ಕಬ್ಬನ್ ಪಾರ್ಕ್‍ನಲ್ಲಿ ಸಚಿವ ಜಾವ್ಡೇಕರ್ ಜಾಗಿಂಗ್
ಕಬ್ಬನ್ ಪಾರ್ಕ್‍ನಲ್ಲಿ ಸಚಿವ ಜಾವ್ಡೇಕರ್ ಜಾಗಿಂಗ್

ಕಬ್ಬನ್ ಪಾರ್ಕ್‍ನಲ್ಲಿ ಸಚಿವ ಜಾವ್ಡೇಕರ್ ಜಾಗಿಂಗ್

ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಶುಕ್ರವಾರ ಮುಂಜಾನೆ ಕಬ್ಬನ್ ಪಾರ್ಕ್‍ನಲ್ಲಿ ಕೈಗೊಂಡ ವಾಯು ವಿಹಾರ `ಸಂವಾದ' ರೂಪ ಪಡೆದುಕೊಂಡಿತು...

ಬೆಂಗಳೂರು: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಶುಕ್ರವಾರ ಮುಂಜಾನೆ ಕಬ್ಬನ್ ಪಾರ್ಕ್‍ನಲ್ಲಿ ಕೈಗೊಂಡ ವಾಯು ವಿಹಾರ `ಸಂವಾದ' ರೂಪ ಪಡೆದುಕೊಂಡಿತು.

ಸಚಿವರು ಕಬ್ಬನ್ ಪಾರ್ಕ್‍ಗೆ ಆಗಮಿಸುತ್ತಾರೆಂದು ಸುದ್ದಿ ತಿಳಿಯುತ್ತಿದ್ದಂತೆ ನಿತ್ಯ ವಾಯುವಿಹಾರಕ್ಕೆ ಬರುವವರ ಕಿವಿ ನೆಟ್ಟಗಾಗಿತ್ತು. ಪಾರ್ಕಿನಲ್ಲಿ ನಗೆಯಾಡುವವರು, ಓಡುವವರು, ಜೋರಾಗಿ ಉಸಿರುಬಿಡುವವರು, ಪಟ್ಟಂಗ ಹೊಡೆಯುವವರು, ಮತ್ತನೇಕರು ಅಲ್ಲಿ ಸೇರಿಕೊಂಡರು.

ಈ ವೇಳೆ  ಒಂದು ಚಿಕ್ಕ ಸಂವಾದವೂ ಆಯೋಜನೆಗೊಂಡಿತ್ತು. ಅಂದಹಾಗೆ, ಕೇಂದ್ರ ಸಚಿವರೊಂದಿಗೆ ಸಂವಾದವೆಂದು ಅಲ್ಲಿ ಯಾವುದೇ ಶಿಷ್ಟಾಚಾರವೂ ಇರಲಿಲ್ಲ. ಸಚಿವರಿಗೂ ಮಾತಿನ ಹಬ್ಬು ಬಿಮ್ಮು ಇರಲಿಲ್ಲ. ಆರಂಭದಲ್ಲಿ ನೇರವಾಗಿ ಮಾತಿಗಿಳಿದ ಸಚಿವ ಜಾವ್ಡೇಕರ್, ತಮ್ಮ ಎಂದಿನ ಬಿಡುಬೀಸು ಶೈಲಿಯಲ್ಲಿ, ನಾನು ಯಾವುದೇ ಊರಿನಲ್ಲಿದ್ದರೂ ವಾಯುವಿಹಾರ ಮಾಡುತ್ತೇನೆ. ಜಿಮ್ ಮಾಡುತ್ತೇನೆ. ನಮ್ಮ ನಿತ್ಯ ಜೀವನದಲ್ಲಿ ವಾಯುವಿಹಾರ ಅಗತ್ಯ. ಇದರಿಂದ ಉಲ್ಲಸಿತರಾಗಿರಬಹುದು ಎಂದು ಅಭಿಪ್ರಾಯ ನೀಡಿದರು.ಕಳೆದ ವಾರ ಹೈದ್ರಾಬಾದ್‍ಗೆ ಹೋಗಿದ್ದೆ ಅಲ್ಲೂ ಕೂಡ ವಾಯುವಿಹಾರ ನಡೆಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದೆನೆಂದು ಸಾಮಾನ್ಯ ಮಾತುಗಳನ್ನಾಡಿದರು.

