ಟೋಲ್ ನೀಡಲು ನಿರಾಕರಣೆ: ಸಿಬ್ಬಂದಿಯಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಟೋಲ್ ಹಣ ಕಟ್ಟಲು ವಾಹನ ಸವಾರ ನಿರಾಕರಿಸಿದ್ದರಿಂದ ಟೋಲ್ ಸಿಬ್ಬಂದಿಯೋರ್ವ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ...
ಬೂದಿಗೆರೆ ಕ್ರಾಸ್ ಟೋಲ್ ಗೇಟ್
ಬೂದಿಗೆರೆ ಕ್ರಾಸ್ ಟೋಲ್ ಗೇಟ್

ಬೆಂಗಳೂರು: ಟೋಲ್ ಹಣ ಕಟ್ಟಲು ವಾಹನ ಸವಾರ ನಿರಾಕರಿಸಿದ್ದರಿಂದ ಟೋಲ್ ಸಿಬ್ಬಂದಿಯೋರ್ವ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಬೂದಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಮಂಜುನಾಥ್ ಮೇಲೆ ತೀವ್ರ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.

ಮಂಜುನಾಥ್ ಮೇಲಿನ ಹಲ್ಲೆಯಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮದ ನಿವಾಸಿಗಳು ಸಾಮೂಹಿಕವಾಗಿ ಟೋಲ್ ಗೇಟ್ ಮೇಲೆ ದಾಳಿ ಮಾಡಿದ್ದಾರೆ. ಟೋಲ್ ನ ಎಲ್ಲ ಗೇಟ್ ಗಳನ್ನು ಜಖಂಗೊಳಿಸಲಾಗಿದ್ದು, ಒಂದು ಕೊಠಡಿಗೆ ಬೆಂಕಿ ಹಚ್ಚಲಾಗಿದೆ. ಆಕ್ರೋಶಭರಿತ ಸ್ಥಳೀಯರು ಟೋಲ್ ನಲ್ಲಿದ್ದ ಎಲ್ಲ ಸಿಸಿಟಿವಿಗಳನ್ನು ಕಂಪ್ಯೂಟರ್ ಗಳನ್ನು ಮತ್ತು ಇತರೆ ಉಪಕರಣಗಳನ್ನು ಜಖಂಗೊಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅವಲಹಳ್ಳಿ ಪೊಲೀಸರು ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ವಿವರ
ಕಾಟಮ್ ನಲ್ಲೂರು ನಿವಾಸಿಯಾಗಿರುವ ಮಂಜುನಾಥ್ ಇಂದು ಬೆಳಗ್ಗೆ ಸುಮಾರು 9.30ರಿಂದ 9.45ರ ಸುಮಾರಿನಲ್ಲಿ ಬೂದಿಗೆರೆ ಕ್ರಾಸ್ ಟೋಲ್ ಗೇಟ್ ಮೂಲಕವಾಗಿ ಹೊಸಕೋಟೆಗೆ ತನ್ನ ಸಂಬಂಧಿಕರೊಂದಿಗೆ ಹೋಗುತ್ತಿದ್ದನು. ಈ ವೇಳೆ ಟೋಲ್ ಗೇಟ್ ಬಳಿ ಸಿಬ್ಬಂದಿಗಳು ಹಣ ಕೇಳಿದಾಗ ತಮ್ಮ ಬಳಿ ಇದ್ದ ಪಾಸ್ ಅನ್ನು ತೋರಿಸಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿ ನೀನು ಸ್ಥಳೀಯನಲ್ಲ. ಹಣ ಕೊಟ್ಟು ಹೋಗು ಎಂದು ಖಾರವಾಗಿ ಹೇಳಿದ್ದಾನೆ. ಆದರೆ ಹಣ ನೀಡಲು ನಿರಾಕರಿಸಿದ ಮಂಜುನಾಥ್ ತಮ್ಮ ಬಳಿ ಪಾಸ್ ಇದ್ದು, ಹಣ ನೀಡುವುದಿಲ್ಲ ಎಂದಾಗ ಟೋಲ್ ಸಿಬ್ಬಂದಿ ಬಾಯಿ ಬಂದಂತೆ ಅವಾಚ್ಯ ಶಬ್ಧಗಳಿಂದ ಮಂಜುನಾಥ್ ನನ್ನು ನಿಂಧಿಸಿದ್ದಾನೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿಯಾಗಿ ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಮಂಜುನಾಥ್ ಮೇಲೆ ತೀವ್ರ ಹಲ್ಲೆ ನಡೆಸಿದ ಟೋಲ್ ಸಿಬ್ಬಂದಿ ಆತನನ್ನು ಸಮೀಪದ ಕಚೇರಿಗೆ ಕರೆದೊಯ್ದು ಇತರೆ ಸಿಬ್ಬಂದಿಗಳೊಂದಿಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕೇವಲ ಮಂಜುನಾಥ್ ಅಷ್ಟೇ ಅಲ್ಲದೆ ಆತನ ಸಂಬಂಧಿಕರ ಮೇಲೂ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ಈ ವಿಚಾರವನ್ನು ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಉದ್ರಿಕ್ತಗೊಂಡ ಸ್ನೇಹಿತರು ಮತ್ತು ಸಂಬಂಧಿಕರು ಟೋಲ್ ಸಿಬ್ಬಂದಿ ಬಳಿ ಬಂದು ಕೇಳಿದಾಗ, ಅವರಿಗೂ ಅದೇ ರೀತಿಯ ಉತ್ತರ ನೀಡಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಸ್ಥಳೀಯರು ಟೋಲ್ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ್ದಾರೆ.

ಟೋಲ್ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯರು, ಎಲ್ಲ ಟೋಲ್ ಕೌಂಟರ್ ಗಳನ್ನು ಧ್ವಂಸಗೊಳಿಸಿದ್ದಾರೆ. ಇತ್ತ ಸ್ಥಳೀಯರ ಆಕ್ರೋಶ ಸ್ಫೋಟವಾಗುತ್ತಿದ್ದಂತೆಯೇ ಅತ್ತ ಟೋಲ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಟೋಲ್ ಗೇಟ್ ಬಿಟ್ಟು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪ್ರಸ್ತುತ ಅವಲಹಳ್ಳಿ ಪೊಲೀಸರು ದೌಡಾಯಿಸಿದ್ದು, ಲಾಠಿ ಪ್ರಹಾರ ನಡೆಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com