ರಂಗೇರಿದ ಸಿಜಿಕೆ ರಂಗೋತ್ಸವ

ತಮಟೆ ಸಪ್ಪಳ, ಕಂಸಾಳೆಯ ಕಲರವ, ನಗಾರಿಯ ಅಬ್ಬರ, ವೀರಗಾಸೆಯ ನಿನಾದ, ಬೆಳಕಿನ ಬಲೂನಗಳ ಹಾರಾಟ, ಗಣ್ಯರ ಭಾಷಣ... ಸಂಸ ಬಯಲು ರಂಗ ಮಂದಿರದಲ್ಲಿ ಭಾನುವಾರ ಸಂಜೆ ರಂಗ ನಿರಂತರದ `ಸಿಜಿಕೆ ರಾಷ್ಟ್ರೀಯ ರಂಗೋತ್ಸವ' ರಂಗೇರಿದ ಪರಿಯಿದು...
ರಂಗೇರಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
ರಂಗೇರಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
Updated on

ಬೆಂಗಳೂರು: ತಮಟೆ ಸಪ್ಪಳ, ಕಂಸಾಳೆಯ ಕಲರವ, ನಗಾರಿಯ ಅಬ್ಬರ, ವೀರಗಾಸೆಯ ನಿನಾದ, ಬೆಳಕಿನ ಬಲೂನಗಳ ಹಾರಾಟ, ಗಣ್ಯರ ಭಾಷಣ... ಸಂಸ ಬಯಲು ರಂಗ ಮಂದಿರದಲ್ಲಿ ಭಾನುವಾರ ಸಂಜೆ ರಂಗ ನಿರಂತರದ `ಸಿಜಿಕೆ ರಾಷ್ಟ್ರೀಯ ರಂಗೋತ್ಸವ' ರಂಗೇರಿದ ಪರಿಯಿದು.

ಕಲೆಯ ನಾನಾ ಪ್ರಕಾರಗಳೊಂದಿಗೆ ರಂಗೋತ್ಸವವು ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳುವ ಮೂಲಕ ಕಲಾರಸಿಕರ ಮನಸೂರೆಗೊಂಡಿದ್ದು ವಿಶೇಷವೆನಿಸಿತು. `ಸುಸ್ಥಿರ ಬದುಕಿನತ್ತ ರಂಗಭೂಮಿ' ಘೋಷ ವಾಕ್ಯದೊಂದಿಗೆ ರಂಗನಿರಂತರ ಸಾಂಸ್ಕೃತಿಕ ಸಂಸ್ಥೆ ಏ.5ರಿಂದ 11ರವರೆಗೆ ಒಟ್ಟು ಆರು ದಿನಗಳ ಕಾಲ ರಾಷ್ಟ್ರೀಯ ರಂಗೋತ್ಸವ, ರಂಗಭೂಮಿ ಕುರಿತು ಸಂವಾದ, ಜತೆಗೆ ರಂಗ ತಂಡಗಳು, ಕಲಾವಿದರು, ಸಂಘಟಕರು, ರಂಗ ನಿರ್ದೇಶಕರೊಂದಿಗೆ ಹರಟೆ,ಚಟಾಕಿ, ನೆನಪು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವೆಲ್ಲವಕ್ಕೂ ಭಾನುವಾರ ಸಂಜೆ ಚಾಲನೆ ದೊರೆಯಿತು.

ತಂಗಾಳಿಯಲ್ಲಿ ಸಂಸ ಬಯಲು ಮಂದಿರದ ಜಗುಲಿಯೇ ಕಲಾರಸಿಕರಿಂದ ತುಂಬಿಕೊಂಡಿತ್ತು. ಆರಂಭದಲ್ಲಿ ಕೇಳುಗರ ಮೈ ನವಿರೇಳಿಸುವಂತೆ, ಹೃದಯ ಬಡಿತವೇ ನಾದಕ್ಕೆ ಮಿಡಿಯುವಂತೆ ಜನಪದ ಕಲಾ ತಂಡಗಳು ಹಾಡಿ, ನರ್ತಿಸಿದವು. ನಂತರ ರಂಗ ನಿರಂತರದ ಸಂಘಟಕರು, ಬೆಳಕಿನ ಬಲೂನಗಳನ್ನು ಆಗಸಕ್ಕೆ ಹಾರಿ ಬಿಟ್ಟು ಎಲ್ಲರನ್ನು ಒಂದು ಕ್ಷಣ ಆಕಾಶದತ್ತ ಮುಖ ಹಾಕುವಂತೆ ಮಾಡಿದರು.

