ಸಿಐಡಿ ತನಿಖೆ ಸಂಪೂರ್ಣ "ನಂದಿತಾ''?

ಇಡೀ ರಾಜ್ಯದಲ್ಲಿ ಸದ್ದು ಮಾಡಿದ ತೀರ್ಥಹಳ್ಳಿ ನಂದಿತಾ ಸಾವಿನ ರಹಸ್ಯ ಭೇದಿಸುವಲ್ಲಿ ಸಿಐಡಿಯೂ ವಿಫಲವಾಗಿದೆ.
ನಿಗೂಢವಾಗಿ ಸಾವಿಗೀಡಾದ ಬಾಲಕಿ ನಂದಿತಾ
ನಿಗೂಢವಾಗಿ ಸಾವಿಗೀಡಾದ ಬಾಲಕಿ ನಂದಿತಾ

ಬಾಲಕಿ ಸಾವಿನ ಪ್ರಕರಣ ಭೇಧಿಸುವಲ್ಲಿ ಅಧಿಕಾರಿಗಳು ವಿಫಲ
-ಶ್ರೀಕಾಂತ್ ಭಟ್
ಶಿವಮೊಗ್ಗ:
ಇಡೀ ರಾಜ್ಯದಲ್ಲಿ ಸದ್ದು ಮಾಡಿದ ತೀರ್ಥಹಳ್ಳಿ ನಂದಿತಾ ಸಾವಿನ ರಹಸ್ಯ ಭೇದಿಸುವಲ್ಲಿ ಸಿಐಡಿಯೂ ವಿಫಲವಾಗಿದೆ. ಎರಡು ವಾರದಿಂದ ತೀರ್ಥಹಳ್ಳಿಯಲ್ಲಿ ಬೀಡುಬಿಟ್ಟು, ಬಿಸಿಲು-ಮಳೆ ಲೆಕ್ಕಿಸದೇ ಅಲೆದಾಡಿದ್ದ ಅಧಿಕಾರಿಗಳು ತನಿಖೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ನಾವು ಎಲ್ಲ ರೀತಿ ಪ್ರಯತ್ನ ನಡೆಸಿದರೂ ನಂದಿತಾ ಸಾವಿನ ಬಗ್ಗೆ ಸ್ಪಷ್ಟಕಾರಣ ತಿಳಿದಿಲ್ಲ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂದಿತಾ ಪ್ರಕರಣ ರಾಜಕೀಯ ತಿರುವು ಪಡೆದು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯಾಗಿದ್ದರಿಂದ ಸರ್ಕಾರ ಹೆಚ್ಚಿನ ತನಿಖೆಗೆ ಸಿಐಡಿಗೆ ಒಪ್ಪಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಐಡಿ ಅಧಿಕಾರಿಗಳು ಸಾವಿನ ಕಾರಣ ಹುಡುಕುತ್ತಾ ಹೊರಟರು. ಪ್ರಕರಣದ ಬೇರೆ ಮಜಲುಗಳನ್ನು ಜಾಲಾಡಿದರು. ವೈದ್ಯರು ವಿದ್ಯಾರ್ಥಿಗಳು, ವಾಹನ ಚಾಲಕರು ಸೇರಿ ನೂರಾರು ಜನರನ್ನು ವಿಚಾರಣೆಗೊಳಪಡಿಸಿದರು. ದೂರವಾಣಿ ಕರೆಗಳ ಬೆನ್ನು ಹತ್ತಿದರು. ಸಿಸಿಟಿವಿ ಮೊರೆ ಹೋದರು. ಆದರೂ ಸಾವಿನ ಕಾರಣ ತಿಳಿಯಲು ಸಾಧ್ಯವಾಗಿಲ್ಲ. ಅಂತಿಮವಾಗಿ ನ.17ರಂದು ಒಂದು ಹಂತದ ತನಿಖೆ ಮುಗಿಸಿ ಸಿಐಡಿ ಅಧಿಕಾರಿಗಳು ಬೆಂಗಳೂರಿನತ್ತ ಯಾವುದೇ ಯಶ ಸಾಧಿಸದೇ ಬರಿಗೈಯಲ್ಲಿ ಸಾಗಿದ್ದಾರೆ.

ತನಿಖೆಯಲ್ಲಿ ಸಿಕ್ಕಿದ್ದೇನು?

