
ಮಂಡ್ಯ: ದಕ್ಷಿಣ ಭಾರತದ ಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿನ ಆಭರಣಗಳು ನಾಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
ದೇವಾಲಯದಲ್ಲಿರುವ ಮೂರ್ತಿಗೆ ಹಾಕಲಾಗಿದ್ದ ಆಭರಣಗಳ ಪೈಕಿ ಬಹುತೇಕ ಆಭರಣಗಳು ನಾಪತ್ತೆಯಾಗಿದೆ ಎಂದು ಕೆಲ ಸಂಘಸಂಸ್ಥೆಗಳ ಆರೋಪಿಸಿವೆ. ಇನ್ನು ಈ ಆಭರಣಗಳ ನಿಗೂಢ ನಾಪತ್ತೆಯ ಹಿಂದೆ ದೇವಾಲಯದ ಅರ್ಚಕರಾದ ನರಸರಾಜ ಭಟ್ಟರ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ಮೂರ್ತಿಗೆ ಹಾಕಲಾಗುತ್ತಿದ್ದ ಸುಮಾರು 40 ಕ್ಕೂ ಹೆಚ್ಚು ಆಭರಣಗಳು ನಾಪತ್ತೆಯಾಗಿದ್ದು, ನರಸರಾಜ ಭಟ್ಟರೇ ಆಭರಣಗಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಮೂರ್ತಿಗೆ ಹಾಕಲಾಗಿದ್ದ ವಜ್ರಾಂಗಿ, ಬಿಳಿಕಲ್ಲುಗಳ ಎರಡು ಎಳೆ ಉಡದಾರ, ಚಿನ್ನ ಮತ್ತು ವಜ್ರದ ಹರಳುಗಳಿರುವ ಡಾಬು ಮುಂತಾದ ಸಾಕಷ್ಟು ಆಭರಣಗಳು ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಜರಾಯಿ ಸಚಿವ ಟಿಬಿ ಜಯಚಂದ್ರ ಅವರಿಗೂ ಕೂಡ ದೂರು ನೀಡಲಾಗಿದ್ದು, ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಭಕ್ತಾದಿಗಳು ಹೇಳಿದ್ದಾರೆ. ಈ ಹಿಂದೆಯೂ ಕೂಡ ಹಲವು ಬಾರಿ ಮೇಲುಕೋಟೆಯಲ್ಲಿ ದೇವರ ಆಭರಣಗಳು ನಾಪತ್ತೆಯಾಗಿರುವ ಕುರಿತು ಆರೋಪಗಳು ಕೇಳಿಬಂದಿದ್ದವು.
Advertisement