
ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿರುವ 1998ರ ಪರಿಷ್ಕೃತ ಪಟ್ಟಿ ಕುರಿತ ಕರ್ನಾಟಕ ಹೈಕೋರ್ಟ್‌ನ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಪರಿಷ್ಕೃತ ಪಟ್ಟಿಯಿಂದ ಉದ್ಯೋಗ ಕಳೆದುಕೊಳ್ಳಲಿರುವ ಗೋಪಾಲಕೃಷ್ಣ ಮತ್ತಿತ್ತರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್‌ಎಲ್ ದತ್ತು ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. 1998, 99 ಹಾಗೂ 2004ರ ಕೆಪಿಎಸ್‌ಸಿ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಖಲೀಲ್ ಅಹ್ಮದ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ 1998ರ ನೇಮಕದ ಪರಿಷ್ಕೃತ ಪಟ್ಟಿ ಪ್ರಕಟಿಸುವಂತೆ ಆದೇಶಿಸಿತ್ತು. ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಎಸ್ ಕಳೆದ ವಾರ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ 140 ಅಧಿಕಾರಿಗಳ ಸ್ಥಾನ ಬದಲಾಗಿತ್ತು.
20 ಮಂದಿ ಹೊಸದಾಗಿ ಹುದ್ದೆ ಪಡೆದಿದ್ದರು. 25 ಹಾಲಿ ಅಧಿಕಾರಿಗಳು ಕೆಲಸ ಕಳೆದು ಕೊಂಡಿದ್ದರು. ಎಂಟು ವರ್ಷ ಸೇವೆ ಸಲ್ಲಿಸಿರುವ ನಮ್ಮನ್ನು ಹುದ್ದೆಯಿಂದ ತೆಗೆದುಹಾಕುವುದು ನ್ಯಾಯ ಸಮ್ಮತವಲ್ಲ ಎಂಬ ಅರ್ಜಿದಾರರ ವಾದ ಮನ್ನಿಸಿದ ನ್ಯಾಯಪೀಠವು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಮುಂದಿನ ಆದೇಶದವರೆಗೂ ತಡೆ ನೀಡಿದೆ. ಇದರಿಂದ 8 ವರ್ಷದಿಂದ ಕಾನೂನು ಹೋರಾಟ ನಡೆಸುತ್ತಿರುವ ನೊಂದ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಧಿಕಾರಿಗಳು ಸದ್ಯದ ಮಟ್ಟಿಗೆ ನಿರಾಳರಾಗಬಹುದು.
ಏನಿದು ವಿವಾದ?
1998,99 ಹಾಗೂ 2004ರಲ್ಲಿ 383 ಗೆಜೆಟೆಡ್ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಕ್ರಮವಾಗಿ ಕೆಲ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿಗೆ ಸೇರಿಸಲಾಗಿತ್ತು. ಸಿಐಡಿ ತನಿಖೆಯಲ್ಲಿ ಇದು ಸಾಬೀತಾಗಿ ಕಳೆದ 8 ವರ್ಷದಿಂದ ರಾಜ್ಯ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪರಿಷ್ಕೃತ ಪಟ್ಟಿ ಬಿಡುಗಡೆಗೆ ಕಾರಣವೇನು?
ಪರೀಕ್ಷೆಯಲ್ಲಿ ಅಕ್ರಮವಾಗಿದೆ ಹಾಗೂ ಸುಳ್ಳು ಜಾತಿ ಪತ್ರ ನೀಡಲಾಗಿದೆ ಎನ್ನುವುದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿ ಕಳಂಕಿತ ಅಭ್ಯರ್ಥಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ತನಿಖಾ ವರದಿ ಆಧರಿಸಿ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲು ಕೆಪಿಎಸ್‌ಸಿಗೆ ಕೋರ್ಟ್ ಸೂಚಿಸಿತ್ತು.
ಹೋರಾಟದ ಉದ್ದೇಶವೇನು?
ಈ ಪರೀಕ್ಷೆಯಲ್ಲಿ ಯಶಸ್ವಿಯಾಗದ ಖಲೀಲ್ ಅಹ್ಮದ್ ಹಾಗೂ ಇತರ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಅವರ ಆಸಕ್ತಿಯಿಂದಲೇ ಅಕ್ರಮ ಬಹಿರಂಗವಾಗಿತ್ತು. ಹಳೆಯ ಆಯ್ಕೆ ಪಟ್ಟಿ ರದ್ದುಗೊಳಿಸಿ ಪರಿಷ್ಕೃತ ಪಟ್ಟಿಯಂತೆ ನೇಮಕ ಪ್ರಕ್ರಿಯೆ ನಡೆಸಬೇಕು ಎನ್ನುವುದು ಅರ್ಜಿದಾರರ ವಾದವಾಗಿತ್ತು.
ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕಾರಣವೇನು?
ಹೈಕೋರ್ಟ್ ಆದೇಶದಂತೆ 25 ಅಧಿಕಾರಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವ ಸಾಧ್ಯತೆ ಕಡಿಮೆಯಿದ್ದ ಕಾರಣ, ತುರ್ತಾಗಿ ಕೆಲಸ ಉಳಿಸಿಕೊಳ್ಳಲು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿದೆ.
Advertisement