

ಬೆಂಗಳೂರು: ಜಾತಿಗಣತಿ ಹತ್ತಿರ ಬರುತ್ತಿದ್ದಂತೆ ಎಲ್ಲ ಜನಾಂಗಗಳ ಮುಖಂಡರು ಜಾತಿ ಕಾಲಂನಲ್ಲಿ ನೀಡಬೇಕಾದ ಮಾಹಿತಿಯನ್ನು ಕುರಿತು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಜನಾಂಗದವರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಾತಿವಾರು ಸಮೀಕ್ಷೆಯಲ್ಲಿ ಕಾಡುಗೊಲ್ಲ ಜನಾಂಗದ ಪ್ರತಿಯೊಬ್ಬರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ `ಕಾಡುಗೊಲ್ಲ' ರೆಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ. ಅದೇ ರೀತಿ ಪರ್ಯಾಯ ಪದ ಎನ್ನುವ ಕಲಾಂಗಳಲ್ಲಿ ಅಡವಿ ಗೊಲ್ಲ(0011) ಮತ್ತು ಹಟ್ಟಿ ಗೊಲ್ಲ(0434) ಎಂದು ಬರೆಸಬೇಕು ಎಂದು ಬರೆಸುವಂತೆ ಕಾಡುಗೊಲ್ಲರ ಸಂಘದ ಅಧ್ಯಕ್ಷ ವಿ. ನಾಗಪ್ಪ ತಿಳಿಸಿದರು.
`ಗೊಲ್ಲ' ಎಂದು ನಮೂದಿಸಿ: `ಗೊಲ್ಲ' ಸಮುದಾಯದ ಪ್ರತಿಯೊಬ್ಬರು ಅರ್ಜಿ ಕಾಲಂನಲ್ಲಿ `ಗೊಲ್ಲ' ಹಾಗೂ ಉಪಜಾತಿಯನ್ನು ಅಲೆಮಾರಿ/ ಅರೆ ಅಲೆಮಾರಿ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಗೊಲ್ಲರ (ಯಾದವ)ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮೀಪತಿ ತಿಳಿಸಿದರು. ರಾಜ್ಯದ ಕುರುಬ ಸಮುದಾಯದ ಪ್ರತಿಯೊಬ್ಬರು ಜಾತಿಗಣತಿ ಅರ್ಜಿ ಕಾಲಂನಲ್ಲಿ `ಕುರುಬ' ಎಂದು ಕಡ್ಡಾಯವಾಗಿ ನಮೂದಿಸ ಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಕಮ್ಮಾರರೆಂದು ಬರೆಸಿ: ಕಮ್ಮಾರ ಜನಾಂಗದವರು ಜಾತಿ ಕಾಲಂನಲ್ಲಿ `ಕಮ್ಮಾರ' ಹಾಗೂ ಉಪಜಾತಿ ಕಾಲಂನಲ್ಲಿ ಸ್ಥಳೀಯವಾಗಿ ಗುರುತಿಸುವಂತೆ ಕಮ್ಮಾರ, ಕಂಬಾರ, ಬೈಲು, ಕಂಸಾಳೆ, ಮರಾಠಿ ಕಮ್ಮಾರ ಎಂದು ನಮೂದಿಸುವಂತೆ ರಾಜ್ಯ ಕಮ್ಮಾರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮನವಿ ಮಾಡಿದ್ದಾರೆ.
Advertisement