ರೋಡಿಗಿಳಿದ ಮಾಲೀಕ

ಕೆಂಪು ಬಣ್ಣದ ಟ್ಯಾಕ್ಸಿ ಮೇಲೆ ಪ್ರವಾಸಿ ತಾಣ ಮಾಹಿತಿ ಕಡ್ಡಾಯ..
ರೋಡಿಗಿಳಿದ ಮಾಲೀಕ
Updated on

ಶಿವಮೊಗ್ಗ: ಸರ್ಕಾರದಿಂದ ಸಹಾಯಧನ ಪಡೆದು ಪ್ರವಾಸಿ ಟ್ಯಾಕ್ಸಿ ಖರೀದಿಸಿದ ವ್ಯಕ್ತಿಗಳನ್ನು ಇನ್ನು ಬಾಡಿಗೆ ಬಿಡದೆ ಸ್ವಂತಕ್ಕೆ ಬಳಸುವಂತಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈಗ ಹೊಸ ಷರತ್ತುಗಳನ್ನು ವಿಧಿಸಿದೆ.

ಫಲಾನುಭವಿಗಳು ಖರೀದಿಸುವ ಯಾವುದೇ ಮಾದರಿಯ ವಾಹನವನ್ನು ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ವಾಹನ ಎಂದು ಗುರುತಿಸಲು, ಏಕರೂಪತೆ ಕಾಣಲು ವಾಹನವು ಕೆಂಪು ಬಣ್ಣವೇ ಆಗಿರಬೇಕು.

ಪ್ರವಾಸೋದ್ಯಮ ಇಲಾಖೆಯ ಲೋಗೋ ಹಾಗೂ ಪ್ರವಾಸಿ ತಾಣಗಳ ಚಿತ್ರಗಳನ್ನು ವಾಹನದ ಮೇಲೆ ಬಿತ್ತರಿಸಬೇಕು. ಇದು ಕಡ್ಡಾಯ ಎಂದು ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.

ಈ ರೀತಿಯ ಪ್ರವಾಸಿ ಟ್ಯಾಕ್ಸಿಗಳನ್ನು ಏಕರೂಪಕ್ಕೆ ತರುವುದನ್ನು ಹಳೇ ಟ್ಯಾಕ್ಸಿಗಳಿಗೂ ವಿಸ್ತರಿಸಬೇಕು. ಇಂತಹ ಕಾರುಗಳು ದುರ್ಬಳಕೆ ಆಗುತ್ತಿವೆ. ಟ್ಯಾಕ್ಸಿಗಳ ಮೇಲೆ ಫಲಾನುಭವಿಯ ದೂರವಾಣಿ ಸಂಖ್ಯೆ ನಮೂದಿಸಿರಬೇಕು. 3 ತಿಂಗಳಿಗೊಮ್ಮೆ ಅಭ್ಯರ್ಥಿಯು ಯಾವ ಪ್ರವಾಸಿಯನ್ನು, ಯಾವ ಸ್ಥಳಕ್ಕೆ ಕರೆದೊಯ್ದಿದ್ದ ಎಂಬ ಬಗ್ಗೆ ಕಿ.ಮೀ. ಸಹಿತ ಮಾಹಿತಿ ಪಡೆಯ   ಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ.
-ಆಯನೂರು ಮಂಜುನಾಥ್, ರಾಜ್ಯ ಸಭಾ ಸದಸ್ಯ

ಇತರೆ ಷರತ್ತುಗಳೇನು?
* ಅಭ್ಯ.ರ್ಥಿ ಎಸ್ಸೆಸ್ಸೆಲ್ಸಿ ಪಾಸಾಗಿದ್ದು, ವಾಹನ ಚಾಲನಾ ಪರವಾನಗಿ ಹೊಂದಿ 1 ವರ್ಷವಾಗಿರಬೇಕು.
* ಅಭ್ಯರ್ಥಿಯ ಕುಟುಂಬದಲ್ಲಿ ಯಾವ ಸದಸ್ಯನೂ ಸರ್ಕಾರಿ ನೌಕರಿ ಹೊಂದಿರಬಾರದು.
* ಈಗಾಗಲೇ ಅಭ್ಯರ್ಥಿಯ ಕುಟುಂಬದಲ್ಲಿ ಒಬ್ಬರು ಟ್ಯಾಕ್ಸಿ ಪಡೆದಿದ್ದರೆ ಮತ್ತೊಬ್ಬರಿಗೆ    ಅವಕಾಶವಿಲ್ಲ.
* ಫಲಾನುಭವಿಯೇ ಸ್ವತಃ ಟ್ಯಾಕ್ಸಿ ಓಡಿಸಬೇಕು. ಬೇರೆಯವರಿಗೆ ಪರಭಾರೆ ಮಾಡಬಾರದು. ಪರಭಾರೆ ಮಾಡಿದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗವುದು.
* ಪ್ರತಿವರ್ಷಗಳಿಸಿದ ಆದಾಯದ ವಿವರಗಳನ್ನು ಜಿಲ್ಲಾ ಕಚೇರಿಗೆ ನೀಡಬೇಕು.
* ಬ್ಯಾಂಕಿನ ಸಾಲವನ್ನು ನಿರಂತರವಾಗಿ ಮರುಪಾವತಿ ಮಾಡಬೇಕು.
* ಪ್ರವಾಸಿಗರೊಂದಿಗೆ ಉತ್ತಮ ನಡವಳಿಕೆಯಿಂದ ವರ್ತಿಸಬೇಕು.
* ಕನ್ನಡ ಭಾಷಾ ಜ್ಞಾನ, ಇತರೆ ಭಾಷೆಗಳ ಪರ್ರಿತಿ ಪ್ರವಾಸಿ ಸ್ಥಳಗಳ ಮಾಹಿತಿ  ಹೊಂದಿರಬೇಕು.

