ರಾಜ್ಯಕ್ಕೂ ಬಾಂಗ್ಲಾ ನೋಟು

ಬಾಂಗ್ಲಾ ದೇಶದ ಖೋಟಾ ನೋಟುಗಳು ಈಗ ರಾಜ್ಯದಲ್ಲೂ ಹರಿದಾಡುತ್ತಿವೆ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಬಾಂಗ್ಲಾ ದೇಶದ ಖೋಟಾ ನೋಟುಗಳು ಈಗ ರಾಜ್ಯದಲ್ಲೂ ಹರಿದಾಡುತ್ತಿವೆ. ಹುಬ್ಬಳ್ಳಿ, ಬೆಳಗಾವಿ ಇಂತಹ ನೋಟುಗಳ ಚಲಾವಣೆ ಕೇಂದ್ರಗಳಾಗಿವೆ.

ಬಾಂಗ್ಲಾದೇಶದಿಂದ ದಕ್ಷಿಣ ಭಾರತಕ್ಕೆ ಈ ಹಿಂದೆಯೂ ಖೋಟಾನೋಟು ಬರುತ್ತಿತ್ತಾದರೂ ಈಗ ನಿರೀಕ್ಷೆಗೂ ಮೀರಿ ಚಲಾವಣೆಯಾಗುತ್ತಿದೆ. ಜನರು ಮೋಸ ಹೋಗುವುದರ ಜತೆಗೆ ಭಾರತೀಯ ಅರ್ಥ ವ್ಯವಸ್ಥೆಗೆ ಬಲವಾದ ಪೆಟ್ಟು ಬೀಳುತ್ತಿದೆ.

ಭಾರತದಲ್ಲಿಯೇ ಖೋಟಾ ನೋಟು ತಯಾರಿಸುವ ಸಾಕಷ್ಟು ಖದೀಮರಿದ್ದಾರೆ, ಆದರೆ ಬಾಂಗ್ಸಾದಲ್ಲಿ ಖೋಟಾನೋಟು ತಯಾರಿಕೆಗೆ ಅಡ್ಡಿ-ಆತಂಕವಿಲ್ಲ. ಬಾಂಗ್ಸಾ ದೇಶದ ನಾರಾಯಣಗಂಜ್, ಚಾಂದಪುರ, ಕೋಮಿಲ್ಲಾ, ಫರೀದಾಗಂಜ್‌ನಲ್ಲಿ ಖೋಟಾ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತವೆ. ಅಲ್ಲಿಂದ ಪಶ್ಚಿಮ ಬಂಗಾಳದ ಕೋಲ್ಕತಾ, ಖುಲನಾ ನಗರ ಹಾಗೂ ಒಡಿಶಾ ರಾಜ್ಯದ ಪ್ರಮುಖ ಪಟ್ಟಣಗಳ ಮೂಲಕ ದೇಶಾದ್ಯಂತ ಚಲಾವಣೆ ಮಾಡಲಾಗುತ್ತಿದೆ. ಕರ್ನಾಟಕಕ್ಕೂ ಇದೇ ಮೂಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಚೈನ್ ಸಿಸ್ಟಮ್
ಬಾಂಗ್ಲಾ ದೇಶದಿಂದ ಹುಬ್ಬಳ್ಳಿ, ಬೆಳಗಾವಿಗೆ ಖೋಟಾನೋಟು ತರುತ್ತಿರುವವರು ಯಾರು ಎಂಬ ಮೂಲ ಗೊತ್ತಾಗುವುದೇ ಇಲ್ಲ. ಇದು ಚೈನ್ ಸಿಸ್ಟಮ್‌ನಂತೆ ಕೆಲಸ ಮಾಡುತ್ತದೆ. ಖೋಟೋನೋಟು ತರುವವರು ಪರಸ್ಪರ ಅಪರಿಚಿತರಾಗಿರುತ್ತಾರೆ. ಅವರ ಕೈಗೆ ಮೊಬೈಲ್ ಸಿಮ್‌ವೊಂದನ್ನು ಕೊಟ್ಟು ಕೆಲಸವಾಗುವವರೆಗೆ ಮಾತ್ರ ಲಿಂಕ್ ಇಟ್ಟುಕೊಳ್ಳುವಂತೆ ಮಾಡಲಾಗುತ್ತದೆ. ಕೆಲಸವಾದ ಬಳಿಕ ಸಿಮ್ ಮುರಿದು ಹಾಕಲಾಗುತ್ತದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಕುಳಿತು ಆಪರೇಟ್ ಮಾಡುವ ವ್ಯಕ್ತಿಗೂ ಹುಬ್ಬಳ್ಳಿ, ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುವ ವ್ಯಕ್ತಿಗೂ ಲಿಂಕ್ ಇರುತ್ತದೆ.

