ಶೌಚಾಲಯಕ್ಕೂ ಮಿನರಲ್ ವಾಟರ್!

ಬಳ್ಳಾರಿ ಗಣಿಧಣಿಗಳು ಸ್ನಾಕ್ಕೂ ಮಿನರ್ಲ್ ವಾಟರ್ ಬಳಸುತ್ತಿದ್ದ ಸುದ್ದಿ ಓದಿದ್ದೀರಿ...
ಮಿನರಲ್ ವಾಟರ್
ಮಿನರಲ್ ವಾಟರ್

ಕಲಬುರಗಿ:  ಬಳ್ಳಾರಿ ಗಣಿಧಣಿಗಳು ಸ್ನಾಕ್ಕೂ ಮಿನರ್ಲ್ ವಾಟರ್ ಬಳಸುತ್ತಿದ್ದ ಸುದ್ದಿ ಓದಿದ್ದೀರಿ. ಕಲಬುರಗಿಯಲ್ಲಿ ಕೇಂದ್ರೀಯ ವಿ.ವಿ  ವಿದ್ಯಾರ್ಥಿಗಳಿಗೆ ಶೌಚಕ್ಕೂ ಮಿನರಲ್ ವಾಟರ್! ಅದೂ ವಿ.ವಿಯಿಂದಲೇ ಪೂರೈಕೆಯಾಗುತ್ತಿದೆ!!

ವಿದ್ಯಾರ್ಥಿಗಳ ಭಾಗ್ಯಕ್ಕೆ ಕರುಬಬೇಕಿಲ್ಲ. ಕಾಯಂಜಲಮೂಲ ಇಲ್ಲದೇ ಹೈರಾಣಗಿರುವ ವಿ.ವಿ, ತಾತ್ಕಾಲಿಕ ಪರಿಹಾರಕ್ಕೆಂದು ಕ್ಯಾನ್‌ಗಳಲ್ಲಿ ಮಿನರಲ್ ವಾಟರ್ ತರಿಸಿಕೊಳ್ಳುತ್ತಿದೆ.

ಸಮೀಪದ ಕಡಗಂಚಿ- ಸುಂಟನೂರು ಸೀಮೆಯ 621 ಎಕರೆ ವಿಸ್ತ್ರೀರ್ಣದಲ್ಲಿ  ತಲೆ ಎತ್ತಿರುವ ಕೇಂದ್ರೀಯ ವಿವಿಯಲ್ಲಿ 1, 350 ವಿದ್ಯಾರ್ಥಿಗಳು ದೇಶ ವಿದೇಶದಿಂದ ಬಂದು ಸೇರಿದ್ದಾರೆ. 200 ಸಿಬ್ಬಂದಿಗಳಿದ್ದಾರೆ. ಇವರಿಗೆ ನಿತ್ಯ 2.50 ಎಂಜಿಡಿ (ಮಿಲಿಯನ್ ಗ್ಯಾಲನ್  ಪರ್‌ಡೇ) ನೀರು ಅಗತ್ಯ. ಆದರೆ ವಿವಿ ಕ್ಯಾಂಪಸ್‌ನಲ್ಲಿ ಜೀವಜನ ಮರೀಚೆಗೆಯಾಗಿದೆ. ಕುಡಿಯಲು ಯೋಗ್ಯ ನೀರೂ ಇಲ್ಲಿಲ್ಲ. ಅಂತರ್ಜಲ ಮೊದಲೇ ಇಲ್ಲ, ಇನ್ನು ಎಲ್ಲಿಂದಲಾದರೂ ನೀರನ್ನು ತಂದು ಪೂರೈಸೋಣ ಎಂದರೆ ಆ ಕೆಲಸವೂ ಇಲ್ಲಿ ಪಕ್ಕಾ ನಡೆದಿಲ್ಲ. ಹೀಗಾಗಿ ಕೇಂದ್ರೀಯ ವಿವಿ ಆರಂಭವಾಗಿ 6 ವರ್ಷ ಕಳೆದರೂ ನೀರಿನ ಸಮಸ್ಯೆ  ಇಲ್ಲಿಂದ ಕಾಯಂ ಆಗಿ ತೊಲಗಿಲ್ಲ.

