗಳ ಕಲವರ ಕೇಳಿಸಲಿದೆ. ನಿಮಗಿಲ್ಲಿ ಕೆಲವು ಪಕ್ಷಿಗಳ ಮಾಹಿತಿ ಬೇಕೆಂದರೆ ಪಡೆಯಬಹುದು. ಇಲ್ಲವೇ ನಿಮಗೇ ಏನಾದರೂ ಮಾಹಿತಿ ಗೊತ್ತಿದೆಯಾ? ಅದನ್ನೂ ಅಪ್‌ಲೋಡ್ ಮಾಡಬಹುದು. ಇಂಥ ಒಂದು ಅಪರೂಪದ ಸಾಫ್ಟ್‌ವೇರ್ ಹೆಸರೇ 'ಪಕ್ಷಿ'

ಈಗಾಗಲೇ 250ಕ್ಕೂ ಹೆಚ್ಚು ಸ್ಥಳೀಯ ಹಾಗೂ ವಿದೇಶಿ ಹಕ್ಕಿಗಳ ಚಲನವಲನ ಗುರುತಿಸಿ ದಾಖಲಿಸಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಡಿಸೈನ್ ವಿಭಾಗದ ಪ್ರೋ. ಜಮದಗ್ನಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಈ ಸಾಫ್ಟ್‌ವೇರ್ ಸಿದ್ಧಪಡಿಸಿದ್ದಾರೆ.

ಆ್ಯಂಡ್ರಾಯ್ಡ್ ಫೋನ್‌ಗಳ ನೆರವಿನಿಂದ ಯಾವುದೇ ಸ್ಥಳದಲ್ಲಿ ಪಕ್ಷಿ ನೋಡಿದರೂ ಅದನ್ನು ಗುರುತಿಸಿ ಅದರ ಲಕ್ಷಣಗಳನ್ನು ದಾಖಲಿಸಬಹುದಾಗಿದ್ದು, ಚಿತ್ರ ಸಹಿತ ಮಾಹಿತಿಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇದು ಪಕ್ಷಿ ಬಗ್ಗೆ ಆಸಕ್ತಿ ಇರುವವರಿಗೆ ಅಧ್ಯಯನದ ಸರಕೂ ಆಗುತ್ತದೆ.

ಪಕ್ಷಿಗಳ ಸಂಖ್ಯೆ, ಕಾಲಾವಧಿ, ಪಕ್ಷಿ ಕಂಡು ಬಂದ ಸ್ಥಳದ ಅಕ್ಷಾಂಶ, ರೇಖಾಂಶ, ಸ್ಥಳೀಯ ಪ್ರದೇಶದ ಹವಾಮಾನ ವೈಪರೀತ್ಯಗಳನ್ನೂ ಈ ಸಾಫ್ಟ್‌ವೇರ್ ಮೂಲಕ ದಾಖಲಿಸಬಹುದಾಗಿದೆ. ಪಕ್ಷಿಗಳ ಆಹಾರದ ಲಭ್ಯತೆ, ಗೂಡಿನ ನಿರ್ಮಾಣ, ಪಕ್ಷಿ ಕಂಡು ಬಂದ ಸ್ಥಳದಲ್ಲಿನ ಮಾಲಿನ್ಯ, ಮೊಬೈಲ್ ಟವರ್‌ಗಳಿಂದ ಹೊರ ಹೊಮ್ಮುವ ವಿದ್ಯುತ್ ಕಾಂತೀಯ ತರಂಗಗಳ ತೀವ್ರತೆ, ಅದರಿಂದಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲೂ ಇದು ಸಹಕಾರಿ.

