
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರ ಪ್ರದರ್ಶನದ ವೇಳೆ ರನ್ನ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದನ್ನು ಆಕ್ಷೇಪಿಸಿ, ಪ್ರೇಕ್ಷಕರು ಸಂತೋಷ್ ಚಿತ್ರಮಂದಿರದಲ್ಲಿ ದಾಂಧಲೆ ಎಬ್ಬಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಕೆಂಪೇಗೌಡ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ರಣವಿಕ್ರಮ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಇಂಟರ್ ವಲ್ ವೇಳೆ ನಟ ಸುದೀಪ್ ಅಭಿನಯದ ರನ್ನ ಚಿತ್ರದ ಟೀಸರ್ ಪ್ರದರ್ಶನ ಮಾಡಿದ್ದರಿಂದ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಗಲಾಟೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಸಿನಿಮಾದ ಇಂಟರ್ ವಲ್ ನಲ್ಲಿ ರನ್ನ ಚಿತ್ರದ ಟೀಸರ್ ಪ್ರದರ್ಶನ ಮಾಡುತ್ತಿದ್ದಾಗ, ರೊಚ್ಚಿಗೆದ್ದ ಅಭಿಮಾನಿಗಳು ಪ್ರೊಜೆಕ್ಟರ್ ನತ್ತ ಬಾಟಲಿ ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕಿಟಕಿ ಗಾಜುಗಳೆಲ್ಲಾ ಪುಡಿ, ಪುಡಿಯಾದವು.
ಕೂಡಲೇ ಎಚ್ಚೆತ್ತ ಥಿಯೇಟರ್ ಸಿಬ್ಬಂದಿಗಳು ರನ್ನ ಸಿನಿಮಾದ ಟೀಸರ್ ಪ್ರದರ್ಶನ ಸ್ಥಗಿತಗೊಳಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ವಾತಾವರಣ ತಿಳಿಯಾದ ನಂತರ ಚಿತ್ರಮಂದಿರದ ಸಿಬ್ಬಂದಿಗಳು ಮತ್ತೆ ರಣವಿಕ್ರಮ ಸಿನಿಮಾ ಪ್ರದರ್ಶನ ಮುಂದುವರಿಸಿದ್ದಾರೆ.
ರಣವಿಕ್ರಮ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಡಿ ಜಯಣ್ಣ ಮತ್ತು ಭೋಗೇಂದ್ರ ಕೂಡಿ ನಿರ್ಮಿಸಿದ್ದು, ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್, ಅದಾಶರ್ಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿರುವುದು ಪವನ್ ಒಡೆಯರ್.
Advertisement