ನಂದಿತಾ ಮೇಲೆ ಬಲಾತ್ಕಾರ ಯತ್ನ: ತಂದೆ ಕೃಷ್ಣಮೂರ್ತಿ

ನನ್ನ ಮಗಳಾದ ನಂದಿತಾ ಮೇಲೆ ಬಲಾತ್ಕಾರ ಯತ್ನ ನಡೆದಿತ್ತು ಎಂದು ಆಕೆಯ ತಂದೆ ಕೃಷ್ಣಮೂರ್ತಿ ಶನಿವಾರ ಹೇಳಿದ್ದಾರೆ.
ನಿಗೂಢ ಸಾವಿಗೀಡಾದ ಬಾಲಕಿ ನಂದಿತಾ, ಆಕೆಯೇ ಬರೆದದ್ದು ಎಂದು ಹೇಳಲಾದ ಡೆತ್‌ನೋಟ್ ಮತ್ತು ಆಕೆಯ ತಂದೆ ಕೃಷ್ಣಮೂರ್ತಿ
ನಿಗೂಢ ಸಾವಿಗೀಡಾದ ಬಾಲಕಿ ನಂದಿತಾ, ಆಕೆಯೇ ಬರೆದದ್ದು ಎಂದು ಹೇಳಲಾದ ಡೆತ್‌ನೋಟ್ ಮತ್ತು ಆಕೆಯ ತಂದೆ ಕೃಷ್ಣಮೂರ್ತಿ

ಬೆಂಗಳೂರು: ನನ್ನ ಮಗಳಾದ ನಂದಿತಾ ಮೇಲೆ ಬಲಾತ್ಕಾರ ಯತ್ನ ನಡೆದಿತ್ತು ಎಂದು ಆಕೆಯ ತಂದೆ ಕೃಷ್ಣಮೂರ್ತಿ ಶನಿವಾರ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ತೀರ್ಥಹಳ್ಳಿಯ ಬಾಲಕಿ ನಂದಿತಾ ನಿಗೂಢ ಸಾವಿನ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದಂತೆಯೇ ಇಂದು ಬಾಲಕಿಯ ತಂದೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಂದಿತಾ ಮೇಲೆ ಬಲಾತ್ಕಾರ ಯತ್ನವಾಗಿದ್ದು, ಆಕೆ ಸಹಕರಿಸಲಿಲ್ಲ ಎಂದು ಆಕೆಯನ್ನು ಅನಂದಗಿರಿ ಬೆಟ್ಟದಿಂದ ಕೆಳಕ್ಕೆ ತಳ್ಳಿದ್ದಾರೆ ಎಂದು ಬಾಲಕಿ ತಂದೆ ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷ್ಣಮೂರ್ತಿ ಅವರು, ನಾನೊಬ್ಬ ದಿನಸಿ ವ್ಯಾಪಾರಿಯಾಗಿದ್ದು, ಅಂಗಡಿಯಲ್ಲಿ ದೊರೆಯುವ ಅಲ್ಪ ಲಾಭದಿಂದಲೇ ನನ್ನ ಜೀವನ ನಡೆಸುತ್ತಿದ್ದೇನೆ. ನನ್ನ ಮಗಳಿಗಾದ ಅನ್ಯಾಯ ಬೇರಾವ ಹೆಣ್ಣುಮಗುವಿಗೂ ಆಗಬಾರದು. ಹೀಗಾಗಿಯೇ ನಾನು ಬೆಂಗಳೂರಿಗೆ ಆಗಮಿಸಿದ್ದೇನೆ. ನಂದಿತಾ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ನಂದಿತಾ ಸಾವಿನ ಕುರಿತು ತಮಗೆ ಮೂವರ ಮೇಲೆ ಅನುಮಾನವಿದ್ದು, ಆ ಪೈಕಿ ಓರ್ವ ನಮಗೆ ಪರಿಚಿತನಾಗಿದ್ದಾನೆ. ನಂದಿತಾ 7ನೇ ತರಗತಿ ಓದುತ್ತಿದ್ದಾಗ ಆತ ಆಕೆಯ ಸಹಪಾಠಿಯಾಗಿದ್ದ. ಆತನ ಹೆಸರು ಸುಹಾನ್ ಎಂದು. ನಿತ್ಯ ಶಾಲೆಗೆ ಹೋಗಿ ಬರುತ್ತಿದ್ದ ನಂದಿತಾ ಅಂದು ಮಾತ್ರ ಮನೆಗೆ ಆಗಮಿಸಿರಲಿಲ್ಲ. ಅಂದು ಮಧ್ಯಾಹ್ನ ನನ್ನ ಮೊಬೈಲ್‌ಗೆ ಒಂದು ಕರೆ ಬಂದಿತ್ತು. ಮಾತನಾಡಿದವರು ತುಡಕಿ ಗ್ರಾಮದ ಕಟ್ಟಿಗೆ ಮಾರುವ ಕಮಲಮ್ಮ ಎಂಬ ಅಜ್ಜಿ ನಿಮ್ಮ ಮಗಳು ಆನಂದಗಿರಿ ಬೆಟ್ಟದಲ್ಲಿ ಇದ್ದಾಳೆ ಎಂದು ಹೇಳಿದ್ದರು. ಕೂಡಲೇ ನಾನು ಅಲ್ಲಿಗೆ ಹೋಗಿ ನಂದಿತಾಳನ್ನು ಕರೆತಂದೆ. ಮಾರ್ಗ ಮಧ್ಯೆ ಏನಾಯಿತು ಎಂದು ಆಕೆಯನ್ನು ಕೇಳಿದಾಗ, ಆಕೆ ಮೂವರು ತನ್ನ ಮೇಲೆ ಹಲ್ಲೆ ನಡೆಸಿದರು ಎಂದಷ್ಟೇ ಹೇಳಿದ್ದಳು.

