ವರ್ಷದಲ್ಲಿ 12,610 ಬಿಡಿಎ ನಿವೇಶನ ಹಂಚಿಕೆ: ಸಿಎಂ ಸಿದ್ದು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇನ್ನೊಂದು ವರ್ಷದಲ್ಲಿ 12,610 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದಿ ಐಡಿಯಲ್ ಹೋಮ್ಸ್ ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ದಿ ಐಡಿಯಲ್ ಹೋಮ್ಸ್ ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

24 ಯೋಜನೆಗಳಲ್ಲಿ 5ರ ಕಾರ್ಯ ಪೂರ್ಣ
ಬೆಂಗಳೂರು:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇನ್ನೊಂದು ವರ್ಷದಲ್ಲಿ 12,610 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಾಧಿಕಾರ ಕೆಲ ವರ್ಷಗಳಿಂದ ನಿವೇಶನ ಹಂಚಿಲ್ಲ. ಇದರಿಂದ ಬೆಂಗಳೂರಿನಲ್ಲಿ ಸಾಕಷ್ಟು ಬಡವರು ವಸತಿ ರಹಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಇನ್ನೊಂದು ವರ್ಷದಲ್ಲಿ ನಿವೇಶನಗಳನ್ನು ಜ್ಯೇಷ್ಠತೆ ಆಧಾರದ ಮೇಲೆ ಹಂಚಲು ನಿರ್ಧರಿಸಲಾಗಿದೆ ಎಂದು ದಿ ಐಡಿಯಲ್ ಹೋಮ್ಸ್ ಕೋ-ಆಪರೇಟಿವ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್ ಸುವರ್ಣ ಮಹೋತ್ಸವ ಕಟ್ಟಡ ಉದ್ಘಾಟಿಸಿ ಅವರು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2010-11ರಲ್ಲಿ ಸಚಿವ ಸಂಪುಟ ನಿರ್ಣಯದಂತೆ 30 ಸಾವಿರ ನಿವೇಶನ ಹಂಚಲು ನಿರ್ಧರಿಸಲಾಗಿತ್ತು. ಆದರೆ ಒಬ್ಬರಿಗೂ ನಿವೇಶನ ಹಂಚಲಿಲ್ಲ. ಲಕ್ಷಾಂತರ ಅರ್ಜಿಗಳು ಬಿಡಿಎಯಲ್ಲಿ ಬಂದು ಬಿದ್ದಿವೆ. ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿವೇಶನ ಹಂಚಲು ಬದ್ಧರಾಗಿದ್ದೇವೆ. ಇದಕ್ಕಾಗಿ 24 ಯೋಜನೆಗಳನ್ನು ಗುರುತಿಸಿದ್ದು, ಈಗಾಗಲೇ 5 ಯೋಜನೆಗಳ ಕಾರ್ಯ ಮುಗಿದಿದೆ ಎಂದು ಅವರು ಹೇಳಿದರು.

1980ರ ನಂತರ ಬೆಂಗಳೂರು ನಗರವು ಯತ್ವಾತದ್ವಾ ಬೆಳೆದಿದೆ. ಯಾವುದೇ ದೂರದೃಷ್ಟಿ ಯೋಜನೆಗಳಿಲ್ಲದೇ ನಗರವನ್ನು ಬೆಳೆಯಲು ಬಿಡಲಾಗಿದೆ. ಪರಿಣಾಮವಾಗಿ ಕಸ, ನೀರು, ಹಾಗೂ ರಸ್ತೆ ಸಮಸ್ಯೆಗಳು ಅತಿಯಾಗಿವೆ. ಇದನ್ನು ಸುಧಾರಿಸಲು ದೊಡ್ಡ ಸಾಹಸವೇ ಮಾಡಬೇಕಿದೆ. ಇದರ ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ದುರ್ಬಲ ವರ್ಗದವರು, ಬಡವರು ಹಾಗೂ ಮಧ್ಯಮ ವರ್ಗದ ಜನ ನಿವೇಶನಗಳಿಲ್ಲದೇ ಕಷ್ಟಪಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ನಿವೇಶನ ಹಂಚಿಕೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯೋಜನೆ ಆರಂಭಿಸಿದ್ದರೆ, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ನಿರ್ಮಾಣ ಸಂಘಗಳು ವಸತಿ ನಿವೇಶನ ಹಂಚಿಕೆ ಮಾಡುತ್ತಿವೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಸಂಘಗಳು ಮಾಡಿವೆ ಎಂದು ಸಿದ್ದರಾಮಯ್ಯ ಪ್ರಶಂಸಿಸಿದರು.

ಜಮೀನು ನೇರ ಖರೀದಿಗೆ ಅವಕಾಶ
ಕೃಷಿ ಭೂಮಿಯನ್ನು ನೇರವಾಗಿ ಖರೀದಿಸುವ ಅವಕಾಶವನ್ನು ಗೃಹ ನಿರ್ಮಾಣ ಸಂಘಗಳಿಗೆ ನೀಡಲಾಗಿಲ್ಲ. ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಂಘಗಳು ಮನವಿ ಮಾಡುತ್ತಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ನೇರ ಖರೀಗೆ ಅನುಮತಿ ನೀಡುತ್ತೇವೆ. ಸಹಕಾರ ಸಂಘ ಹಾಗೂ ರೈತರು ಅಥವಾ ಭೂ ಮಾಲೀಕರ ಮಧ್ಯೆ ಸರ್ಕಾರ ಪ್ರವೇಶಿಸುವುದಿಲ್ಲ ಎಂದು ಸಹಕಾರ ಸಚಿವ ಎಚ್‌ಎಸ್ ಮಹದೇವ ಪ್ರಸಾದ್ ತಿಳಿಸಿದರು.

ಕೆಲ ಗೃಹ ನಿರ್ಮಾಣ ಸಂಘಗಳ ಬಗ್ಗೆ ಆರೋಪಗಳು ಇವೆ. ಆದರೆ ಎಲ್ಲ ಗೃಹ ನಿರ್ಮಾಣ ಸಂಘಗಳು ಮೋಸ ಮಾಡುತ್ತಿಲ್ಲ. ಸರ್ಕಾರದ ಕೆಲಸವನ್ನು ಮಾಡುತ್ತಾ ನೆರವಾಗುತ್ತಿವೆ. ಈ ಹಿನ್ನಲೆಯಲ್ಲಿ ಒಂದೇ ಪ್ರಾಧಿಕಾರದ ಮೂಲಕ ಗೃಹ ನಿರ್ಮಾಣ ಸಂಘಗಳ ಹಂಚಿಕೆಯ ಬಗೆಗೂ ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com