ಮಳೆ ಹೊಡೆತಕ್ಕೆ ಕಂಗಾಲಾದ ರೈತ

ಬೇಸಿಗೆ ಮಳೆಯ ಅಬ್ಬರ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಜೋರಾಗಿದ್ದು ಸಿಡಿಲಿಗೆ ವೃದ್ಧೆಯೊಬ್ಬಳು ಬಲಿಯಾಗಿದ್ದಾಳೆ.
ಮಳೆ ಹೊಡೆತಕ್ಕೆ ಕಂಗಾಲಾದ ರೈತ
ಮಳೆ ಹೊಡೆತಕ್ಕೆ ಕಂಗಾಲಾದ ರೈತ

ಬೆಂಗಳೂರು: ಬೇಸಿಗೆ ಮಳೆಯ ಅಬ್ಬರ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಜೋರಾಗಿದ್ದು ಸಿಡಿಲಿಗೆ ವೃದ್ಧೆಯೊಬ್ಬಳು ಬಲಿಯಾಗಿದ್ದಾಳೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೀಡಾಗಿದ್ದು, ರೈತರು ತತ್ತರಿಸುವಂತಾಗಿದೆ.

ಹೊಸಪೇಟೆ ತಾಲೂಕಿನ ವ್ಯಾಸನ ಕೆರೆ ಗ್ರಾಮದಲ್ಲಿ ಬಾಳೆಮ್ಮ (70) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 12 ಕುರಿಗಳು ಜೀವ ಕಳೆದುಕೊಂಡಿವೆ. ಗಂಗಾವತಿಯಲ್ಲಿ 10 ಹಸುಗಳು ಮೃತಪಟ್ಟಿವೆ. ಸಂಡೂರು ತಾಲೂಕಿನ ಯು. ಮಲ್ಲಾಪುರ ಗ್ರಾಮದಲ್ಲಿ ಎತ್ತು ಸಿಡಿಲಿಗೆ ಬಲಿಯಾಗಿದೆ. ಕೊಪ್ಪಳ ಜಿಲ್ಲೆಯಾದ್ಯಂತ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 31 ಸಾವಿರ ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬತ್ತ ನಾಶವಾಗಿದೆ. ಬಾಳೆ, ನುಗ್ಗಿ, ಸೂರ್ಯಕಾಂತಿ ಇತರೆ ಬೆಳೆಗಳಿಗೆ ಹಾನಿಯಾಗಿದೆ.

ಗಂಗಾವತಿ ತಾಲೂಕಿನ ಹಲವೆಡೆ 200ಕ್ಕೂ ಅಧಿಕ ಮನೆಗಳು ಜಖಂಗೊಂಡಿವೆ. ಸಾಣಾಪುರ ಗ್ರಾಮದಲ್ಲಿ ಹೆಂಚು ಹಾರಿ ಹೋಗಿ ತಲೆ ಮೇಲೆ ಬಿದ್ದಿದ್ದರಿಂದ ಕಾರ್ತಿಕ, ತಿಪ್ಪಣ್ಣ ಹಾಗೂ ನಾಗಪ್ಪ ಗಾಯಗೊಂಡಿದ್ದಾರೆ. ಗಂಗಾವತಿ ಹಾಗೂ ಕಾರಟಗಿ ಪ್ರದೇಶದಲ್ಲಿ ಒಂದು ಕೆಜಿಗೂ ಹೆಚ್ಚು ತೂಕದ ಆಲಿಕಲ್ಲುಗಳು ಬಿದ್ದಿವೆ. ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಮೆಂಟ್ ಶೀಟ್ ಹಾರಿ ಹೋಗಿದೆ. ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಭಾರಿ ಮಳೆ ಸುರಿದಿದ್ದರಿಂದ ವೇದಿಕೆಯ ಹಿಂಭಾಗ ಕುಸಿದು ಬಿದ್ದಿದೆ. ಬಳ್ಳಾರಿ ಜಿಲ್ಲೆಯಲ್ಲಿ 2,930 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಸಿರುಗುಪ್ಪ ತಾಲೂಕಿನ ಕರೂರು ಹೋಬಳಿಯೊಂದರಲ್ಲಿ ಗಾಳಿ ಮತ್ತು ಮಳೆಗೆ 2,200 ಎಕರೆ ಪ್ರದೇಶದಲ್ಲಿ ಬೆಳೆದ ಬತ್ತ ನೆಲಕ್ಕುರುಳಿದೆ. ಜಿಲ್ಲೆಯಲ್ಲಿ 41 ಮನೆಗಳಿಗೆ ಹಾನಿಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ ಆಲಿಕಲ್ಲು ತಾಗಿ 15 ಜನರು ಗಾಯಗೊಂಡಿದ್ದಾರೆ. ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್ ಜಿಲ್ಲಾದ್ಯಂತ ಭಾರಿ ಮಳೆಯಾಗಿದೆ. ಲಿಂಗಸ್ಗೂರು ತಾಲೂಕಿನಲ್ಲಿ ಸಾವಿರಾರು ಎಕರೆ ಬತ್ತದ ಬೆಳೆ ನಾಶವಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಭಾರಿ ಬಿರುಗಾಳಿಗೆ ಮಳೆಗೆ ಬೈಚಾಪುರ ಗ್ರಾಮದ ಸುತ್ತಮುತ್ತ ಅಡಿಕೆ, ತೆಂಗು, ಬಾಳೆ ಬೆಳೆ ಹಾಳಾಗಿದೆ. ಬೈಚಾಪುರ ಗ್ರಾಮದ ಗಂಗಾರೆಡ್ಡಿ ಅವರಿಗೆ ಸೇರಿದ 5 ಸಾವಿರ ಬಾಳೆ ಗಿಡಗಳು ಬಿರುಗಾಳಿಗೆ ಉರುಳಿ ಬಿದ್ದಿದ್ದು ಸುಮಾರು ರು. 6 ಲಕ್ಷದಷ್ಟು ನಷ್ಟ ಉಂಟಾಗಿದೆ. ಗುಬ್ಬಿ ತಾಲೂಕಿನ ಹಲವೆಡೆಗಳಲ್ಲಿ ಬಿರುಗಾಳಿ, ಮಳೆಗೆ ತೆಂಗಿನ ಮರಗಳು, ಅಡಕೆ ಮರಗಳು ಧರೆಗುರುಳಿವೆ. ಮಂಡ್ಯ ಜಿಲ್ಲೆಯಾದ್ಯಂತ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ದೊಡ್ಡಬಳ್ಳಾಪುರ ಸುತ್ತಮುತ್ತ ಆಲಿಕಲ್ಲು, ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬ ಧರೆಗುರುಳಿವೆ. ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಶಂಕರಾಪುರದಲ್ಲಿ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದು, 15 ಕುರಿಗಳು ಮೃತಪಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ.