ಏನೇನು ಮಾಹಿತಿ ಸಿಗುತ್ತೆ?
* ಗ್ರಾಮೀಣ ಭಾಗದಲ್ಲಿ ಯಾವ ಪಕ್ಷಿ ಹೆಚ್ಚಿರುತ್ತದೆ. ನಗರ ಪ್ರದೇಶದಲ್ಲಿ ಯಾವ ಪಕ್ಷಿ ಕಡಿಮೆಯಾಗಿದೆ. ಸಂತತಿ ಕ್ಷೀಣಿಸುತ್ತಿರುವ, ಕ್ಷೀಣಿಸುವ ಹಂತದಲ್ಲಿರುವ ಪಕ್ಷಿಗಳ ಬಗ್ಗೆ ಸಂಪೂರ್ಣ ಮಾಹಿತಿ.

* ದೂರದೂರಿಗೆ ಪ್ರಯಾಣ ಬೆಳೆಸುವಾಗ ಆಕಸ್ಮಿಕವಾಗಿ ಪಕ್ಷಿ ಕಂಡಲ್ಲಿ, ಅದರ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ, ನಿಮ್ಮ ಮೊಬೈಲ್‌ನಲ್ಲಿರುವ ಪಕ್ಷಿ ಸಾಫ್ಟ್‌ವೇರ್ ಮೂಲಕ ಅಪ್‌ಲೋಡ್ ಮಾಡಿದರೆ ಸಾಕು.

* ಈ ಸ್ಟಾಫ್ಟ್‌ವೇರ್‌ನಿಂದ ಪಕ್ಷಿಗಳ ಆವಾಸಸ್ಥಾನ, ನಗರೀಕರಣದ ಪ್ರಭಾವ ಯಾವ ರೀತಿ ಕನ್ನಡನಾಡಿನ ಪಕ್ಷಿಗಳ ಮೇಲೆ ಬೀರಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಈಗ ಸಿದ್ಧಪಡಿಸಿರುವ ಈ ಸಾಫ್ಟ್‌ವೇರ್‌ನಿಂದ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಪಕ್ಷಿಗಳನ್ನು ಗುರುತಿಸಲು ಸಜ್ಜಾಗುತ್ತಿದೆ. ನಿಮ್ಮಲ್ಲಿ ಆ್ಯಂಡ್ರಾಯಿಡ್ ಮೊಬೈಲ್ ಫೋನ್ ಇದ್ದರೆ ನೀವೇ ಪಕ್ಷಿಗಳನ್ನು ಗುರುತಿಸುವ ಕೆಲಸಕ್ಕೆ ಅಣಿಯಾಗಬಹುದು.

* ಆದರೆ, ನಿಮಗೆ ಮನಸ್ಸಿಗೆ ಬಂದಂತೆ ತಪ್ಪುತಪ್ಪಾಗಿ ದಾಖಲಿಸಲು ಸಾಧ್ಯವಿಲ್ಲ. ಅಪ್‌ಲೋಡ್ ವೇಳೆ ಸಾಫ್ಟ್‌ವೇರ್ ಕೆಲವೊಂದು ಮಾಹಿತಿ ಕೇಳುತ್ತದೆ. ನೀವು ಪಕ್ಷಿ ತಜ್ಞರೇ?  ಹವ್ಯಾಸಿ ಪಕ್ಷಿ ವೀಕ್ಷಕರೇ ಇತ್ಯಾದಿ ಪ್ರಶ್ನೆಗಳಿಂದ ನೀವು ನೋಡಿದ ಪಕ್ಷಿಯ ವಿವರವನ್ನು ದಾಖಲಿಸುತ್ತಾ ಹೋಗಲಾಗುತ್ತದೆ. ಅಂತಿಮವಾಗಿ ತಜ್ಞರೊಂದಿಗೆ ಚರ್ಚಿಸಿ ಹೊಸ ಪಕ್ಷಿ ಬಗ್ಗೆ ನೀವು ದಾಖಲಿಸಿದ ಮಾಹಿತಿ ಲಭ್ಯವಾಗಲಿದೆ.

-ಉಗಮ ಶ್ರೀನಿವಾಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com