ಧರ್ಮಕ್ಕಾಗಿ ಹೋರಾಡುವವರು ಧರ್ಮಾಚರಣೆಗೆ ಸಿದ್ಧರಿಲ್ಲ: ಡಾ.ವಿರೇಂದ್ರ ಹೆಗ್ಗಡೆ

ಜನರು ಧರ್ಮಕ್ಕಾಗಿ ಹೋರಾಡಲು ಸಿದ್ಧರಾಗುವರು, ಆದರೆ ಧರ್ಮಾಚರಣೆಗೆ ಮುಂದಾಗುವುದಿಲ್ಲ ಎಂದು ಧರ್ಮಸ್ಥಳದ ಧಮ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ವಿಷಾದಿಸಿದರು...
ಧರ್ಮಸ್ಥಳದ ಧಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ

ಬೆಂಗಳೂರು: ಜನರು ಧರ್ಮಕ್ಕಾಗಿ ಹೋರಾಡಲು ಸಿದ್ಧರಾಗುವರು, ಆದರೆ ಧರ್ಮಾಚರಣೆಗೆ ಮುಂದಾಗುವುದಿಲ್ಲ ಎಂದು ಧರ್ಮಸ್ಥಳದ ಧಮ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ವಿಷಾದಿಸಿದರು.

ಗುರುವಾರ ಕರ್ನಾಟಕ ಜೈನ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಜೈನ ಸಮಾಜದ ವತಿಯಿಂದ ಏರ್ಪಡಿಸಿದ್ದ ಶ್ರೀ ಮಹಾವೀರರ 2614ನೇ ಜಯಂತಿಯಲ್ಲಿ ಮಾತನಾಡಿ, ಅಹಿಂಸೆ ಪ್ರತಿಪಾದಿಸಿದ ರಾಷ್ಟ್ರದಲ್ಲಿ ಇಂದು ಹಿಂಸೆಯ ಸುಳಿ ಕಂಡು ಬರುತ್ತಿದೆ. ಧರ್ಮಕ್ಕೆ ಸಂಬಂಧಿಸಿದ ಲಾಂಛನ, ಜಾತಿ ಧರ್ಮಕ್ಕೆ ಸಂಬಂಧಿಸಿದ ವಾಚಕಗಳನ್ನು ಸೇರಿಸುತ್ತೇವೆ. ಆದರೆ, ಧರ್ಮದ ಮೇಲಿನ ನಂಬಿಕೆ, ಅರಿವು, ಆಚರಣೆಯಿಲ್ಲದಿದ್ದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಧರ್ಮವನ್ನು ಆರಾಧಿಸುವುದಕ್ಕಿಂತಲೂ, ನಿತ್ಯ ಜೀವನದಲ್ಲಿ ಆಚರಿಸುವುದು ಬಹುಮುಖ್ಯ ಎಂದು ವಿಶ್ಲೇಷಿಸಿದರು.

ಜೈನಧರ್ಮ- ಆತ್ಮಧರ್ಮವನ್ನು ಬೋಧಿಸುತ್ತದೆ. ಅದನ್ನು ಅನುಸರಿಸಿದರೆ, ಸಮರಸದ ಸಹಜೀವನ ಸಾಧ್ಯವಾಗುತ್ತದೆ. ಜೈನಧರ್ಮದ ಈ ಪರಂಪರೆಯೇ ಧರ್ಮಸ್ಥಳದಲ್ಲಿ ಧರ್ಮಕಾರ್ಯದಲ್ಲಿ ವಿದ್ಯುಕ್ತನಾಗಲು ಪ್ರೇರೇಪಿಸಿದೆ ಹಾಗೂ ಸಹಬಾಳ್ವೆ ಕಲಿಸಿದೆ ಎಂದರು. ಪ್ರಾಣಿಗಳ ಬಲಿ ತಡೆಯುವ ನಿಟ್ಟಿನಲ್ಲಿ ಸಾತ್ವಿಕಾರಾಧನೆ ಹೆಚ್ಚುವ ಅಗತ್ಯವಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಯುವಜನ ಮತ್ತು ಕ್ರೀಡಾ ಸಚಿವ ಸಚಿವ ಅಭಯಚಂದ್ರಜೈನ್ ಮಾತನಾಡಿ, ದೇಶದ ಉದ್ದಗಲಕ್ಕೂ ಜೈನರು ಹರಡಿದ್ದು, ಅವರು ಯಾರಿಗೂ ತೊಂದರೆ ನೀಡದ ಸ್ವಾಭಿಮಾನಿಗಳು. ಡಾ.ಡಿ. ವೀರೇಂದ್ರ ಹೆಗ್ಗಡೆ ಜೈನರಾಗಿದ್ದೂ, ಹಿಂದೂಧರ್ಮದ ಪೋಷಣೆ ಮಾಡುವ ಮೂಲಕ ಧಾರ್ಮಿಕ ಸಮನ್ವಯತೆ ಸಾರಿದ್ದಾರೆ. ಜೈನರು ಜೈನ ಚೈತಾಲಯಗಳ ಅಭಿವೃದ್ದಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ, ಅಸಹಾಯಕರ ಪರ ನಿಲ್ಲಬೇಕೆಂದು ಮನವಿ ಮಾಡಿದರು.

ಅಹಿಂಸೆ ಅಗತ್ಯ ಇಂದು ಹೆಚ್ಚಿದೆ: ಲೋಕಾಯುಕ್ತ ನ್ಯಾ. ವೈ.ಎಸ್. ಭಾಸ್ಕರ್‍ರಾವ್ ಮಾತನಾಡಿ, ಮಹಾವೀರರು ಬೋಧಿಸಿದ ಅಹಿಂಸೆ, ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ. ಕುಟುಂಬಗಳಲ್ಲಿ ಅಹಿಂಸೆ ಆಚರಿಸಿ ಕಾರಣ, ಹಿಂಸೆ ಕ್ರೌರ್ಯ ಹೆಚ್ಚಿದೆ. ಶಾಲಾಕಾಲೇಜುಗಳಲ್ಲಿ ಅಹಿಂಸಾಧರ್ಮವನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಬೇಕು ಎಂದು ತಿಳಿಸಿದರು.

2015ನೇ ಸಾಲಿನ `ಮಹಾವೀರ ಪುರಸ್ಕಾರ'ವನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಎನ್. ವೆಂಕಟಾಚಲ ಅವರಿಗೆ ನೀಡಲಾಯಿತು. ಈ ಪುಸ್ಕಾರದ ಮೊತ್ತ ರು.1 ಲಕ್ಷವನ್ನು ನ್ಯಾಯಮೂರ್ತಿಗಳು ಜೈನ ಸಮುದಾಯದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನೀಡಿದರು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಕೃತಕ ಕಾಲನ್ನು ವಿತರಿಸಲಾಯಿತು. ಕನಕಗಿರಿ ಜೈನಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕರ್ನಾಟಕ ಜೈನ ಸಂಘಟನೆಯ ಅಧ್ಯಕ್ಷ ಎಸ್. ಜಿತೇಂದ್ರಜೈನ್, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com