ಈ ಭಾಗದಲ್ಲಿ ಖೋಟಾನೋಟು ಚಲಾವಣೆ ಮಾಡುವ ವ್ಯಕ್ತಿ ಎಷ್ಟು ಖೋಟಾ ನೋಟು ಬೇಕಿದೆ ಎಂದು ತಿಳಿಸುತ್ತಾನೆ. ಅಲ್ಲಿರುವ ವ್ಯಕ್ತಿಯ ಕಡೆಯವನಿಗೆ ರಾಜ್ಯದಿಂದ ಹೋಗುವ ವ್ಯಕ್ತಿ ಅಸಲಿ ನೋಟು ಮುಟ್ಟಿಸುತ್ತಾನೆ ಅಥವಾ ಹವಾಲಾ ಮೂಲಕ ಹಣ ರವಾನೆಯಾಗುತ್ತದೆ.

ಇಲ್ಲಿಂದ ಹೋದ ವ್ಯಕ್ತಿ ಅಲ್ಲಿನ ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಖೋಟಾನೋಟು ಪಡೆದುಕೊಂಡು ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾನೆ. ಇವರು ಪ್ರಮುಖವಾಗಿ ವಿಶಾಖಪಟ್ಟಣ, ವಿಜಾಯವಾಡಾ, ಭೀಮಾವರಂ ಮಾರ್ಗವಾಗಿ ಹುಬ್ಬಳ್ಳಿ, ಬೆಳಗಾವಿಗೆ ತಲುಪುತ್ತಾರೆ.

ಮೂಲ ಹಿಡಿಯುವುದು ಕಷ್ಟ: ಬಾಂಗ್ಲಾ ಮೂಲದಿಂದ ತರಲಾಗುತ್ತಿದ್ದ ಖೋಟಾ ನೋಟಿನ ಎರಡು ಪ್ರಕರಣಗಳನ್ನು ಹುಬ್ಬಳ್ಳಿ-ಧಾರಾವಾಡ ಮಹಾನಗರ ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗಿದೆಯಾದರೂ ಜಾಲದ ಮೂಲ ತಲುಪಲು ಸಾಧ್ಯವಾಗಿಲ್ಲ. ಈ ಹಿಂದೆ ಡಿಸಿಪಿಯಾಗಿದ್ದ ಶ್ರೀನಾಥ ಜೋಶಿ ನೇತೃತ್ವದ ತಂಡ 85,000 ಮುಖ ಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿತ್ತು. ಕೆಲ ದಿನಗಳ ಹಿಂದಷ್ಟೇ ಮಹಾನಗರ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಸುಮಾರು 2 ಲಕ್ಷಕ್ಕೂ ಹೆಚ್ಚು ಮುಖ ಬೆಲೆಯ ಖೋಟಾ ನೋಟುಗಳನ್ನು ಆರೋಪಿ ಸಹಿತ ಬಂಧಿಸಿದ್ದರೂ ಮೂಲ ಆರೋಪಿಯನ್ನು ಪತ್ತೆ ಹಚ್ಚಲು ಆಗುತ್ತಿಲ್ಲ.

