
ಬೆಂಗಳೂರು: ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಎನ್ನುವುದು ಕೊಲೆಯಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಹೇಳಿದ್ದಾರೆ.
ನಾರ್ತ್-ಸೌತ್ ಫೌಂಡೇಷನ್ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲೆಡೆ ಅನ್ಯಾಯ, ಅಕ್ರಮಗಳು ಹೆಚ್ಚುತ್ತಿದ್ದು, ಪ್ರಾಮಾಣಿಕತೆ ಎನ್ನುವುದು ಕಡಿಮೆಯಾಗುತ್ತಿದೆ. ನಾನು ನ್ಯಾಯಾಧೀಶನಾಗಿದ್ದೆ ಎನ್ನುವ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆಯನ್ನು ಮೆಚ್ಚಿಕೊಳ್ಳುವುದಿಲ್ಲ. ನ್ಯಾಯಾಂಗ ಕ್ಷೇತ್ರದಲ್ಲೂ ಸಾಕಷ್ಟು ಸಮಸ್ಯೆ ಇದೆ.
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗದಲ್ಲೂ ತಲೆ ಕೆಡಿಸುವಂಥ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ಪ್ರಾಮಾಣಿಕತೆ ಸಮಸ್ಯೆ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲೆಡೆ ಆವರಿಸಿದೆ ಎಂದು ವಿಷಾದಿಸಿದರು. ಎಲ್ಲೆಡೆ ಮಹಿಳೆಯರಿಗೆ ಶೇ.50ರಷ್ಟು ಮೀಸಲು ನೀಡಬೇಕೆನ್ನುವ ಮಾತಿದೆ.
ರಾಜಕೀಯ ಕ್ಷೇತ್ರದಲ್ಲಿ ಈಗಾಗಲೇ ಶೇ.50 ಮೀಸಲು ನೀಡಿಯೂ ಆಗಿದೆ. ಆದರೆ ನಿಜಕ್ಕೂ ಸಮಾಜದಲ್ಲಿ ಮಹಿಳೆ ಮನೆಯಿಂದ ಹೊರಗೆ ಬರುವಂತೆ ಮಾಡಬೇಕಿದೆ. ಹೊರಗೆ ಬಂದು ದುಡಿಯಬೇಕು. ಆರ್ಥಿಕ ಸ್ವಾವಲಂಬನೆ ಸಾಧಿಸುವಂತಾಗಬೇಕು. ಆಗ ಮಾತ್ರ ಆಕೆಗೆ ನೀಡುವ ಮೀಸಲು ಸೌಲಭ್ಯ ಸದ್ಬಳಕೆಯಾಗುತ್ತದೆ. ಇಲ್ಲವಾದರೆ ಮಹಿಳಾ ರಕ್ಷಣೆಗೆ ಯಾವುದೇ ಕಾಯ್ದೆ, ಕಾನೂನು ಜಾರಿಗೊಳಿಸಿದರೂ ಪ್ರಯೋಜನವಾಗುವುದಿಲ್ಲ ಎಂದರು.
ನಿಘಂಟು ತಜ್ಞ, ಹಿರಿಯ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಕಷ್ಟವನ್ನು ಮೆಟ್ಟಿ ನಿಂತು ಸಾ„ಸಬೇಕು. ಆನಂತರ ಉತ್ತಮ ಸ್ಥಾನಮಾನ ಸಿಕ್ಕಾಗ ಕಷ್ಟದ ದಿನಗಳನ್ನು ಮರೆಯಬಾರದು. ಉತ್ತಮ ಸಾಧನೆ ಮಾಡಿ ಹೆಚ್ಚು ಸಂಪಾದಿಸುವ ಕಾಲ ಬಂದಾಗ ದುಡಿಮೆಯಲ್ಲಿ ಶೇ.10ರಷ್ಟು ಹಣವನ್ನು ಬಡ ವಿದ್ಯಾರ್ಥಿಗಳ ನೆರವು ನೀಡಿ ಎಂದರು.
ಕರ್ನಾಟಕ ವಿವಿ ನಿವೃತ್ತ ಉಪ ಕುಲಪತಿ ಡಾ.ಜಿ.ಕೆ.ನಾರಾಯಣ ರೆಡ್ಡಿ, ನಿವೃತ್ತ ಹಿರಿಯ ಅಧಿಕಾರಿ ಡಾ.ಜಿ.ಅಶ್ವತ್ ನಾರಾಯಣ, ನಾರ್ತ್ ಸೌತ್ ಸಂಸ್ಥೆಯ ವಾಸುದೇವ್, ಕೃಷ್ಣಮೂರ್ತಿ ಭಾಗವಹಿಸಿದ್ದರು.
Advertisement