11 ಮಾರುಕಟ್ಟೆಗಳು ಖಾಸಗಿ ಸುಪರ್ದಿಗೆ

ಪ್ರತಿಪಕ್ಷ ಕಾಂಗ್ರೆಸ್‌ನ ಪ್ರಬಲ ವಿರೋಧದ ನಡುವೆಯೂ ಬಿಬಿಎಂಪಿ ಆಡಳಿತ, ಮಹಾನಗರದ...
11 ಮಾರುಕಟ್ಟೆಗಳು ಖಾಸಗಿ ಸುಪರ್ದಿಗೆ

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್‌ನ ಪ್ರಬಲ ವಿರೋಧದ ನಡುವೆಯೂ ಬಿಬಿಎಂಪಿ ಆಡಳಿತ, ಮಹಾನಗರದ ಪ್ರಮುಖ 11 ಮಾರುಕಟ್ಟೆಗಳನ್ನು ಖಾಸಗಿಗೆ ವಹಿಸಲು ತೀರ್ಮಾನಿಸಿದೆ.

ಬಿಬಿಎಂಪಿ ಅಧಿಕಾರದ ಅಂತ್ಯಕಾಲದಲ್ಲಿರುವ ಬಿಜೆಪಿ ಮಾರುಕಟ್ಟೆಗಳನ್ನು ಖಾಸಗಿಗೆ ವಹಿಸಲು ನಿರ್ಧರಿಸಿದ್ದು, ಇದಕ್ಕೆ ಕಾಂಗ್ರೆಸ್ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

ನವೀಕರಣ ಮತ್ತು ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣ ಹೆಸರಿನಲ್ಲಿ ಸದ್ಯ ಉತ್ತಮ ಸ್ಥಿತಿಯಲ್ಲಿರುವ ಮಾರುಕಟ್ಟೆಗಳನ್ನೇ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲು ಬಿಬಿಎಂಪಿ ಕೌನ್ಸಿಲ್ ಸಭೆ ಬುಧವಾರ ನಿರ್ಣಯ ಕೈಗೊಂಡಿತು. ಇದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ನಾಯಕ ಮಂಜುನಾಥ ರೆಡ್ಡಿ, ಹಿರಿಯ ಸದಸ್ಯರಾದ ಚಂದ್ರಶೇಖರ್, ಉದಯಶಂಕರ್, ಮಲ್ಲೇಶ್ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

ನಗರದ ಜಾನ್ಸ್‌ನ ಮಾರುಕಟ್ಟೆ, ಆಸ್ಟಿನ್‌ಟೌನ್, ಮಾರುಕಟ್ಟೆ, ರಿಚರ್ಡ್ ಸ್ಕ್ವೇರ್ ಮಾರುಕಟ್ಟೆ, ಮೋರ್ ರಸ್ತೆ ಮಾರುಕಟ್ಟೆ, ಮರ್ಫಿ ಟೌನ್, ಮಾಗಡಿ ರಸ್ತೆ, ಶ್ರೀರಾಮಪುರ ಮಾರುಕಟ್ಟೆಗಳು, ಅಕ್ಕಿಪೇಟೆ, ಎಸ್.ಕೆ.ಆರ್ ಮಟನ್, ಕಬ್ಬನ್‌ಪೇಟೆ, ಚಿಕ್ಕಮಾವಳ್ಳಿ ಮಾರುಕಟ್ಟೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಯಿತು.

ಈ ಬಗ್ಗೆ ಸರ್ಕಾರಕ್ಕೆ ನಿರ್ಣಯ ಕಳುಹಿಸಿ ಅನುಮತಿ ಪಡೆದು ನಂತರ ಟೆಂಡರ್ ಪ್ರಕ್ರಿಯೆ ನಡೆಸಲು ರ್ನಿಧರಿಸಲಾಯಿತು.

