ಎಟಿಎಂ ವಾಹನಕ್ಕೆ ಜಿಪಿಎಸ್ಸೇ ಇರಲಿಲ್ಲ!

ಎಟಿಎಂ ಘಟಕಕ್ಕೆ ತುಂಬಬೇಕಿದ್ದ ರು.66 ಲಕ್ಷ ಹಣ, ಬಂದೂಕು ಸಮೇತ ಚಾಲಕ ಜೇಮ್ಸ್ ಅಪಹರಿಸಿರುವ ಟಾಟಾ ಸುಮೋಗೆ `ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್' (ಜಿಪಿಎಸ್) ಅಳವಡಿಸಿಯೇ ಇರಲಿಲ್ಲ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಟಿಎಂ ಘಟಕಕ್ಕೆ ತುಂಬಬೇಕಿದ್ದ ರು.66 ಲಕ್ಷ ಹಣ, ಬಂದೂಕು ಸಮೇತ ಚಾಲಕ ಜೇಮ್ಸ್ ಅಪಹರಿಸಿರುವ ಟಾಟಾ ಸುಮೋಗೆ `ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್' (ಜಿಪಿಎಸ್) ಅಳವಡಿಸಿಯೇ ಇರಲಿಲ್ಲ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.

ಚಾಲಕನೊಬ್ಬ ಹಣದ ಸಮೇತ ವಾಹನದೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕ ಸಂಬಂಧಿಸಿದಂತೆ ತನಿಖೆ ಕೈಗೊಂಡ ವೇಳೆ ಇದು ಗೊತ್ತಾಗಿದೆ. ಪೊಲೀಸರು ವಾಹನದ ಜಿಪಿಎಸ್ ಆಧಾರ ಮೇಲೆ ಹುಡುಕಲು ಮುಂದಾದಾಗ ನಿರಾಶೆ ಕಾದಿತ್ತು. ಏಕೆಂದರೆ, ವಾಹನಕ್ಕೆ ಜಿಪಿಎಸ್ ಅಳವಡಿಸಿಯೇ ಇರಲಿಲ್ಲ.

ನಿಯಮಗಳ ಪ್ರಕಾರ ಬ್ಯಾಂಕ್‍ಗೆ ಹಣ ಸಾಗಿಸುವ, ಎಟಿಎಂಗೆ ಹಣ ತುಂಬುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು. ಅಲ್ಲದೇ, ಆ ವಾಹನಗಳಿಗೆ ಗಾಜುಗಳಿಗೆ ಕಡ್ಡಾಯವಾಗಿ ಕಬ್ಬಿಣದ ತಂತಿ ಅಳವಡಿಸಿರಬೇಕು. ಆದರೆ, ಈ ವಾಹನಕ್ಕೆ ಬಾಗಿಲುಗಳಿಗೆ ಮಾತ್ರ ಕಬ್ಬಿಣದ ತಂತಿ ಅಳವಡಿಸ ಲಾಗಿತ್ತು ಎಂದು ಪಶ್ಚಿಮ ವಿಭಾಗ ಡಿಸಿಪಿ ಲಾಬೂ ರಾಮ್ ತಿಳಿಸಿದರು.

ಜಿಪಿಎಸ್ ಇದ್ದರೆ ಸುಲಭವಾಗಿರುತ್ತಿತ್ತು: ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳು, ಕ್ಯಾಬ್‍ಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವ ನಿಯಮವಿದೆ. ಕೆಲ ತಿಂಗಳುಗಳ ಹಿಂದೆ ಆರ್ ನಗರದಲ್ಲಿ ಹಣ ಸಾಗಿಸುವ ವಾಹನವನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಘಟನೆ ಬಳಿಕ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸಬೇಕು ಎನ್ನುವ ನಿಯಮವನ್ನು ಅಂದಿನ ಆಯುಕ್ತರು ತಂದಿದ್ದರು.

ರು.10 ಸಾವಿಕ್ಕಿಂತ ಕಡಿಮೆ ವೆಚ್ಚದಲ್ಲಿ ಉನ್ನತ ಗುಣಮಟ್ಟದ ಜಿಪಿಎಸ್ ಸಾಧನಗಳು ದೊರಕುತ್ತವೆ. ಅವುಗಳನ್ನು ಅಳವಡಿಸಿದರೆ ವಾಹನ ಯಾವ ರಸ್ತೆಯಲ್ಲಿ ಸಂಚರಿಸುತ್ತದೆ? ಎಷ್ಟು ಹೊತ್ತು ಯಾವ ಜಾಗದಲ್ಲಿ ನಿಂತಿತ್ತು? ಹೀಗೆ, ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಬಹುದು ಹಾಗೂ ಸಂಗ್ರಹಿಸಿಡಬಹುದು. ಆದರೆ, ಕೋಟಿಗಟ್ಟಲೆ ಹಣ ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಸದೇ ಇರುವುದು ಆಶ್ಚರ್ಯ ಮೂಡಿಸಿದೆ. ಗನ್ ಇರುವುದೇ ಹಣದ ರಕ್ಷಣೆಗಾಗಿ. ಆದರೆ, ವಾಹನದಲ್ಲಿ ಚಾಲಕ ಬಿಟ್ಟು ಬೇರೆ ಯಾರು ಇಲ್ಲದ ಸಂದರ್ಭದಲ್ಲಿ ಗನ್ ಇಟ್ಟು ಗನ್ ಮ್ಯಾನ್ ಕೂಡಾ ಕರ್ತವ್ಯ ಲೋಪ ತೋರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್‍ನಿಂದಲೂ ಲೋಪ: ಹಣ ಸಾಗಿಸಲು ಗುತ್ತಿಗೆ ನೀಡುವ ಬ್ಯಾಂಕ್ ಗಳು ತಮ್ಮ ಹಣ ಯಾವ ವಾಹನದಲ್ಲಿ ಸಾಗಣೆಯಾಗುತ್ತಿದೆ ಹಾಗೂ ಎಷ್ಟು ಸುರಕ್ಷಿತ ಎನ್ನುವುದನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಅಲ್ಲದೇ, ಹಣ ಸಾಗಿಸುವ ವಾಹನಗಳ ಸ್ಥಿತಿ ಗತಿ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಆದರೆ, ಬ್ಯಾಂಕ್‍ಗಳು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವುದು ತಿಳಿದು ಬಂದಿದೆ. ಪ್ರಕರಣದಲ್ಲಿ ಆರೋಪ ಬಂಧನಕ್ಕೆ 5 ತಂಡಗಳನ್ನು ರಚಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಲಾಬೂರಾಮ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com