ಈವರೆಗೆ ಏನಾಗಿತ್ತು?
ಈ ರೀತಿಯ ಯಾವುದೇ ಗುರುತುಗಳಿರದ ಕಾರಣ ಇವು ಖಾಸಗಿ ವಾಹನಗಳೋ, ಸಹಾಯಧನದೊಂದಿಗೆ ಖರೀದಿಸಿದ ವಾಹನಗಳೋ ಎಂದು ಪತ್ತೆ ಹಚ್ಚುವುದೇ ಕಷ್ಟವಾಗಿತ್ತು.

ಹೊಸ ಆದೇಶದಿಂದ ಏನಾಗುತ್ತೆ?
ರಾಜ್ಯದ ಎಲ್ಲ ಪ್ರವಾಸಿ ಟ್ಯಾಕ್ಸಿಗಳು ಬಣ್ಣ, ಚಿತ್ರಣ, ಬ್ರಾಂಡಿನೊಂದಿಗೆ ಏಕರೂಪ ಪಡೆಯಲಿವೆ. ಸಾರ್ವಜನಿಕರೂ ಸುಲಭವಾಗಿ ಗುರಿತಿಸಬಹುದು. ಬಡವರಿಗೆ, ನಿರುದ್ಯೋಗಿ ಪರಿಶಿಷ್ಟರಿಗೆ ಸಿಗಬೇಕಾದ ಸೌಲಭ್ಯ ಲಪಟಾಯಿಸಿ ಸ್ವಂತಕ್ಕೆ ಟ್ಯಾಕ್ಸಿ ಬಳಸುವವರು ಯೋಚನೆ ಮಾಡಬೇಕಾಗುತ್ತದೆ.

ಏಕೆಂದರೆ, ಏಕರೂಪದ ಪ್ರವಾಸಿ ಟ್ಯಾಕ್ಸಿಗಳು ರಸ್ತೆಯಲ್ಲಿ ಓಡಾಡು ತ್ತಿದ್ದರೆ ಯಾರು ಬೇಕಾದರೂ ಕೈ ಅಡ್ಡ ಹಾಕಿ, ಪ್ರವಾಸಕ್ಕೆ ನಿಗದಿ ಮಾಡಬಹುದು. ಬರಲಿಲ್ಲ ಎಂದರೆ ಪ್ರವಾಸೋದ್ಯಮ ಇಲಾಖೆಗೆ ದೂರನ್ನೂ ಕೊಡಬಹುದು.

ಸಹಾಯಧನ ಯೋಜನೆ ಎಂದರೆ ಏನು?
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆ ನೆರವು ನೀಡಲಿದೆ. 2014-15ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ 545 ಹಾಗೂ ಪರಿಶಿಷ್ಟ ಪಂಗಡದ 227 ಅಭ್ಯರ್ಥಿಗಳಿಗೆ ನೆರವು ನೀಡಲು ಉದ್ದೇಶಿಸಲಾಗಿದೆ.

ಒಟ್ಟು ಮೊತ್ತ ರೂ.15.44 ಕೋಟಿ. ಒಂದು ವಾಹನಕ್ಕೆ ತಗಲುವ ಒಟ್ಟು ಮೊತ್ತದಲ್ಲಿ ರೂ.2 ಲಕ್ಷ ಸಹಾಯಧನ ನೀಡಲಾಗುವುದು. ಶೇ.5 ರಷ್ಟು ಮೊತ್ತವನ್ನು ಮಾತ್ರ ಅಭ್ಯರ್ಥಿ ಭರಿಸಬೇಕಾಗುತ್ತದೆ. ಉಳಿದ ಮೊತ್ತಕ್ಕೆ ಸುಲಭ ಬ್ಯಾಂಕ್ ಸಾಲ ಸಿಗುತ್ತದೆ. ರಾದ್ಯದ 30 ಜಿಲ್ಲೆಗಳಿಗೂ ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ. ಫಲಾನುಭವಿಗಳ ಆಯ್ಕೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮಾಡಬೇಕು. ಅತ್ಯಂತ ಕಡಿಮೆ ವರಮಾನ ಹೊಂದಿದರವರಿಗೆ ಮೊದಲ ಆದ್ಯತೆ ನೀಡಬೇಕು.

ಪರಿಶಿಷ್ಟರು ಮಾತ್ರವೇ ಅರ್ಜಿ ಸಲ್ಲಿಸಬಹುದೇ?
ಇಲ್ಲ. ಯಾವುದೇ ವರ್ಗದ ನಿರುದ್ಯೋಗಿ, ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಆಯ್ಕೆ ನಂತರ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು'ಕಾಯ್ದಿರಿಸಿದ ಪಟ್ಟಿ' ಎಂದು ಪ್ರಕಟಿಸ ಬೇಕು.

-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com