ಮನೆಗೆ ಕರೆತಂದಾಗಲೂ ಮತ್ತೆ ಕೇಳಿದ್ದೆ. ನನ್ನ ಪತ್ನಿ ವಿಮಲಾ ಕೂಡ ಆಕೆಯನ್ನು ವಿಚಾರಿಸಿದ್ದಳು. ಆಗ ನಂದಿತಾ ತನ್ನನ್ನು ಮೂವರು ಕಾರಿನಲ್ಲಿ ಅಪಹರಿಸಿ, ಆನಂದಗಿರಿ ಬೆಟ್ಟಕ್ಕೆ ಕರೆದೊಯ್ದು, ಅದೇನೋ ನೀರನ್ನು ನನಗೆ ಕುಡಿಸಿದ ಬಳಿಕ ಅತ್ಯಾಚಾರ ಮಾಡಲು ಯತ್ನಿಸಿದರು. ಆದರೆ ಆಗ ನಾನು ಒಪ್ಪದ ಕಾರಣ ಅವರು ನನ್ನನ್ನು ಮೇಲಿಂದ ತಳ್ಳಿ ಬಿಟ್ಟರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನನ್ನು ಅಜ್ಜಿ ಕಾಪಾಡಿದರು ಎಂದು ಹೇಳಿದಳು. ಮಗಳ ವಿಚಾರವಾದ್ದರಿಂದ ನಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿಲ್ಲ. ಮನೆಗೆ ಬಂದ ನಂತರ ಸಹಜವಾಗಿಯೇ ಇದ್ದಳು. ಆದರೆ ರಾತ್ರಿ ಊಟವಾದ ಬಳಿಕ ಆಕೆ ಇದ್ದಕಿದ್ದಂತೆ ವಾಂತಿ ಮಾಡಿಕೊಂಡಳು. ಬಳಿಕ ಅನಾರೋಗ್ಯ ಪೀಡಿತಳಾಗಿ ಅಕ್ಟೋಬರ್ 31ರಂದು ಸಾವನ್ನಪ್ಪಿದಳು ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಅಲ್ಲದೆ ತಮ್ಮ ಮಗಳ ಸಾವಿನ ಕುರಿತು ಸಂಪೂರ್ಣ ತನಿಖೆಯಾಗಿ ತಮ್ಮ ಮಗಳ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂದು ಕೃಷ್ಣಮೂರ್ತಿ ಹೇಳಿದ್ದು, ತಮ್ಮ ಮಗಳ ಸಾವು ಆತ್ಮಹತ್ಯೆಯಲ್ಲ. ಆಕೆ ಎಂದಿಗೂ ರೆಡ್ ಇಂಕ್ ಪೆನ್ ಬಳಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಯತ್ನ ವಿಚಾರ ತಿಳಿಯುತ್ತಿದ್ದಂತೆಯೇ ತಾವು ಪೊಲೀಸರಲ್ಲಿ ಪ್ರಕರಣ ದಾಖಲಿಸಬೇಕಿತ್ತು. ಆದರೆ ಪುತ್ರಿ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ದೂರು ದಾಖಲಿಸಲಿಲ್ಲ.

ಅದೇ ನಾವು ಮಾಡಿದ ತಪ್ಪು. ಅಲ್ಲದೇ ಆಕೆ ವಾಂತಿ ಮಾಡಿಕೊಂಡಾಗಲೂ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ. ನಮ್ಮ ಮಗಳ ಸಾವಿಗೆ ಕಾರಣರಾದ ಮೂವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು. ಅವರಿಗೆ ಶಿಕ್ಷೆಯಾಗುವುದನ್ನು ನಾನು ನೋಡಬೇಕು. ಹೀಗಾಗಿಯೇ ಮುಖ್ಯಮಂತ್ರಿ ಬಳಿ ದೂರು ನೀಡಿದ್ದೇನೆ. ಪ್ರಕರಣದಿಂದಾಗಿ ತಮಗೇ ದಿಕ್ಕೇ ತೋಚದಂತಾಗಿದ್ದು, ನಾವು ಯಾವುದೇ ರೀತಿ ರಾಜಕೀಯ ಪ್ರಚೋದನೆಗೆ ಒಳಪಟ್ಟು ದೂರು ನೀಡಿಲ್ಲ. ಅಥವಾ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಒಟ್ಟಾರೆ ದಿನಕಳೆದಂತೆ ನಂದಿತಾ ನಿಗೂಢ ಸಾವು ಪ್ರಕರಣ ಕಂಗಟ್ಟಾಗುತ್ತಿದ್ದು, ಒಂದು ಮೂಲದ ಪ್ರಕಾರ ಅದು ನಂದಿತಾ ಪ್ರಕರಣ ಮರ್ಯಾದಾ ಹತ್ಯೆ ಎಂದು ಹೇಳಿದರೆ, ಮತ್ತೊಂದು ಮೂಲ 'ಹತ್ಯಾಚಾರ' ಎಂದು ಹೇಳುತ್ತಿದೆ. ಮತ್ತೊಂದರ ಪ್ರಕಾರ ಅದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ ಈ ಎಲ್ಲ ಗೊಂದಲ ಮಾತ್ರ ವಿಚಾರಣೆ ಬಳಿಕವೇ ಬಗೆಹರಿಯಲಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು ನಂದಿತಾಳ ಸ್ನೇಹಿತ ಸುಹಾನ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com