ತನಿಖೆ ಜಾಡು ಹಿಡಿದು ಇಲ್ಲಿಂದ ಹೊರಟ ಪೊಲೀಸರು ಪಶ್ಚಿಮ ಬಂಗಾಳ ಅಥವಾ ಒಡಿಶಾಕ್ಕೆ ಹೋಗಿ ಮಾಹಿತಿ ಸಿಗದೆ ನಿಲ್ಲುತ್ತಾರೆ. ಒಂದೊಮ್ಮೆ ಅಲ್ಲಿ ಸುಳಿವು ಸಿಕ್ಕರೂ ಮುಂದೆ ಬಾಂಗ್ಲಾ ದೇಶಕ್ಕೆ ಹೋಗಲು ಸಾಧ್ಯವಾಗದೇ ಮರಳುತ್ತಾರೆ. ಇನ್ನು ಹುಬ್ಬಳ್ಳಿಯಲ್ಲಿ ಸೆಟ್ಲಮೆಂಟ್‌ನಲ್ಲಿರುವ ವ್ಯಕ್ತಿಯೊಬ್ಬ ಖೋಟಾ ನೋಟಿನ ದಂಧೆಯ ಹಿಂದಿದ್ದಾನೆಂದು ಪೊಲೀಸರಿಗೆ ಗುಮಾನಿಯಿದೆ. ಆದರೂ ಆತನ ವಿರುದ್ಧ ಪ್ರಕರಣ ದಾಖಲಿಸಲು ಸೂಕ್ತ ಪುರಾವೆ ಸಿಗುತ್ತಿಲ್ಲ.

ವ್ಯವಹಾರ ಹೀಗಿದೆ
ವಿಶೇಷವಾಗಿ ಬಾಂಗ್ಲಾ ದೇಶದ ಮೂಲಕ ಭಾರತಕ್ಕೆ ಬರುತ್ತಿರುವ ಖೋಟಾನೋಟುಗಳನ್ನು ಪತ್ತೆ ಮಾಡುವುದು ಕಷ್ಟ.1 ಲಕ್ಷ ಮೌಲ್ಯದ ಖೋಟಾ ನೋಟಿಗೆ ಕೇವಲ 25,000 ರಿಂದ 30,000 ಅಸಲಿ ನೋಟು ತಲುಪಿಸಿದರೆ ಸಾಕು. ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಬರುವ ಖೋಟಾ ನೋಟುಗಳು ಪ್ರಮುಖವಾಗಿ ರಾಣಿಬೆನ್ನೂರು, ಗಜೇಂದ್ರಗಡ, ಲಕ್ಷ್ಮೇಶ್ವರ, ದಾವಣಗೆರೆ, ಬಳ್ಳಾರಿ, ಗೋಕಾಕ, ಅಥಣಿ ಮತ್ತಿತರ ಮಾರುಕಟ್ಟೆ ಕೇಂದ್ರಗಳಲ್ಲಿ ಚಲಾವಣೆಯಾಗುತ್ತಿದೆ.

ಖೋಟಾನೋಟುಗಳು ಬಾಂಗ್ಲಾದೇಶ ಮೂಲಕ ಹುಬ್ಬಳ್ಳಿಗೆ ಬರುತ್ತಿದೆಯಾದರೂ ಅದರ ಮೂಲ ತಲುಪುವುದು ಕಷ್ಟವಾಗುತ್ತಿದೆ. ತನಿಖೆಗೆ ವರ್ಷಗಟ್ಟಲೇ ಕಾಲ ವ್ಯಯವಾಗುತ್ತದೆ. ಆ ಹೊತ್ತಿಗಾಗಲೇ ಆರೋಪಿ ಮೂಲ ಬದಲಿಸಿರುತ್ತಾನೆ. ಖೋಟಾ ನೋಟಿನ ದಂಧೆ ಕಡಿವಾಣಕ್ಕೆ ಸಾಕಷ್ಟು ಕಠಿಣ ಕ್ರಮ ಕೈಗೊಂಡಿದ್ದೇವೆ. ಭಾರತೀಯ ಅರ್ಥ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಖೋಟಾನೋಟು ದಂಧೆ ಆತಂಕಕಾರಿ.

ರವೀಂದ್ರ ಪ್ರಸಾದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com