ಸರ್ಕಾರದ ವಿರುದ್ಧ ಭುಗಿಲೆದ್ದ ಗೊರೂರು ಗ್ರಾಮಸ್ಥರ ಆಕ್ರೋಶ

ಮಾಗಡಿ ತಾಲ್ಲೂಕಿನ ಗೊರೂರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡದಂತೆ ಸ್ಥಳೀಯರು ನಡೆಸಿದ ಪ್ರತಿಭಟನೆ..
ಗೊರೂರು ಗ್ರಾಮಸ್ಥರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ
ಗೊರೂರು ಗ್ರಾಮಸ್ಥರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ

ಗೊರೂರು: ಮಾಗಡಿ ತಾಲ್ಲೂಕಿನ ಗೊರೂರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡದಂತೆ ಸ್ಥಳೀಯರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಪ್ರತಿಭಟನಾ ನಿರತ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಬೆಂಗಳೂರು ಹೊರವಲಯದ ಮಂಡೂರಿನಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಹೊಸ ಜಾಗಕ್ಕೆ ರಾಜ್ಯ ಸರ್ಕಾರ ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಶಿಫಾರಸ್ಸಿನ ಮೇರೆಗೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗೊರೂರು ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಗೊರೂರು ಗ್ರಾಮದಲ್ಲಿ ಇಂದು ಅಧಿಕಾರಿಗಳು ಸರ್ವೇಗಾಗಿ ಆಗಮಿಸಿ, ಗ್ರಾಮದ 32 ಎಕರೆ ಜಾಗದಲ್ಲಿ ಸರ್ವೇ ನಡೆಸುತ್ತಿದ್ದರು.

ವಿಚಾರ ತಿಳಿದ ಗ್ರಾಮಸ್ಥರು ಕೂಡಲೇ ಸರ್ವೇ ಜಾಗಕ್ಕೆ ತೆರಳಿ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕೆಲ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದರಾದರೂ, ಈ ವೇಳೆ ಗ್ರಾಮಸ್ಥರು ಕಸ ವಿಲೇವಾರಿ ಘಟಕ ಸ್ಥಾಪಿಸದಂತೆ ನಡೆಸಿದ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಮೂವರು ಗ್ರಾಮಸ್ಥರು ಸೇರಿದಂತೆ ಹಲವರು ಗಾಯಗೊಂಡರು.

ಪೊಲೀಸರ ಕ್ರಮದಿಂದ ಮತ್ತಷ್ಟು ಕ್ರೋಧಗೊಂಡ ಗ್ರಾಮಸ್ಥರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಕೆಲ ಪೊಲೀಸರಿಗೂ ಗಾಯಗಳಾಗಿದ್ದು, ಕಲ್ಲು ತೂರಾಟದಿಂದಾಗಿ ಆಂಬುಲೆನ್ಸ್ ಜಖಂಗೊಂಡಿದೆ.

ಸೋಲೂರು ಹೈವೇ ಬಂದ್ ಮಾಡಲು ಗ್ರಾಮಸ್ಥರ ನಿರ್ಧಾರ
ಇದೇ ವೇಳೆ ಪ್ರತಿಭಟನೆ ಬಳಿಕ ಗೊರೂರಿನಲ್ಲಿ ಸಭೆ ಸೇರಿದ ಗ್ರಾಮಸ್ಥರು ನಾಳೆ ಸೋಲೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಕೇವಲ ಗೊರೂರು ಗ್ರಾಮಸ್ಥರು ಮಾತ್ರರಲ್ಲದೇ ಸುತ್ತಮುತ್ತಲಿನ ಸೋಲೂರು, ಕುದೂರು ಮತ್ತು ವೀರಾಪುರ ಗ್ರಾಮಸ್ಥರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಘಟಕದಿಂದ ಗ್ರಾಮಸ್ಥರಿಗೆ ಯಾವುದೇ ಅಪಾಯವಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಗೊರೂರಿನಲ್ಲಿ ತ್ಯಾಜ್ಯವಿಲೇವಾರಿ ಘಟಕ ಸ್ಥಾಪಿಸುವ ಕುರಿತು ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿರುವ ರಾಮನಗರ ಜಿಲ್ಲಾಧಿಕಾರಿ ಜಮಾದರ್ ಅವರು, ತ್ಯಾಜ್ಯವಿಲೇವಾರಿ ಘಟಕದಿಂದ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮಂಡೂರಿನ ಪರಿಸ್ಥಿತಿಯನ್ನು ನೋಡಿ ಗ್ರಾಮಸ್ಥರು ಆತಂಕಗೊಳ್ಳುತ್ತಿದ್ದಾರೆ. ಆದರೆ ಮಂಡೂರಿನ ಪರಿಸ್ಥಿತಿಯೇ ಬೇರೆ, ಗೊರೂರಿನ ಪರಿಸ್ಥಿತಿಯೇ ಬೇರೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಧಾಪಿಸಲಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com