ಅಕಾಲಿಕ ಮಳೆ: ರಾಜ್ಯದಲ್ಲಿ ಮತ್ತೆರಡು ಬಲಿ

ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಶನಿವಾರ ರಾತ್ರಿಯಿಂದೇಚೆಗೆ ಸುರಿದ ಅಕಾಲಿಕ ಮಳೆಗೆ ಇಬ್ಬರು ಬಾಲಕಿಯರು ಬಲಿಯಾಗಿದ್ದಾರೆ.
ಅಕಾಲಿಕ ಮಳೆ
ಅಕಾಲಿಕ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಶನಿವಾರ ರಾತ್ರಿಯಿಂದೇಚೆಗೆ ಸುರಿದ ಅಕಾಲಿಕ ಮಳೆಗೆ ಇಬ್ಬರು ಬಾಲಕಿಯರು ಬಲಿಯಾಗಿದ್ದಾರೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಫಸಲು ಹಾನಿಗೀಡಾಗಿದೆ. ಹೊಸಪೇಟೆಯ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮು ಗೋಡೆ ಕುಸಿದು ಭವಾನಿ (11) ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಬೀದರ್ ತಾಲೂಕಿನ ಚಿಲ್ಲರಿ ಗ್ರಾಮದ ಸಮುದಾಯ ಭವನದ ಛಾವಣಿ ಕುಸಿದು ದೀಪಿಕಾ ಶಂಕರ ಅಂಕಾರೆ (9) ಮೃತಪಟ್ಟಿದ್ದಾಳೆ. ಸೋದರಿಯನ್ನು ಬಹಿರ್ದೆಸೆಗೆ ಕರೆದು ಕೊಂಡು ಹೋಗಿ ಸಮುದಾಯ ಭವನದಲ್ಲಿ ಆಶ್ರಯ ಪಡೆದಾಗ ಅವಘಡ ಸಂಭವಿಸಿದೆ. ವಿಚಿತ್ರ ಎಂದರೆ 6 ತಿಂಗಳ ಹಿಂದಷ್ಟೇ ಇದನ್ನು ನಿರ್ಮಿಸಲಾಗಿತ್ತು! ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲಾದ್ಯಂತ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 33 ಮಿಮೀ ಮಳೆಯಾಗಿದ್ದರೆ, ಗುಲ್ಬರ್ಗ ಜಿಲ್ಲೆಯಾದ್ಯಂತ 241 ಮಿಮೀ ಮಳೆ ಸುರಿದಿದೆ. ಮಾನವಿ ತಾಲೂಕಿನ ಅತ್ತನೂರು, ಕವಿತಾಳ, ಸಿರವಾರ, ಲಿಂಗಸ್ಗೂರು ಪಟ್ಟಣ, ಮುದಗಲ್ ಸೇರಿದಂತೆ ಮತ್ತಿತರೆಡೆ ಭಾರಿ ಮಳೆಯಾಗಿದ್ದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ರಾಯಚೂರಿನ ನೇತಾಜಿ ನಗರದ ಶೆಟ್ಟಿಬಾವಿ ವೃತ್ತದಿಂದ ಬಿಆರ್‍ಬಿ ಕಾಲೇಜುವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಈ ರಸ್ತೆಯಲ್ಲಿ ಚರಂಡಿಗಳು ಕಟ್ಟಡಗಳ ತ್ಯಾಜ್ಯದಿಂದ ತುಂಬಿದ್ದರಿಂದ ನೀರು ಬಡಾವಣೆಗೆ ನುಗ್ಗಿದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com