ಸಂವಾದ ಆರಂಭಿಸಿದ್ದು ಸಚಿವರು

ಈ ವೇಳೆ ನಾನೇಕೆ ನಿಮ್ಮ ಬಳಿ ಬಂದಿದ್ದೇನೆಂದು ಗಂಭೀರ ದನಿ ಎತ್ತಿದ ಕೇಂದ್ರ ಸಚಿವರು, ಪರಿಸರದ ಕಾಳಜಿಯನ್ನು ವ್ಯಕ್ತಪಡಿಸಿ `ಇಂದು ನಗರೀಕರಣದಿಂದ ಅನೇಕ ಸಮಸ್ಯೆ ಎದುರಾಗುತ್ತಿದೆ. ಮಹಾನಗರಗಳಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ' ಎಂದು ಹೇಳಿದರು. ಈ ಸಂಗತಿ ಎಷ್ಟು ಜನರಿಗೆ ಅರ್ಥವಾಯಿತೋ ಗೊತ್ತಿಲ್ಲ, ಪರಿಸರ ರಕ್ಷಣೆಗೆ ನಿಮ್ಮ ಸಲಹೆಗಳಿದ್ದರೆ ಕೊಡಿ ಎಂದು ಕೋರಿದಾಗ ಅನೇಕರು ತಮ್ಮ ನಡುವಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು.

ವಿದೇಶಗಳಲ್ಲಿರುವಂತೆ ಪ್ರಮುಖ ಕೆಲವು ರಸ್ತೆಗಳನ್ನು ವಾರಾಂತ್ಯ ರಜೆ, ಸಾರ್ವಜನಿಕ ರಜೆ ದಿನಗಳಲ್ಲಿ ವಾಹನ ಮುಕ್ತಗೊಳಿಸಿ, ಕಬ್ಬನ್ ಪಾರ್ಕಲ್ಲಿ ವಾರಾಂತ್ಯದಲ್ಲಾದರೂ ವಾಹನ ಸಂಚಾರ ನಿರ್ಬಂಧಿಸಿ, ಕಬ್ಬನ್ ಪಾರ್ಕ್‍ಗೆ ಹೊಂದಿಕೊಂಡಿರುವ ಕಟ್ಟಡಗಳಿಂದ ಬರುವ ತ್ಯಾಜ್ಯನೀರು ಸರಿಯಾಗಿ ಸಾಗದೇ ಉಕ್ಕಿ ಹರಿಯುತ್ತಿದೆ ಇದನ್ನು ನಿಲ್ಲಿಸಲು ಕ್ರಮಕೈಗೊಳ್ಳಿ, ಕಸ ಹಾಕಲು ಅಲ್ಲಲ್ಲಿ ಡಸ್ಟ್ ಬಿನ್ ವ್ಯವಸ್ಥೆ ಮಾಡಿ, ಮ್ಯಾರಥಾನ್ ಓಟಗಳಿಂದ ಉದ್ಯಾನದ ಪರಿಸರಕ್ಕ ಆಗುತ್ತಿರುವ ಧಕ್ಕೆ ತಪ್ಪಿಸಿ ಎಂಬಿತ್ಯಾದಿ ಸಲಹೆಗಳು ಅಲ್ಲಿದ್ದವರಿಂದ ಬಂತು. ಎಲ್ಲವನ್ನೂ ಲಿಖಿತ ರೂಪದಲ್ಲಿ ದಾಖಲಿಸಿಕೊಂಡ ಸಚಿವರು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಪಾಲಿಕೆ, ಸರ್ಕಾರದೊಂದಿಗೆ ಸಮಾಲೋಚಿಸಲಾಗುತ್ತದೆ, ಸಮಸ್ಯೆ ಬಗೆಹರಿಸುವ ಇರಾದೆ ವ್ಯಕ್ತಪಡಿಸಿದರು.

Related Stories

No stories found.

Advertisement

X
Kannada Prabha
www.kannadaprabha.com