
ಹಾವೇರಿ: ಕಾರ್ಗಿಲ್ ಕ್ಯಾಂಪ್ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ತಾಲೂಕಿನ ಅಗಡಿ ಗ್ರಾಮದ ಯೋಧ ಮೆಹಬೂಬಸಾಬ್ ತೊಂಡೂರ (29) ಅಂತ್ಯಕ್ರಿಯೆ ಶುಕ್ರವಾರ ಅಗಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಳಗ್ಗೆ 6ಕ್ಕೆ ಯೋಧನ ಪಾರ್ಥಿವ ಶರೀರ ಹಾವೇರಿಗೆ ಆಗಮಿಸಿತು. ಇಲ್ಲಿಯ ಸಿದ್ದಪ್ಪ ವೃತ್ತದಿಂದ ಹುಕ್ಕೇರಿ ಮಠದವರೆಗೆ ಮಾಜಿ ಸೈನಿಕರು, ಸಾರ್ವಜನಿಕರು ಪಾರ್ಥಿವ ಶರೀರದ ಮೆರವಣಿಗೆ ಮಾಡಿ, ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ಮಂಜುನಾಥ ನಾಯಕ ಹೂಮಾಲೆ ಅರ್ಪಿಸಿ, ಗೌರವ ಸಲ್ಲಿಸಿದರು. ಬೆಳಗ್ಗೆ 8ಕ್ಕೆ ಅಗಡಿ ಗ್ರಾಮದ ಯೋಧನ ನಿವಾಸಕ್ಕೆ ಪಾರ್ಥಿವ ಶರೀರ ತಂದು, ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಸೇರಿದ್ದ ಸಾವಿರಾರು ಜನರು ಯೋಧನ ಗುಣಗಾನ ಮಾಡಿ, `ಮೆಹಬೂಬಸಾಬ್ ಅಮರ ರಹೇ' ಎಂಬ ಘೋಷಣೆ ಕೂಗಿದರು. ಗ್ರಾಪಂ ಕಚೇರಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ, ನಿಜಲಿಂಗಪ್ಪ ಬಸೇಗಣ್ಣಿ ಹಾಜರಿದ್ದರು.
ಅಗಡಿ ಗ್ರಾಮದಲ್ಲಿ ಮೆಹಬೂಬಸಾಬ್‍ನ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿದರು. ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ವಿಧಿ ವಿಧಾನಗಳಂತೆ ನಡೆದ ಅಂತ್ಯಕ್ರಿಯೆ ವೇಳೆ, ಬೆಳಗಾವಿಯಿಂದ ಆಗಮಿಸಿದ ಭೂಸೇನಾ ಪಡೆ ಹಾಗೂ ಸ್ಥಳೀಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು.
Advertisement