
ಬೆಂಗಳೂರು: ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಳ್ಳಗಂಟಿನ ಚೋರ ರಾಮಕೃಷ್ಣ ಭಾರಿ ವಹಿವಾಟು ನಡೆಸಿದ್ದು ಹೇಗೆ ಗೊತ್ತೇ? ಈತನ ಈ ವ್ಯವಹಾರ ಕೌಶಲ್ಯ ನೋಡಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ.
ಗ್ರಾಮೀಣ ನೀರು ಸರಬರಾಜು ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನದ ಪೈಕಿ ರು.134 ಕೋಟಿಯನ್ನು 26-3-2011ರಲ್ಲಿ ಬೆಂಗಳೂರಿನ ಆಂಧ್ರ ಬ್ಯಾಂಕ್ ಖಾತೆಯಲ್ಲಿ ಕಳ್ಳ ಠೇವಣಿ ಇಟ್ಟ (ಖಾತೆ ನಂ.002410100018237) ರಾಮಕೃಷ್ಣ ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಪಂಚಾಯಿತ್ ರಾಜ್ ಇಲಾಖೆಯ ಗಮನಕ್ಕೆ ಬಾರದೇ ಇರುವ ರೀತಿ ನೋಡಿಕೊಂಡಿದ್ದ. ಅಷ್ಟು ಮಾತ್ರವಲ್ಲ ಈ ಖಾತೆಯಿಂದ ನಿಯಮಿತವಾಗಿ ಹಣವನ್ನು ತೆಗೆಯುತ್ತಲೇ ಇದ್ದ ರಾಮಕೃಷ್ಣ, ಅದನ್ನು ಎಲ್ಲಿ? ಯಾರಿಗೆ ನೀಡಿದ್ದಾನೆ ಎಂಬುದು ಮಾತ್ರ ಇಂದಿಗೂ ನಿಗೂಢ. ಉದ್ದೇಶ ಶುದ್ಧವಾಗಿದ್ದರೆ ನಾಲ್ಕು ವರ್ಷ ಕಾಲ ಯಾರಿಗೂ ಗೊತ್ತಾಗದ ಹಾಗೆ ಖಾತೆಯನ್ನು ಏಕೆ ರಹಸ್ಯವಾಗಿಟ್ಟಿದ್ದ ಎಂಬುದೂ ತನಿಖೆಯಿಂದ ತಿಳಿದು ಬರಬೇಕಿದೆ.
9 ಬಾರಿ ಹಣ ತೆಗೆದ ಬಗ್ಗೆ ಮಾಹಿತಿ ಠೇವಣಿ ಹಣದಲ್ಲಿ ನಾಲ್ಕು ಬಾರಿ ಭಾರಿ ಮೊತ್ತದ ಹಣ ತೆಗೆದಿರುವ ರಾಮಕೃಷ್ಣ ಅದರ ಬಳಕೆ ಬಗ್ಗೆ ಇಲಾಖೆಗೆ ಲೆಕ್ಕ ಕೊಟ್ಟಿಲ್ಲ. 10-10-2011ರಲ್ಲಿ ರು.7,62,092, 9-11-2011ರಲ್ಲಿ ರು.49,32,000, 29-11-2011ರಲ್ಲಿ ರು.7,00,000, 1-10-2011ರಲ್ಲಿ ರು.2,68,937, 30-3-2013ರಲ್ಲಿ ರು.5,00,00,000, 22-11-2013ರಲ್ಲಿ ರು.3,87,765, 25-3-2013ರಲ್ಲಿ ರು.2,74,376, 25-3-2014ರಲ್ಲಿ ರು.2,66,460, 26-4-2014ರಲ್ಲಿ ರು.4,06,230 ಹಣ ಡ್ರಾ ಮಾಡಲಾಗಿದೆ. ನಾಲ್ಕು ಬಾರಿ ಎಂ.ವಿ.ಗಿರಿರಾಜ್ ಎಂಬುವರ ಹೆಸರಿನಲ್ಲಿ, ನಾಲ್ಕು ಬಾರಿ ಗ್ರಾಮೀಣ ನೀರು ಸರಬರಾಜು ಹೆಸರಿನಲ್ಲಿ, ಒಮ್ಮೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಲೆಕ್ಕದಲ್ಲಿ ಹಣ ತೆಗೆಯಲಾಗಿದೆ. ಆದರೆ ಇದು ಬಳಕೆಯಾದ ಬಗ್ಗೆ ಸರ್ಕಾರದ ಬಳಿ ಲೆಕ್ಕವಿಲ್ಲ. ಜತೆಗೆ ಈ ಎಂ.ವಿ.ಗಿರಿರಾಜ್ ಎಂದರೆ ಯಾರು ಗೊತ್ತಿಲ್ಲ. ಜತೆಗೆ ಈ ವ್ಯವಹಾರಕ್ಕಾಗಿ ನಗದು ಪುಸ್ತಕ ನಿರ್ವಹಣೆ ಮಾಡಿಲ್ಲ.
ಸಚಿವರಿಂದಲೇ ತನಿಖೆಗೆ ಸೂಚನೆ!
ರಾಮಕೃಷ್ಣ ಅವರು ನಡೆಸುತ್ತಿರುವ ಅವ್ಯವಹಾರದ ಬಗ್ಗೆ ರಹಸ್ಯ ವ್ಯಕ್ತಿಯೊಬ್ಬರಿಂದ ಮಾಹಿತಿ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಡಿಸೆಂಬರ್ 22ರಂದು ಸೂಚನೆ ನೀಡಿದ್ದರು. ಗುಪ್ತವಾಗಿ ಮಾಹಿತಿ ಪಡೆದ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ನೀಡಿದ ಮಧ್ಯಂತರ ವರದಿಯಲ್ಲಿ ರಾಮಕೃಷ್ಣ ತಪ್ಪು ಮಾಡಿರುವುದು ಸ್ಪಷ್ಟವಾಗಿತ್ತು. ಜತೆಗೆ ತನಿಖೆಗೆ ಸಹಕಾರ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಲೋಕಾಯುಕ್ತ ತನಿಖೆಗೆ ಆದೇಶ ನೀಡಲಾಗಿದೆ.
Advertisement