ಗೊಂಚಲ ಗ್ರಾಮ ಯೋಜನೆಯಡಿಯಲ್ಲಿ ಅಮರ್ಜಾ ಅಣೆಕಟ್ಟೆಯಿಂದ ನಾಲ್ಕಾರು ಹಳ್ಳಿಗಳ ಜೊತೆಗೆ ಕೇಂದ್ರೀಯ ವಿವಿಗೂ ನೀರು ಪೂರೈಸುವ ಯೋಜನೆ ಗ್ರಾಮೀಣಾಭಿವೃದ್ಧಿ - ಪಂಚಾಯತ್ ರಾಜ್ ಇಲಾಖೆ ರೂಪಿಸಿತ್ತಾದರೂ ಈ ಯೋಜನೆಯಡಿಯಲ್ಲಿ ವಿವಿಗೆ ನೀರು ಹರಿದು ಬಂದದಕ್ಕಿಂತ ಹೆಚ್ಚಿಗೆ ಕರೆಂಟ್ ಬಿಲ್ ಬಂತು! ಕೊನೆಗೆ ಅಮರ್ಜಾ ಅಣೆಕಟ್ಟೆಯಲ್ಲೇ ನೀರಿನ ಕೊರತೆ ಕಾಡಿತು! ಇದೀಗ ವಿವಿ ಕ್ಯಾಂಪಸ್‌ನಿಂದ 3 ಕಿ.ಮೀ ದೂರದಲ್ಲಿ 2 ಕೊಳವೆಬಾವಿ ಕೊರೆಯಿಸಿದೆ. ಅದೃಷ್ಟವಶಾತ್ 2 ಕೊಳವೆಬಾವಿಯಿಂದ ನಾಲ್ಕಿಂಚು ನೀರು ಪುಟಿಯುತ್ತಿದೆ.

ಅಲ್ಲಿಂದ ಮತ್ತೆ ಕೊಳವೆ ಮಾರ್ಗ ಹಾಕಿ ನೀರನ್ನೆತ್ತುವ ಕೆಲಸಕ್ಕೆ ಮುಂದಾಗಿದೆ. ಇವೆಲ್ಲದರ ನಡುವೆಯೇ ಭೀಮಾ ನದಿಯಿಂದ ನೀರನ್ನು ತಂದರೆ ಹೇಗೆ? ಇದು ಕಾಯಂಜಲಮೂಲವಾಗಬಹುದೆ? ಎಂಬ ಚಿಂತನೆಯೂ ವಿವಿ ಮಾಡುತ್ತಿದೆ.

ಎಲ್ಲ ಕೆಲಸಕ್ಕೂ  ಮಿನರಲ್ ವಾಟರ್!:  ನೀರಿಲ್ಲ ಎಂದು ದೋಷ ಹೊತ್ತು ಕೊಳ್ಳುವುದು ಬೇಡವೆಂದು ಕೇಂದ್ರೀಯ ವಿವಿ ಆಡಳಿತ ಮಿನರಲ್ ನೀರನ್ನೇ ಖರೀದಿಸಿ ಪೂರೈಸುತ್ತಿದೆ. ಬೆಳಗಿನ ಬಹಿರ್ದೆಸೆಯಿಂದ  ಹಿಡಿದು ಕುಡಿಯಲು , ಅಡುಗೆಗೆ , ಎಲ್ಲದಕ್ಕೂ ಮಿನರ್ಲ್ ನೀರು ಬಳಸಲಾಗುತ್ತಿದೆ.

ನಿತ್ಯ ಲಕ್ಷಾಂತರ ರುಪಾಯಿ ತೆತ್ತು ನೀರು ಖರೀದಿಸಿ ಸರಬರಾಜು ಮಾಡಲಾಗುತ್ತಿದ್ದರೂ  ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಕಲುಷಿತ ನೀರು ಸೇವನೆಯಿಂದ ಬರುವ ಹೆಪಟೈಟಿಸ್-ಇ ರೋಗದಿಂದ ತುತ್ತಾಗಿ ಮೃತಪಟ್ಟಿದ್ದ. ಈ ಪ್ರಕರಣದ ನಂತರ ವಿವಿ 10 ದಿನ ರಜೆ ನೀಡಿದೆ.

ನೀರಿಗಾಗಿ ನಿತ್ಯ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದಷ್ಟು ಬೆಗ ನೀರು ಪೂರೈಕೆ ವಿವಿ  ಅಂಗಳದಲ್ಲಿ ಸರಾಗವಾಗಲಿ ಎಂಬುದೇ ನಮ್ಮ ಕನಸು. ಅದು ಈಡೇರುವವರೆಗೂ  ನಾವು ವಿರಮಿಸುವುದಿಲ್ಲ.
-ಡಾ. ಎಂ.ಎನ್ ಸುಧೀಂದ್ರ ರಾವ್,
ಕುಲಪತಿ


-ಶೇಷಮೂರ್ತಿ ಅವಧಾನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com