ಬರದ ನಾಡಿನಲ್ಲಿ ಮಳೆಯ ಸಿಂಚನ
ಸತತ ನಾಲ್ಕು ವರ್ಷಗಳಿಂದ ಬರದ ಹೊಡೆತಕ್ಕೆ ಸಿಲುಕಿದ್ದ ಚಿಕ್ಕಬಳ್ಳಾಪುರ ಜನತೆ ಸೋಮವಾರ ಕೊಂಚ ನಿರಾಳರಾಗಿದ್ದಾರೆ. ಬಾಗೇಪಲ್ಲಿಯಲ್ಲಿ 12.2 ಮಿಮೀ,
ಚಿಕ್ಕಬಳ್ಳಾಪುರದಲ್ಲಿ 6.9 ಮಿಮೀ, ಚಿಂತಾಮಣಿ 6.4 ಮಿಮೀ, ಗೌರಿಬಿದನೂರಿನಲ್ಲಿ 8.2 ಮಿಮೀ, ಗುಡಿಬಂಡೆಯಲ್ಲಿ 8.2 ಮಿಮೀ ಮತ್ತು ಶಿಡ್ಲಘಟ್ಟ 9.0 ಮಿಮೀ ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿರುವ ಕಾರಣ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬೈಕ್ ಏರಿದ ತಂಗಡಗಿ
ಕಾರಟಗಿಯಲ್ಲಿ ಬೆಳೆಹಾನಿ ವೀಕ್ಷಣೆಗೆ ತೆರಳಿದ್ದ ಸಚಿವ ತಂಗಡಗಿಗೆ ರೈತರ ಪ್ರತಿಭಟನೆ ಎದುರಾಯಿತು. ರೈತರು ರಸ್ತೆ ತಡೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಸಚಿವರ ಕಾರನ್ನು ತಡೆದರು. ಮುಂದಿನ ಗ್ರಾಮಗಳಲ್ಲೂ ಬೆಳೆಹಾನಿ ವೀಕ್ಷಣೆ ನಡೆಸಬೇಕಿದ್ದು, ಅವಕಾಶ ನೀಡುವಂತೆ ಕೋರಿದರು. ಆದರೆ ರೈತರು ಜಗ್ಗಲಿಲ್ಲ. ಕೂಡಲೇ ಕಾರಿನಿಂದ ಇಳಿದ ತಂಗಡಗಿ ದ್ವಿಚಕ್ರ ವಾಹನ ಏರಿ ಸ್ವತಃ ಚಲಾಯಿಸಿ ಮುಂದಿನ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com