
ಬೆಂಗಳೂರು: ಕಾಡುಗೋಡಿ ಪ್ರಗತಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಶೂಟೌಟ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಆರೋಪಿ ಮಹೇಶ್‍ನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.
ದಾರಿಹೋಕರಿಂದ ಖರೀದಿಸಿದ ಎನ್ನುವ ಆರೋಪಿಯ ಹೇಳಿಕೆ ವಿಚಿತ್ರವಾಗಿರುವುದರಿಂದ ಆ ವಾದವನ್ನು ಪೊಲೀಸರು ತಳ್ಳಿ ಹಾಕಿದ್ದು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಒಂದು ತಂಡ ಆಗುಂಬೆಗೆ ತೆರಳಿ ಪಿಸ್ತೂಲ್ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಇತ್ತ ನಗರದಲ್ಲಿ ವಿಚಾರಣೆಗಾಗಿ ಮಹೇಶ್‍ನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆತ ವಾಸವಾಗಿದ್ದ ಕಾಲೇಜು ಕೊಠಡಿ, ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ಹೋಗಿ ಕೃತ್ಯ ನಡೆದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿಯೂ ಆತನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಮಹೇಶ್ ಸಹೋದರಿ ಶೈಲಜಾ ಅವರನ್ನು ಪ್ರಗತಿ ಕಾಲೇಜಿಗೆ ಕರೆಸಿಕೊಂಡು ಮಹೇಶ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಶುಕ್ರವಾರವೂ ಕಾಲೇಜಿಗೆ ಭೇಟಿ ನೀಡಿದ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್, ಆರೋಪಿ ವಿಚಾರಣೆ ನಡೆಯುತ್ತಿದೆ. ಸಂಪೂರ್ಣ ಮಾಹಿತಿ ಕಲೆ ಹಾಕಲು ಇನ್ನು ನಾಲ್ಕು ದಿನಗಳು ಬೇಕಾಗಬಹುದು. ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಹಾಗೂ ಮಹೇಶನಿಗೆ ಪರಿಚಿತರು ಹಾಗೂ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದುವರೆಗಿನ ಮಾಹಿತಿಯಲ್ಲಿ ಆರೋಪಿ ಪಿಸ್ತೂಲ್ ಪಡೆದುಕೊಂಡಿರುವ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಹೇಳಿದರು.
ಉಮಾಶ್ರೀ ಭೇಟಿ
ಗುಂಡೇಟಿನಿಂದ ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಸಿರಿಷಾಳ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದು ಸಚಿವೆ ಉಮಾಶ್ರೀ ಹೇಳಿದರು. ಶುಕ್ರವಾರ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಉಮಾಶ್ರೀ, ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಸಂಬಂಧ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಜತೆ ಚರ್ಚಿಸಲಾಗುವುದು ಎಂದರು.
ಸಿಎಂಗೆ ಮನವಿ
ಮಗಳ ಸಾವಿಗೆ ಕಾರಣನಾದ ಆರೋಪಿ ಮಹೇಶನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೊಲೆಯಾದ ವಿದ್ಯಾರ್ಥಿನಿ ಗೌತಮಿ ಪಾಲಕರು ಮುಖ್ಯಮಂತ್ರಿ ಸಿದ್ದರಾಮಯಗೆ ಮನವಿ ಮಾಡಿದರು. ಶುಕ್ರವಾರ ಸಿಎಂ ನಿವಾಸಕ್ಕೆ ತೆರಳಿದ್ದ ಗೌತಮಿ ತಂದೆ ರಮೇಶ್ ಹಾಗೂ ತಾಯಿ ಲಕ್ಷ್ಮಿ, `ಮಗಳನ್ನು ಕಳೆದುಕೊಂಡಿರುವ ನಮಗೆ ನ್ಯಾಯ ಸಿಗಬೇಕು. ಗೌತಮಿಯನ್ನು ಕೊಂದ ಆರೋಪಿಗೆ ಶಿಕ್ಷೆಯಾಗಬೇಕು' ಎಂದು ಮನವಿ ಸಲ್ಲಿಸಿದರು. ನಂತರ ಸಿದ್ದರಾಮಯ್ಯ, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಆತನಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದು ಸಾಂತ್ವನ ಹೇಳಿದರು.
ಕಾಡುಗೋಡಿಯ ಪ್ರಗತಿ ದಿ ಸ್ಕೂಲ್ ಅಂಡ್ ಕಾಲೇಜಿನ ಹಾಸ್ಟೆಲ್‍ನಲ್ಲಿ ಮಾ.31 ರಂದು ರಾತ್ರಿ ವಿದ್ಯಾರ್ಥಿನಿಯರ ಮೇಲೆ ಅಟೆಂಡರ್ ಮಹೇಶ್ ಗುಂಡು ಹಾರಿಸಿದ್ದ. ಈ ಘಟನೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಮೃತಪಟ್ಟು, ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿನಿ ಸಿರಿಷಾ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಿರಿಷಾಳ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡಿದೆ. ಆಕೆಯನ್ನು ಶುಕ್ರವಾರ ವಾರ್ಡ್‍ಗೆ ವರ್ಗಾಯಿಸಲಾಗಿದೆ. ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಸರ್ಕರವೇ ಭರಿಸುತ್ತದೆ.
- ಉಮಾಶ್ರೀ, ಸಚಿವೆ
Advertisement