ವಿವಿಧ ಆಯಾಮಗಳನ್ನು ತನಿಖೆ ನಡೆಸಲಾಯಿತು. ಆದರೆ ನಂದಿತಾ ಸಾವಿನ ಬಗ್ಗೆ ಖಚಿತ ಮಾಹಿತಿ ತಿಳಿಯಲೇ ಇಲ್ಲ ಎಂಬುದು ಅಧಿಕಾರಿಗಳ ವಿವರಣೆ.  ಘಟನೆ ನಡೆದು ಮೂರು ದಿನಗಳ ತರುವಾಯ ಪೊಲೀಸರಿಗೆ ದೂರು ಕೊಟ್ಟಿದ್ದೂ ಇದಕ್ಕೆ ಕಾರಣ ಇರಬಹುದು. ಆಸ್ಪತ್ರೆಗೆ ದಾಖಲಾದ ತಕ್ಷಣವೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಷ್ಟೆಲ್ಲಾ ರಂಪಾಟ ಆಗುತ್ತಿರಲಿಲ್ಲ ಎನ್ನುತಾರೆ ಅವರು. ಯಾರನ್ನಾದರೂ ಬಂಧಿಸಿದ್ದೀರಾ ಎಂಬ ಪ್ರಶ್ನೆಗೆ. ಯಾರದೋ ಸಮಾಧಾನಕ್ಕೆ ಬಂಧಿಸುವುದು ಸರಿಯಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ತನಿಖೆ ಪ್ರಗತಿಯಾಗಬಹುದು ಎನ್ನುವ ಉತ್ತರ ಅವರದು.

ಮುಂದೇನು?
ಸದ್ಯದ ಮಾಹಿತಿಯಂತೆ ನಂದಿತಾ ಮೇಲೆ ಅತ್ಯಾಚಾರ ನಡೆದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ನಂತರ ಒಂದು ಚಿತ್ರಣ ಸಿಗುತ್ತದೆ. ನಂತರ ತನಿಖೆ ಅಗತ್ಯವಿದ್ದರೆ ಮುಂದುವರೆಸುತ್ತೇವೆ ಎಂದು ಸಿಐಡಿ ಹಿರಿಯ ಅಧಿಕಾರಿ ವಿವರಿಸಿದ್ದಾರೆ.

ಡೆತ್‌ನೋಟ್ ಖಚಿತವಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅದನ್ನು ಪರಿಶೀಲಿಸಲಾಗಿದ್ದು ವರದಿ ಬರಬೇಕಾಗಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು ಮಣಿಪಾಲ ಆಸ್ಪತ್ರೆಯಲ್ಲಿ. ನಂದಿತಾ ದೇಹದ ಕೆಲವು ಸ್ಯಾಂಪಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸಾವಿಗೆ ನಿಖರ ಕಾರಣ ಹುಡುಕುವ ಪ್ರಯತ್ನ ನಡೆದಿದೆ. ದಾವಣೆಗೆರೆ, ಬೆಂಗಳೂರು, ಮಣಿಪಾಲದ ಲ್ಯಾಬ್‌ಗಳಲ್ಲಿ ನಂದಿತಾ ಪ್ರಕರಣದ ಅಧ್ಯಯನ ನಡೆದಿದೆ. ಒಂದೆರಡು ವಾರದಲ್ಲಿ ವರದಿ ಬರುವ ನಿರೀಕ್ಷೆ ಇದೆ. ಅಗತ್ಯಬಿದ್ದರೆ ಹೆಚ್ಚಿನ ಸಂಶೋಧನೆಗೆ ಪುಣೆ ಪ್ರಯೋಗಾಲಯಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಂದಿತಾ ಪ್ರಕರಣದ ನಂತರ ಬೀಟ್ ವ್ಯವಸ್ಥೆ ಚುರುಕುಗೊಳಿಸಲಾಗಿದೆ. ಸೂಕ್ಷ್ಮ ಒಳನಾಡು ಪ್ರದೇಶಗಳಲ್ಲಿ ಬೀಟ್ ಬಲಗೊಳಿಸಲಾಗಿದೆ. ನಾಕಾಬಂದಿ ಹೆಚ್ಚಿಸಲಾಗಿದೆ. ನಂದಿತಾ ಪ್ರಕರಣದಲ್ಲಿ ಗಿರೀಶ್ ಎಂಬಾತ ಘಟನಾ ಸ್ಥಳಕ್ಕೆ ಹೋಗಿಬಂದು ತನ್ನ ಮೇಲಧಿಕಾರಿಗೆ ತಿಳಿಸಿದ್ದರೂ, ಘಟನೆಯ ತೀವ್ರತೆಯ ಅರಿಯದೇ ಈ ವಿಚಾರ ದಾಖಲಾಗಿರಲಿಲ್ಲ. ಹೀಗಾಗಿ ಯಾವುದೇ ಪ್ರಕರಣದಲ್ಲಿ ಘಟನಾ ಸ್ಥಳಕ್ಕೆ ಹೋದ ಸಿಬ್ಬಂದಿ ಲಿಖಿತವಾಗಿ ತನ್ನ ಮೇಲಧಿಕಾರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ನಂದಿತಾ ಪ್ರಕರಣದಲ್ಲಿ ಪೊಲೀಸ್ ಇಲಾಖೆಯೂ ಆಂತರಿಕ ತನಿಖೆ ಆರಂಭಿಸಿದೆ.
-ಕೌಶಲೇಂದ್ರ ಕುಮಾರ್, ಎಸ್ಪಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com