ಪ್ಲಾಸ್ಟಿಕ್ ನಿಷೇಧಕ್ಕೆ ನಿರ್ಣಯ: ನಗರದಲ್ಲಿ ಇನ್ನುಮುಂದೆ ಪ್ಲಾಸ್ಟಿಕ್ ಬಳಕೆಯನ್ನೇ ನಿಷೇಧಿಸಬೇಕೆಂಬ ನಿರ್ಣಯಕ್ಕೆ ಸಭೆ ಒಪ್ಪಿಗೆ ನೀಡಿತು. ಹಾಗೆಯೇ ನಗರದ ಪದ್ಮನಾಭನಗರ, ಜಯನಗರ ಹಾಗೂ ದಾಸರಹಳ್ಳಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಬಗ್ಗೆಯೂ ತೀರ್ಮಾನಿಸಲಾಯಿತು.

ಅನೈತಿಕ ನೃತ್ಯ ನಿಷೇಧ

ಮ್ಯೂಸಿಕ್ ಕಾರ್ನಿವಾಲ್ ಹೆಸರಿನಲ್ಲಿ ನಡೆಯುವ ಅನ್ಯ ಚಟುವಟಿಕೆಗಳ ಸಾಮೂಹಿಕ ನೃತ್ಯ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡದಿರಲು ಬಿಬಿಎಂಪಿ ತೀರ್ಮಾನಿಸಿದೆ. ನಗರದಲ್ಲಿ ಸಂಗೀತ ಕಛೇರಿ ಹೆಸರಿನಲ್ಲಿ ಕೆಲವರು ಸಾಮೂಹಿಕ ನೃತ್ಯ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುತ್ತಿದ್ದಾರೆ.

ಈ ಮೂಲಕ ಅನ್ಯಚಟುವಟಿಕೆಗಳಿಗೆ ಅವಕಾಶವಾಗುತ್ತಿದೆ. ಆದ್ದರಿಂದ ಅಂಥ ಕಾರ್ಯಕ್ರಮಗಳಿಗೆ ಇನ್ನುಮುಂದೆ ಯಾವುದೇ ರೀತಿಯ ಒಪ್ಪಿಗೆ ನೀಡುವುದಿಲ್ಲ ಎಂದು ಮೇಯರ್ ಶಾಂತಕುಮಾರಿ ಹೇಳಿದರು.

ಆಡಳಿತ ಪಕ್ಷದ ನಾಯಕ ಎನ್.ಆರ್ ರಮೇಶ್ ಈ ಬಗ್ಗೆ ಪ್ರಸ್ತಾಪಿಸಿ, ಯಲಹಂಕ, ರಾಜರಾಜೇಶ್ವರಿನಗರ ಸೇರಿದಂತೆ ಅನೇಕ ಕಡೆ ಸಾಮೂಹಿಕ ನೃತ್ಯ, ಸಂಗೀತ ಕಾರ್ಯಕ್ರಮ ಹೆಸರಿನಲ್ಲಿ ಪೊಲೀಸರಿಂದ ಅನುಮತಿ ಪಡೆಯಲಾಗುತ್ತಿದೆ. ಇದಕ್ಕೆ ಬಿಬಎಂಪಿ ನಿರಾಕ್ಷೇಪಣ ಪತ್ರ ನೀಡುತ್ತ ಬಂದಿದೆ.

ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದ ಆಯೋಜಕರು ಯುವಕರಿಂದ ರು.2,000ದಿಂದ 25,000 ವರೆಗೂ ಸಂಗ್ರಹಿಸಿ ಗಾಂಜಾ, ಅಫೀಮು, ಚರಸ್ ಬ್ರೌನ್ ಶುಗರ್‌ಗಳಂತಹ ಮಾದಕ ವಸ್ತುಗಳನ್ನು ನೀಡುತ್ತಿದ್ದಾರೆ. ಅಲ್ಲಿ ಎಲ್ಲರೂ ಮಾಧಕ ನೃತ್ಯ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸಿದರು. ಹಾಗೆಯೇ ಇಂಥ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದೂ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ಸಭೆ ಇನ್ನುಮುಂದೆ ಅನೈತಿಕ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ನಿರ್ಣಯ ಕೈಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com