ಚನ್ನಪಟ್ಟಣದಲ್ಲಿ ಚಿರತೆ ದಾಳಿಗೆ ನಾಯಿ ಬಲಿ

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಳೆದ ರಾತ್ರಿ ಚಿರತೆಯೊಂದು ದಾಳಿ ಮಾಡಿ ಸಾಕುನಾಯಿಯೊಂದನ್ನು ತಿಂದುಹಾಕಿದೆ.
ಚಿರತೆ ತಿಂದು ಬಿಸಾಡಿದ ನಾಯಿ
ಚಿರತೆ ತಿಂದು ಬಿಸಾಡಿದ ನಾಯಿ

ರಾಮನಗರ: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಳೆದ ರಾತ್ರಿ ಚಿರತೆಯೊಂದು ದಾಳಿ ಮಾಡಿ ಸಾಕುನಾಯಿಯೊಂದನ್ನು ತಿಂದುಹಾಕಿದೆ.

ಚನ್ನಪಟ್ಟಣ ತಾಲ್ಲೂಕಿನ ಹೊನ್ನನಾಯಕನಹಳ್ಳಿಯ ಎಚ್. ಬಾಲಸ್ವಾಮಿ ಅವರ ಮನೆಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ರಾತ್ರಿ ಸುಮಾರು 3 ಗಂಟೆಯ ಸುಮಾರಿನಲ್ಲಿ ಚಿರತೆ ಹೊತ್ತೊಯ್ದಿದ್ದು, ಊರಿನ ಮಧ್ಯಭಾಗದಲ್ಲಿಯೇ ಅದನ್ನು ತಿಂದು ಹಾಕಿದೆ.

ಬೆಳಗ್ಗೆ ಮನೆ ಮಾಲೀಕರು ಹೊರಗಡೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಇಡೀ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಧಾವಿಸಿದ್ದಾರೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಭಯಭೀತ ವಾತಾವರಣ ನೆಲೆಸಿದ್ದು, ಚಿರತೆಯನ್ನು ಕೂಡಲೇ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಗರಕ್ಕೆ ಗ್ರಾಮವು ಸಮೀಪದಲ್ಲಿರುವುದರಿಂದ ರಾತ್ರಿ ವೇಳೆಯಲ್ಲಿಯೂ ಜನ ಸಂಚರಿಸುತ್ತಾರೆ. ಈ ವೇಳೆ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ..? ಒಂದು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗದಿದ್ದರೆ ಪ್ರಾಣ ರಕ್ಷಣೆಗಾಗಿ ನಾವೇ ಚಿರತೆಯನ್ನು ಕೊಲ್ಲುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

8ನೇ ಬಾರಿಗೆ ದಾಳಿ ಇಟ್ಟ ಚಿರತೆ
ಇನ್ನು ಗ್ರಾಮಸ್ಥರು ತಿಳಿಸಿರುವಂತೆ ಸತತ 8ನೇ ಬಾರಿಗೆ ಚಿರತೆ ದಾಳಿ ಮಾಡಿದ್ದು, ಈ ಹಿಂದೆ ಕುರಿ, ಕೋಳಿ ಮತ್ತು ನಾಯಿಗಳನ್ನು ಹೊತ್ತೊಯ್ದಿತ್ತು. ಈ ಬಾರಿ ಸಾಕು ನಾಯಿಯನ್ನು ತಿಂದು ಹಾಕಿದೆ ಎಂದು ಹೇಳಿದ್ದಾರೆ. ಅಲ್ಲದೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾವು ಪ್ರತಿನಿತ್ಯ ನಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.



ಕಳೆದ ರಾತ್ರಿ ಸುಮಾರು 3 ಗಂಟೆ ರಾತ್ರಿ ವೇಳೆ ಚಿರತೆ ದಾಳಿ ಮಾಡಿದ್ದು, ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ತಿಂದು ಹಾಕಿದೆ. ಸತತ 8ನೇ ಬಾರಿಗೆ ಚಿರತೆ ದಾಳಿ ಮಾಡಿದ್ದು, ಈ ಹಿಂದೆ ಸಾಕಷ್ಟು ಸಾಕು ಪ್ರಾಣಿಗಳನ್ನು ತಿಂದು ಹಾಕಿದೆ. ನಗರಕ್ಕೆ ಗ್ರಾಮ ಸಮೀಪವಿರುವುದರಿಂದ ರಾತ್ರಿ ವೇಳೆಯಲ್ಲಿಯೂ ಸಾಕಷ್ಟು ಗ್ರಾಮಸ್ಥರು ಬಂದುಹೋಗುವುದನ್ನು ಮಾಡುತ್ತಿರುತ್ತಾರೆ. ಸ್ಥಳೀಯ ಮುಖಂಡ ಸಿಪಿ ಯೋಗೀಶ್ವರ ಅವರಿಗೂ ನಾವು ವಿಚಾರ ತಿಳಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸುವ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದ್ದಾರೆ.
- ಭಾಸ್ಕರ್, ಗ್ರಾಮಸ್ಥರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com