
ಬೆಂಗಳೂರು: ಛಾಪಾ ಕಾಗದ ಹಗರಣದ ನಂತರ ಅಸ್ತಿತ್ವ ಕಳೆದುಕೊಂಡಿದ್ದ ರೆವಿನ್ಯೂ ಸ್ಟಾಂಪ್ ಬಳಕೆ ಪದ್ಧತಿ ರಾಜ್ಯದಲ್ಲಿ ಮತ್ತೆ ಚಾಲ್ತಿಗೆ ಬರಲಿದೆ.
ಶ್ರೀಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕಡಿಮೆ ಮುಖಬೆಲೆಯ ಸ್ಟ್ಯಾಂಪ್‌ಗಳನ್ನು ಮುದ್ರಿಸಿ ಮಾರುಕಟ್ಟೆಗೆ ತರಲು ಕಂದಾಯ ಇಲಾಖೆ ನಿರ್ಧರಿಸಿದೆ.
ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಕರೀಂ ಲಾಲ್ ತೆಲಗಿ ಸೃಷ್ಟಿಸಿದ್ದ ಬಹುಕೋಟಿ ಮೌಲ್ಯದ ಛಾಪಾ ಕಾಗದ ಹಗರಣದ ನಂತರ ರೆವಿನ್ಯೂ ಸ್ಟ್ಯಾಂಪ್ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ, ಇದರಿಂದ ಶ್ರೀಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಮರು ಬಳಕೆಗೆ ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರಿ. ರು.1, ರು.2, ರು.5 ಮುಖಬೆಲೆಯ ರೆವಿನ್ಯೂ ಸ್ಟ್ಯಾಂಪ್‌ಗಳನ್ನು ಮಾತ್ರ ಮತ್ತೆ ಚಲಾವಣೆಗೆ ತರಲಾಗುವುದು. ಇದರಿಂದ ಇಲಾಖೆಗೆ ಆದಾಯ ಸೃಷ್ಟಿಯಾಗುವುದರ ಜತೆಗೆ ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆಯನ್ನೂ ನಿವಾರಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಏನಿದು ಸಮಸ್ಯೆ?
ರಾಜ್ಯದಲ್ಲಿ ರೆವಿನ್ಯೂ ಸ್ಟ್ಯಾಂಪ್ ಬಳಕೆಯನ್ನು ನಿಷೇಧಿಸಲಾಗಿದ್ದರೂ ಕಂದಾಯ ಇಲಾಖೆ ಮತ್ತು ಬ್ಯಾಂಕ್ ವ್ಯವಹಾರಗಳಲ್ಲಿ ಚಾಲ್ತಿಯಲ್ಲಿತ್ತು. ನಿಗದಿತ ಅರ್ಜಿ ನಮೂನೆಗಳಲ್ಲಿ ಸ್ಟ್ಯಾಂಪ್ ಅಂಟಿಸುವುದಕ್ಕಾಗಿಯೇ ಪ್ರತ್ಯೇಕ ಜಾಗ ಬಿಡಲಾಗುತ್ತಿತ್ತು. ಹೀಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮುಖಬೆಲೆಗಿಂತ ದುಪ್ಪಟ್ಟು ದರಕ್ಕೆ ಮಾರಲಾಗುತ್ತಿತ್ತು. ಹೈಕೋರ್ಟ್ ಸೂಚನೆಯಲ್ಲಿ ರಾಜ್ಯ ಸರ್ಕಾರ ಸ್ಟ್ಯಾಂಪ್ ಬಳಕೆ ಜಾರಿಗೆ ತಂದಿದ್ದರೂ ನಿಷೇಧವಿದೆ ಎಬ ಕಾರಣ ನೀಡಿ ಸಾಮಾನ್ಯ ಜನರ ಸುಲಿಗೆ ಮಾಡಲಾಗುತ್ತಿತ್ತು. ಸರ್ಕಾರ ಈ ಬಗ್ಗೆ ಸೂಕ್ತ ಪ್ರಚಾರ ನಡೆಸದೇ ಇದ್ದುದರಿಂದ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಪ್ರಶ್ನಿಸಿದಾಗ ಅವರು, ಬಳಕೆ ಪುನರಾರಂಭಿಸುವುದನ್ನು ಖಚಿತ ಪಡಿಸಿದ್ದಾರೆ.
Advertisement