
ಬೆಂಗಳೂರು: ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಹಿನ್ನಲೆಯಲ್ಲಿ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ವಿಶೇಷ ಗಸ್ತು ಪ್ರಾರಂಭಿಸಿದ್ದಾರೆ. ಮಹಾತ್ಮ ಗಾಂಧಿ ರಸ್ತೆ, ಕಾಮರಾಜ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಸುತ್ತಲಿದ್ದಾರೆ.
ಈ ವಿಶೇಷ ಗಸ್ತು ರಾತ್ರಿ ೭ ಘಂಟೆಯಿಂದ ೧೧ ಘಂಟೆಯವರೆಗೆ ಇರುತ್ತದೆ. ಈ ಗಸ್ತು ಹೊಡೆಯಲಿರುವ ಸುಮಾರು ೨೫ ಜನ ಪೊಲೀಸರನ್ನುದ್ದೇಶಿಸಿ ಕೇಂದ್ರ ವಿಭಾಗದ ಪೊಲೀಸ್ ಉಪ ಆಯುಕ್ತ ಸಂದೀಪ್ ಪಾಟಿಲ್ ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಾತನಾಡಿದ್ದಾರೆ.
"ಮಹಾತ್ಮ ಗಾಂಧಿ ರಸ್ತೆಯಲ್ಲೇ ಈ ಗಸ್ತಿನ ಬಗ್ಗೆ ಪೊಲೀಸರಿಗೆ ವಿವರಿಸಿದ್ದು ಏಕೆಂದರೆ, ಅಪರಾಧಿಗಳು ಹಾಗೂ ಸಮಾಜ ವಿರೋಧಿ ವ್ಯಕ್ತಿಗಳಿಗೆ ಸ್ವಲ್ಪ ಭಯ ಹುಟ್ಟಿಸಲು ಹಾಗು ಸಾರ್ವಜನಿಕರಿಗೆ ನಮ್ಮ ಉಪಸ್ಥಿತಿಯನ್ನು ಮನವರಿಕೆ ಮಾಡಲು" ಎಂದಿದ್ದಾರೆ ಪಾಟಿಲ್. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ವೇಳೆಯಲ್ಲಿ ಪ್ರಾರಂಭವಾಗುತ್ತಿರುವ ಈ ವಿಶೇಷ ಗಸ್ತು ಮುಂದಿನ ವರ್ಷ ಕೂಡ ಮುಂದುವರೆಯಲಿದೆ ಎನ್ನುತ್ತಾರೆ ಪಾಟಿಲ್.
Advertisement