ಐಟಿ ಬಿಟಿಯಲ್ಲಿ ನಾವೇ ದಿಗ್ಗಜರು: ಸಿಎಂ

ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೇ ದಿಗ್ಗಜರು , ನಮಗೆ ಭಾರತದಲ್ಲಿ ಯಾವುದೇ ಸ್ಪರ್ಧಿಗಳಿಲ್ಲ...
ಸಿದ್ಧರಾಮಯ್ಯ
ಸಿದ್ಧರಾಮಯ್ಯ
Updated on

ಬೆಂಗಳೂರು: ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೇ ದಿಗ್ಗಜರು , ನಮಗೆ ಭಾರತದಲ್ಲಿ ಯಾವುದೇ ಸ್ಪರ್ಧಿಗಳಿಲ್ಲ. ನಮ್ಮ ಸ್ಪರ್ಧೆ ಸಿಲಿಕಾನ್ ವ್ಯಾಲಿಯೊಂದಿಗೆ ಮಾತ್ರ  ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಸಿಬಿಟ್ ಇಂಡಿಯಾ-2014ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಬೆಂಗಳೂರು ಮಹಾನಗರವು ದೇಶದ ಐಟಿ ರಾಜಧಾನಿ ಎನ್ನುವುದನ್ನು ದಾಖಲೆ ಸಮೇತ ವಿವರಿಸಿ ಇತ್ತೀಚೆಗೆ ಕೇಳಿ ಬಂದಿದ್ದ ಆರೋಪಗಳಿಗೆ ಉತ್ತರ ನೀಡಿದರು. ಯಾವುದೇ ಕಾರಣಕ್ಕೂ ಮಾಹಿತಿ ತಂತ್ರಜ್ಞಾನ  ಹೂಡಿಕೆ ವಲಯದಿಂದ  ಹಿಂದೆ ಸರಿಯುವುದಿಲ್ಲ. 2020 ರೊಳಗೆ ಮಾಹಿತಿ ತಂತ್ರಜ್ಞಾನ ವಲಯದ ರಫ್ತು ಪ್ರಮಾಣವನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಭರವಸೆ ನೀಡಿದರು,

ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 175  ಹೊಸ ಕಂಪನಿಗಳು  ಬಂದಿದ್ದು, 2.4 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಸುಮಾರು  72  ಸಾವಿರ ನೇರ ಉದ್ಯೋಗ ಸೃಷ್ಟಿಸಿವೆ. ಈ ಮೂಲಕ  ಮಾಹಿತಿ ತಂತ್ರಜ್ಞಾನ ವಲಯದಲ್ಲಿ ದೇಶದಲ್ಲೇ ಅತೀ ಹೆಚ್ಚು ಉದ್ಯೋಗ ನೀಡುವ ನಗರ ಎಂಬ ಖ್ಯಾತಿಯನ್ನು ಬೆಂಗಳೂರು ಹೊಂದಿದೆ. ನಗರದ ಗರಿಮೆ ಹೆಚ್ಚಿಸುವ ಇನ್ನಷ್ಟು ಕೆಲಸವನ್ನು ಸರ್ಕಾರ ಮಾಡಲಿದೆ. ಇದಕ್ಕೆ ಮನ್ನಣೆ ಎಂಹಂತೆ ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಸಿಬಿಟ್ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ಐಟಿಐಆರ್ ಯೋಜನೆಯ ಮೊದಲ ಹಂತದಲ್ಲಿ 10,500 ಎಕರೆ ಭೂಮಿಯನ್ನು ಉದ್ಯಮಕ್ಕೆ ನೀಡಲಾಗುತ್ತದೆ. ಕೂಡಲೇ 2722 ಎಕರೆಯನ್ನು ಸ್ವಾಧೀನ ಪಡಿಸಿಕೊಂಡು ಮೂಲಸೌಕರ್ಯ ಒದಗಿಸುವಂತೆ ಕೆಐಎಡಿಬಿಗೆ ಸೂಚನೆ ನೀಡಿದ್ದೇನೆ. ಇದಕ್ಕಾಗಿ ಹುಡ್ಕೋದಿಂದ ರು.1 ಸಾವಿರ ಕೋಟಿ ಸಾಲ ಪಡೆಯಲಾಗುತ್ತಿದೆ. ಈ ವಲಯದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಯಾಗುತ್ತಿದ್ದು, 12 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ನಮಗೆ ಯಾರೂ ಸಾಟಿಯಿಲ್ಲ:  ದೇಶದ ಐಟಿ ರಾಜಧಾನಿ ಬೆಂಗಳೂರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕೇಂದ್ರ ಸರ್ಕಾರ ಹಾಗೂ ನ್ಯಾಸ್ಕಾಮ್‌ನ ಮಾಹಿತಿಗಳೇ ಇದನ್ನು ಸಾರಿ ಹೇಳುತ್ತವೆ. ದೇಶದ ಐಟಿ ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕ ಶೇ.38ರಷ್ಟು ಪಾಲು ಹೊಂದಿದೆ. ಈ ಮೊದಲು ಇದು ಶೇ.35ರಷ್ಟಿತ್ತು. ಪ್ರಸ್ತುತ ಪ್ರತೀವರ್ಷ ರು. 1.84 ಲಕ್ಷ ಕೋಟಿ ಮೊತ್ತದ ಐಟಿ ಉತ್ಪನ್ನ ರಫ್ತಾಗುತ್ತಿದೆ. 2020ರ ವೇಳೆಗೆ ಇದು ರು.4 ಲಕ್ಷ ಕೋಟಿ ದಾಟಲಿದೆ. ಇನ್ನು  ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೂ ರಾಜ್ಯ ಸರ್ಕಾರ ಒತ್ತು ನೀಡಿದ್ದು, 2020ರ ವೇಳೆಗೆ ದೇಶದ ರಫ್ತಿನಲ್ಲಿ ಶೇ.20ರಷ್ಟು ಪ್ರಮಾಣ ಬೆಂಗಳೂರಿನದ್ದಾಗಲಿದೆ ಎಂದು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಎಸ್. ಆರ್, ಪಾಟೀಲ್ ಹೇಳಿದರು.

ಬೆಂಗಳೂರು ಬದಲಾಗಲಿಲ್ಲ!


ಬ್ಯಾಂಗಲೂರನ್ನು ಬೆಂಗಳೂರು ಎಂದು ಬದಲಾಯಿಸಿ ನ.1ರಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ. ಆದರೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಸರು ಬದಲಾವಣೆಯಾದಂತೆ ಕಾಣಿಸಲೇ ಇಲ್ಲ. ಸಿಬಿಟ್ ಇಂಡಿಯಾ -2014 ರ ಪಕ್ಕದಲ್ಲಿ bangaloreITe.biz2014  2014 ಎಂದಿತ್ತು. ಇನ್ನು ಕಾರ್ಯಕ್ರಮಕ್ಕೆ ಸಂಬಂಧಿಸಿದ ಹಸ್ತಪ್ರತಿಗಳಲ್ಲಿಯೂ ಬದಲಾದ ಹೆಸರನ್ನು ಪ್ರಕಟಿಸಿರಲಿಲ್ಲ. ಇದೇ ಕಾರಣದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಭಾಷಣದಲ್ಲಿ  bangaloreITe.biz2014 ಎನ್ನುವ ಬದಲು  bengaluruITe.biz2014ಎಂದರು. ಈ ವಿಚಾರದಲ್ಲಿ ಐಟಿಬಿಟಿ ಇಲಾಖೆ ಅಧಿಕಾರಿಗಳು ಹಾಗೂ ಆಯೋಜಕರು ನಿರ್ಲಕ್ಷ್ಯ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com