

ಬೆಂಗಳೂರು: ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದರ ಜತೆಗೆ ವಾಯು ಮಾಲಿನ್ಯ ಮತ್ತು ಶಬ್ದಧ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಒಳ ಭಾಗದ ರಸ್ತೆಗಳಲ್ಲಿ ಸರಕು-ಸಾಗಣೆ ವಾಹನಗಳ ಮೇಲೆ ನಗರ ಪೊಲೀಸರು ನಿರ್ಬಂಧ ಹೇರಿದ್ದಾರೆ.
ಇದೇ ವೇಳೆ, ವಿಧಾನ ಸೌಧದ ಸುತ್ತ ಮುತ್ತಲ 2 ಕಿಲೋ ಮೀಟರ್ ಆವೃತ್ತದಲ್ಲಿ ಎಲ್ಲ ರೀತಿಯ ಸರಕು ಸಾಗಣೆ ವಾಹನ ಸಂಚಾರವನ್ನು 24 ಗಂಟೆಗಳ ಕಾಲವೂ ನಿಷೇಧಿಸಲಾಗಿದೆ.
ಉಳಿದಂತೆ ನಗರ ವ್ಯಾಪ್ತಿಯ ಹಲವೆಡೆ ಮೂರು ಟನ್‌ಗಿಂತಲೂ ಹೆಚ್ಚು ಭಾರ ಹೊರುವ ವಾಹನಗಳ ಪ್ರವೇಶವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.
ಹಾಲಿನ ಉತ್ಪನ್ನ, ಔಷಧ, ಆಮ್ಲಜನಕದ ಸಿಲಿಂಡರ್, ಜೈವಿಕ ವೈದ್ಯ ತಾಜ್ಯ, ಪೆಟ್ರೋಲ್, ಡಿಸೇಲ್, ಸೀಮೆಎಣ್ಣೆ ಶಾಲೆಗಳಿಗೆ ಮಧ್ಯಾಹ್ನದ ಬಿಸಿ ಊಟ ವಿತರಿಸುವ ವಾಹನ, ಎಲ್‌ಪಿಜಿ ಸಿಲಿಂಡರ್, ಸಿಎನ್‌ಜಿ ಟ್ಯಾಂಕರ್, ರಕ್ಷಣಾ ವಿಭಾಗದ ಬಾರೀ ಸರಕು ಸಾಗಣೆ ವಾಹನಗಳು, ಪೋಸ್ಟ್ ಮತ್ತು ಟೆಲಿಗ್ರಾಫ್, ರೆಡಿಮಿಕ್ಸ್ ಕಾಂಕ್ರೀಟ್ ವಾಹನಗಳು ಬೆಳಗ್ಗೆ 8 ಗಂಟೆಯಿಂದ 11 ಗಂಟೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರಗೆ ಹೊರತುಪಡಿಸಿ ಉಳಿದ ವೇಳೆಗಳಲ್ಲಿ ಸಂಚರಿಸುವ ಅವಕಾಶವಿದೆ.
ನೀರು, ಕಸ, ಪೊಲೀಸ್ ವಾಹನ, ಮಿಲಿಟರಿ ಹಾಗೂ ಶವ ಸಾಗಿಸುವ ವಾಹನಗಳಿಗೆ ನಿರ್ಬಂಧವಿಲ್ಲ. ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲವೆಂದು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ತಿಳಿಸಿದ್ದಾರೆ.
Advertisement