
ಬೆಂಗಳೂರು: ಆಹಾರ ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯದಲ್ಲಿ ಪ್ರತ್ಯೇಕ ಆಯುಕ್ತಾಲಯ (ಕಮಿಷನರೇಟ್) ತೆರೆಯಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗಗಳನ್ನು ತಡೆಯುವ `ಇಂದ್ರಧನುಷ್ ಅಭಿಯಾನ'ಕ್ಕೆ ಮಂಗಳವಾರ ಚಾಲನೆ ನೀಡಿದ ನಂತರ ಸುದ್ದಿಗಾರರಿಗೆ ಮಾತನಾಡಿದ ಅವರು, `ಕೇಂದ್ರ ಸರ್ಕಾರ ರೂಪಿಸಿರುವ ಆಹಾರ ಸುರಕ್ಷತಾ ಕಾಯ್ದೆ ಜಾರಿಗೊಳಿಸಲು ಸರ್ಕಾರ ಕ್ರಮಕೈಗೊಂಡಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಿದೆ. ಇದಲ್ಲದೆ ಈ ಕಾಯ್ದೆ ಜಾರಿಗೊಳಿಸುವುದಕ್ಕಾಗಿಯೇ ಪ್ರತ್ಯೇಕ ಆಯುಕ್ತರು ಹಾಗೂ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕಿದೆ' ಎಂದರು.
ವಿಶ್ವ ಸಂಸ್ಥೆ ಈ ಬಾರಿ `ಸಾಗುವಳಿಯಿಂದ ಸೇವನೆವರೆಗೆ ಆಹಾರ ಸುರಕ್ಷತೆ' ಎಂದು ಘೋಷಿಸಿದ್ದು, ಅದರ ಅನ್ವಯ ಆಹಾರ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಿ ನಿಯಗಳನ್ನು ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಇರುವ ಕೇಂದ್ರ ಸರ್ಕಾರದ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮೊದಲು ವೃಂದ ಮತ್ತು ನೇಮಕ ನಿಯಮಗಳನ್ನು ರೂಪಿಸಲಾಗುತ್ತಿದೆ. ನಂತರ ಪ್ರತ್ಯೇಕ ಆಯುಕ್ತಾಲಯ ತೆರೆದು ಪೂರಕ ಸಿಬ್ಬಂದಿ ನೇಮಿಸಲಾಗುತ್ತದೆ. ಆನಂತರ ತಾಲೂಕು ಮಟ್ಟದಲ್ಲೂ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಸುರಕ್ಷತೆ ನೂರಕ್ಕೆ ನೂರು ಜಾರಿಗೊಳಿಸಲಾಗುತ್ತದೆ ಎಂದು ಖಾದರ್ ವಿವರಿಸಿದರು.
15ರಿಂದ ಬೈಕ್ ಆ್ಯಂಬುಲೆನ್ಸ್
ತುರ್ತು ಚಿಕಿತ್ಸೆಗಾಗಿ 108 ಮಾದರಿ ವಾಹನಗಳಂತೆ ಈಗ ಬೈಕ್ ಆ್ಯಂಬುಲೆನ್ಸ್ ಸೇವೆ ಆರಂಭಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ತುರ್ತ ಚಿಕಿತ್ಸೆಗೆ ಅನುಕೂಲವಾಗಲು ಟೆಂಪೊ ಮಾದರಿಯ ಆ್ಯಂಬುಲೆನ್ಸ್ ಗಳಿಂದ ಚಿಕಿತ್ಸೆ ನೀಡಬೇಕಾದ ಜಾಗಕ್ಕೆ ಕ್ಷಿಪ್ರಗತಿಯಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರಾಯೋಗಿಕವಾಗಿ 32 ಬೈಕ್ ಗಳ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ. ಏ.15ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೈಕ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೆ ರಾಜ್ಯದ ಇತರ ನಗರಗಳಲ್ಲೂ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಇಂದ್ರಧನುಷ್‍ಗೆ ಚಾಲನೆ
ಸಾಂಕ್ರಾಮಿಕ ರೋಗಗಳನ್ನು ತಡೆಯುವ ಲಸಿಕಾ ಹಾಕುವ ಇಂದ್ರಧನುಷ್ ಅಭಿಯಾನಕ್ಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದ್ದಾರೆ. ದೇಶದಲ್ಲಿ 1985ರಿಂದಲೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವಿದ್ದರೂ ಜನರು ಅರಿವಿನ ಕೊರತೆಯಿಂದ ಲಸಿಕೆಗಳನ್ನು ಹಾಕಿಸುತ್ತಿಲ್ಲ. ಇದರಿಂದ ರೋಗಗಳ ನಿಯಂತ್ರ ಸಾಧ್ಯವಾಗುತ್ತಿಲ್ಲ. ಇದನ್ನು ತಡೆಯಲು ಆರೋಗ್ಯ ಇಲಾಖೆ 9 ಸಾಂಕ್ರಮಿಕ ರೋಗಳಿಗೆ ಲಸಿಕೆ ನೀಡುವ ಇಂದ್ರಧನುಷ್ ಅಭಿಯಾನ ಹಮ್ಮಿಕೊಂಡಿದ್ದು, ಸಚಿವ ಖಾದರ್ ಮಂಗಳ ವಾರ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಇಲಾಖೆ ಆಯುಕ್ತ ವಸuಉದ್, ನಿರ್ದೇಶಕ ಡಾ.ರಮೇಶ್, ಏಡ್ಸ್ ಪ್ರಿವೆನ್ಸ್ ಸೊಸೈಟಿ ನಿರ್ದೇಶಕ ರವೀಂದ್ರ, ನಗರ ಜಿಲ್ಲಾಧಿಕಾರಿ ಶಂಕರ್, ಆರ್‍ಸಿಎಸ್ ಯೋಜನೆಯ ಸಹ ನಿರ್ದೇಶಕ ಕಾಮಚಂದ್ರ ಉಪಸ್ಥಿತರಿದ್ದರು.
Advertisement