ಆನಂತರ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಡಾ. ಬಿ.ಜಯಶ್ರೀ, ಸಾಂಕೇತಿಕವಾಗಿ ರಂಗೋತ್ಸವದ ಪೋಸ್ಟರ್ ತೆರೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು. ಹಿರಿಯ ರಂಗ ನಿರ್ದೇಶಕ ಪ್ರಸನ್ನ, ಸಿಜಿಕೆ ರಂಗೋತ್ಸವಕ್ಕೆ ಸುಸ್ಥಿರ ಬದುಕಿನತ್ತ ರಂಗಭೂಮಿ  ಘೋಷವಾಕ್ಯ ಜೋಡಿಸಿದ್ದರ ಕುರಿತು ಮಾತನಾಡಿದರು. `ಕಡಿಮೆ ಸಂಪನ್ಮೂಲದಿಂದ ಹೆಚ್ಚು ಸುಖ ಪಡೆಯುವ ಕಾಲ ಇದಲ್ಲ. ಆ ದಿನಗಳು ಹೋಗಿ ಈಗ ಗಂಡಾಂತರದ ದಿನಗಳು ಎದುರಾಗಿವೆ. ಯಂತ್ರೀಕರಣದ ಹೊತ್ತಲ್ಲಿ ಹೆಚ್ಚು ಸಂಪನ್ಮೂಲವನ್ನು ನಾಶ ಮಾಡಿ ಕಡಿಮೆ ಸುಖ ಅನುಭವಿಸುವಂತಹ ವಾತಾ ವರಣ ನಿರ್ಮಾಣವಾಗಿದೆ. ಇದು ಭವಿಷ್ಯಕ್ಕೆ ತೀವ್ರ ಅಪಾಯಕಾರಿಯಾಗಿದೆ. ರಂಗಭೂಮಿ ಒಂದು ಚಳವಳಿಯ ಸ್ವರೂಪವೇ ಆಗಿರುವುದರಿಂದ ಇದನ್ನು ಜನರತ್ತ ತೆಗೆದುಕೊಂಡು ಹೋಗಬೇಕಿದೆ 'ಎಂದು ಹೇಳಿದರು.

ಆರಂಭದಲ್ಲಿ ಜಾನಪದ ಉತ್ಸವಕ್ಕೆ ಚಾಲನೆ ನೀಡಿದ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, `ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ' ಕ್ರಾಂತಿ ಗೀತೆ ಹಾಡಿ, ಎಲ್ಲರನ್ನೂ ಭಾವುಕಗೊಳಿಸಿದರು. ನಂತರ ನಾನಾ ಕಲಾ ತಂಡಗಳಿಂದ ಜಾನಪದ ನೃತ್ಯಗಳು ನಡೆದವು. ವೇದಿಕೆಯಲ್ಲಿ ಕಲಾ ತಂಡಗಳು ನರ್ತಿಸುತ್ತಿದ್ದರೆ, ಮೆಟ್ಟಿಲುಗಳಲ್ಲಿ ಕುಳಿತ ಕಲಾ ರಸಿಕರು ಕೂಡ ಅವರ ಸಾಥ್ ನೀಡಿ ರಂಗೋತ್ಸವ ಕಳೆ ಗಟ್ಟುವಂತೆ ಮಾಡಿದರು.

ಜಯಲಕ್ಷ್ಮಿ ಸಿಜಿಕೆ, ಸಿ. ಬಸವಲಿಂಗಯ್ಯ ವೇದಿಕೆಯಲ್ಲಿ ಹಾಜರಿದ್ದರು. ರಂಗೋತ್ಸವದ ಹಿನ್ನೆಲೆಯಲ್ಲಿ ಸಂಸ ಪ್ರವೇಶ ದ್ವಾರವೆಲ್ಲ ರಂಗಾಗಿದೆ. ಪ್ರತಿ ದಿನ ನಡೆಯುವ ನಾಟಕ, ಅದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳ ದೊಡ್ಡ ಪೋಸ್ಟರ್‍ಗಳ ಫಲಕ ಹಾಕಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ತಮ್ಮ  ಕಾರ್ಯಕ್ರಮಗಳ ಪ್ರಚಾರ ಫಲಕ ಹಾಕಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com