ತಲಾಖ್‌
ತಲಾಖ್‌

ಪತ್ನಿಗೂ ಇದೆ ಸಮಾನ ಹಕ್ಕು

ಬೆಂಗಳೂರು: ಇಸ್ಲಾಂ ಧರ್ಮದಲ್ಲಿ ವೈವಾಹಿಕ ಜೀವನ ಪುನರ್‌ಸ್ಥಾಪಿಸಲು ಕೇವಲ ಪತಿಗೆ ಮಾತ್ರವಲ್ಲದೇ ಪತ್ನಿಗೂ ಅವಕಾಶವಿದೆ ಎಂದು ಧಾರವಾಡ ಹೈಕೋರ್ಟ್ ಪೀಠ ಸ್ಪಷ್ಟಪಡಿಸಿದೆ.

'ತಲಾಖ್‌' ನೀಡಿ ಪತಿ ಕಳುಹಿಸಿದ ನೋಟಿಸ್ ಪ್ರಶ್ನಿಸಿ, ವೈವಾಹಿಕ ಜೀವನ ಪುನರ್‌ಸ್ಥಾಪಿಸಿಸುವಂತೆ ರೇಶ್ಮಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬೆಳಗಾವಿಯ ಗೋಕಾಕ್ ತಾಲೂಕಿನ ಅಸ್ಗರಾಲಿ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಧಾರವಾಡ ಪೀಠದ ನ್ಯಾ.ಎಚ್.ಜಿ ರಮೇಶ್ ಅವರ ಏಕಸದಸ್ಯ ಪೀಠ, ವೈವಾಹಿಕ ಜೀವನವನ್ನು ಪುನರ್‌ಸ್ಥಾಪಿಸಲು ಪತ್ನಿಗೆ ಅವಕಾಶವಿಲ್ಲ ಎಂದು ಯಾವ ಕಾನೂನಿನಲ್ಲಿಯೂ ಇಲ್ಲ. ಮದುವೆ ಎಂದಾದ ಮೇಲೆ ನಿಸ್ಸಂದೇಹವಾಗಿ ಪತಿ ಪತ್ನಿ ಇಬ್ಬರೂ ದಾಂಪತ್ಯ ಹಕ್ಕುಗಳನ್ನು ಅನುಭವಿಸಲು ಬದ್ಧರಾಗಿರುತ್ತಾರೆ.

ಮೊಹಮ್ಮದನ್ ಕಾನೂನಿನಲ್ಲೂ ಪತ್ನಿ ವೈವಾಹಿಕ ಜೀವನ ಪುನರ್‌ಸ್ಥಾಪಿಸುವ ಕುರಿತು ಎಲ್ಲಿಯೂ ನಿಷೇಧ ಹೇರಿಲ್ಲ ಎಂದು ಅಭಿಪ್ರಾಯಪಟ್ಟು, ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. 2008ರ ನ. 5ರಂದು ರೇಶ್ಮಾಗೆ ತಲಾಖ್ ನೀಡಿರುವುದಾಗಿ ನೋಟಿಸ್ ಜತೆ ರು. 8 ಸಾವಿರವನ್ನು ಅಸ್ಗರಾಲಿ ಅಂಚೆ ಮೂಲಕ ಕಳುಹಿಸಿದ್ದ.

ಆ ಹಣ ಸ್ವೀಕರಿಸದ ರೇಶ್ಮಾ ತಲಾಖ್ ನೋಟಿಸ್ ಪ್ರಶ್ನಿಸಿ, 2009ರಲ್ಲಿ ಕಿರಿಯ ಶ್ರೇಣಿಯ ಜೆಎಂಎಫ್‌ಸಿ ಕೋರ್ಟ್ ಮೊರೆ ಹೋಗಿ, ವೈವಾಹಿಕ ಜೀವನ ಪುನರ್‌ಸ್ಥಾಪಿಸುವಂತೆ ಕೋರಿದ್ದಳು.

ಈ ಅರ್ಜಿಯನ್ನು ಅಧೀನ ನ್ಯಾಯಾಲಯ ಪುರಸ್ಕರಿಸಿತ್ತು. ಪತ್ನಿಯ ಇಷ್ಟಕ್ಕೆ ಒಪ್ಪದ ಪತಿ ಈ ಆದೇಶ ರದ್ದುಪಡಿಸುವಂತೆ ಕೋರಿದ್ದ. ವಿಚಾರಣೆ ನಡೆಸಿದ ಕೋರ್ಟ್ ಅಸ್ಗರಾಲಿ ಅರ್ಜಿಯನ್ನು ವಾಜಗೊಳಿಸಿತ್ತು.

ಮೊಹಮದನ್ ಕಾನೂನಿನಂತೆ ವೈವಾಹಿಕ ಜೀವನ ಪುನರ್‌ಸ್ಥಾಪಿಸುವಂತೆ ಕೋರಲು ಪತ್ನಿಗೆ ಅವಕಾಶವಿಲ್ಲ. ಆದ್ದರಿಂದ ಕೆಳನ್ಯಾಯಾಲಯದ ಆದೇಶ ರದ್ದು ಪಡಿಸುವಂತೆ ಮನವಿ ಮಾಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ದಾಂಪತ್ಯ ಜೀವನ ಪುನರ್‌ಸ್ಥಾಪಿಸಲು ಪತ್ನಿಗೂ ಅವಕಾಶವಿರುವುದಾಗಿ ಆದೇಶಿಸಿ, ಅಸ್ಗರಾಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.


- ಪವನ್ ವಸಿಷ್ಠ

Related Stories

No stories found.

Advertisement

X
Kannada Prabha
www.kannadaprabha.com